Advertisement

ವಿದ್ಯಾರ್ಥಿ ವೇತನಕ್ಕೆ ಕೊಕ್ಕೆ : ಎಐಡಿಎಸ್‌ಒ ಪ್ರತಿಭಟನೆ

10:59 AM Nov 08, 2019 | Team Udayavani |

ಧಾರವಾಡ: ಪ್ರಸಕ್ತ ಸಾಲಿನ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ ಕಡಿತಗೊಳಿಸುತ್ತಿರುವ ರಾಜ್ಯ ಸರ್ಕಾರದ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

Advertisement

ಕಲಾಭವನ ಮೈದಾನದಿಂದ ಡಿಸಿ ಕಚೇರಿ ವರೆಗೆ ವಿದ್ಯಾರ್ಥಿಗಳು ರ್ಯಾಲಿ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಮಹಾಂತೇಶ ಬಿಳೂರ ಮಾತನಾಡಿ, ಇಂದಿನ ಸಾಮಾಜಿಕ ಪರಿಸ್ಥಿತಿ ಹದಗೆಟ್ಟಿದೆ. ಒಂದೆಡೆ ಆರ್ಥಿಕ ಹಿಂಜರಿತದಿಂದ ಕಾರ್ಮಿಕರು ಸಹಸ್ರ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಳ್ಳುತ್ತಿದ್ದರೆ, ರೈತರು ಸಾಲಬಾಧೆ, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಪರದಾಡುತ್ತಿದ್ದಾರೆ. ಇನ್ನೊಂದೆಡೆ ದುಬಾರಿಯಾಗಿರುವ ಶಿಕ್ಷಣವನ್ನು ಮಕ್ಕಳಿಗೆ ದೊರಕಿಸಲು ಕಷ್ಟಪಡುತ್ತಿದ್ದಾರೆ. ಅದರಲ್ಲೂ ಈ ವರ್ಷ ನೆರೆ ಹಾವಳಿಯಿಂದಾಗಿ ಮನೆ-ಮಠ ಕಳೆದುಕೊಂಡು ಬೆಳೆಗಳು ನೀರುಪಾಲಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ರಾಜ್ಯದ ಜನರು ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ನೆರವು ನೀಡುವುದು ಸರ್ಕಾರದ ಕರ್ತವ್ಯ. ಅದರ ಬದಲಾಗಿ ಬಡಮಕ್ಕಳಿಗೆ ದೊರಕುತ್ತಿರುವ ಅಲ್ಪ ಸ್ವಲ್ಪ ವಿದ್ಯಾರ್ಥಿ ವೇತನವನ್ನು ಕಸಿದುಕೊಳ್ಳಲು ಸರ್ಕಾರ ಮುಂದಾಗಿರುವುದು ನಿಜಕ್ಕೂ ವಿದ್ಯಾರ್ಥಿಗಳಿಗೆ ಮಾಡಿದ ಅನ್ಯಾಯ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2019-20ನೇ ಸಾಲಿನ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ ಮಂಜೂರಾತಿಗೆ ಹೊಸ ವಿದ್ಯಾರ್ಥಿಗಳನ್ನು ಪರಿಗಣಿಸಿಲಾಗುವುದಿಲ್ಲ ಎಂದು ಆದೇಶ ಹೊರಡಿಸಿದೆ. ಈ ಹಿಂದೆ 2ರಿಂದ 10ನೇ ತರಗತಿ ವರೆಗೆ ಎಲ್ಲ ವಿದ್ಯಾರ್ಥಿಗಳಿಗೆ ಬಿಸಿಎಂ ಇಲಾಖೆಯಿಂದ ವಿದ್ಯಾರ್ಥಿ ವೇತನ ದೊರೆಯುತ್ತಿತ್ತು. ಆದರೆ ಈ ನೂತನ ಆದೇಶದಂತೆ ಅನುದಾನದ ಕೊರತೆಯ ನೆಪವೊಡ್ಡಿ ವಿದ್ಯಾರ್ಥಿ ವೇತನ ಕಡಿತಗೊಳಿಸಿರುವ ಸರ್ಕಾರದ ನಿರ್ಧಾರ ವಿದ್ಯಾರ್ಥಿಗಳನ್ನು ವಂಚಿಸುವಂತಿದೆ.

ಇದನ್ನು ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿದರು. ಜಿಲ್ಲಾ ಕಾರ್ಯದರ್ಶಿ ರಣಜೀತ್‌ ಧೂಪದ, ಜಂಟಿ ಕಾರ್ಯದರ್ಶಿ ಶಶಿಕಲಾ ಮೇಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಿಂಧೂ ಕೌದಿ, ಕಾರ್ತಿಕ್‌, ಬೀಸಪ್ಪ, ಕಾರ್ಯಕರ್ತರಾದ ಪ್ರವೀಣ, ಅರುಣ್‌, ಭೀಮೇಶ, ಶಿವಾನಂದ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next