Advertisement

ಸೀತಾರಾಮ ಶೆಟ್ಟಿಯವರಿಗೆ ಗೌರವಾರ್ಪಣೆ

06:40 PM Sep 19, 2019 | mahesh |

ತುಳು ರಂಗಭೂಮಿ ಮತ್ತು ತುಳು ಸಿನೆಮಾ ರಂಗದಲ್ಲಿ ಆರು ದಶಕಗಳ ಕಾಲ ಹಿನ್ನಲೆ ವ್ಯವಸ್ಥೆ, ನಿರ್ಮಾಣ ಕಾರ್ಯದಲ್ಲಿ ದುಡಿದು, ನಟಿಸಿ ಬದುಕು ಸವೆಸಿದ ರಂಗಕರ್ಮಿ ಜೆ. ಸೀತಾರಾಮ ಶೆಟ್ಟರಿಗೆ ಈಗ 80ರ ವರುಷ. ಅವರ ಅಭಿಮಾನಿ ಬಳಗ ಮಂಗಳೂರು ಪ‌ುರಭವನದಲ್ಲಿ ಸೆ. 22ರಂದು 80ನೇ ವರ್ಷದ ನೆನಪಿಗೆ ಗೌರವ ಸರ್ಮಪಣೆ ಸಮಾರಂಭವನ್ನು ಹಮ್ಮಿಕೊಂಡಿದೆ.

Advertisement

19ನೇ ಪ್ರಾಯದಲ್ಲೇ ರಂಗಭೂಮಿಗೆ ಕಾಲಿಟ್ಟ ಸೀತಾರಾಮ ಶೆಟ್ಟಿಯವರು ದಿ. ಕೆ.ಎನ್‌. ಟೇಲರ್‌ರವರ‌ ಜತೆ ಹೆಗಲಿಗೆ ಹೆಗಲು ಕೊಟ್ಟು ದುಡಿದು, ನಟಿಸಿದವರು. ಟೇಲರರ ಮತ್ತು ಶೆಟ್ಟರ ಸ್ನೇಹ ಸಂಗಮದ ಬೆಸುಗೆ ನಾಟಕದ ಕಥೆ ಹುಟ್ಟಿಕೊಳ್ಳುತ್ತಾ ಗಟ್ಟಿಯಾಯಿತು. ಇವರಿಬ್ಬರೊಳಗೆ ಯಾವಾಗಲೂ ನಾಟಕದ ಕತೆಯ ವಿಚಾರವೇ. ಅಲ್ಲಿಂದಲೇ ಶುರುವಾಯಿತು ಗಣೇಶ ನಾಟಕ ಸಭಾ ಸಂಘ ಸ್ಥಾಪನೆಯ ನಿರ್ಧಾರ. ಅದು 1958ರ ವರ್ಷ, ಆಗಿನಿಂದಲೇ ಶುರುವಾಯಿತು ಸೀತಾರಾಮರ ಕಲಾರಂಗದ ಜರ್ನಿ.

ನಾಟಕದ ವ್ಯವಸ್ಥೆ, ರಂಗ ಸಿದ್ಧತೆ, ಪ್ರದರ್ಶನದ ಹೂಣೆಗಾರಿಕೆ, ಕಲಾವಿದರನ್ನು ಒಟ್ಟು ಸೇರಿಸುವ ಮೊದಲಾದ ರಂಗ ಕಾರ್ಯಗಳ ಪರಿಣತರ ಸಾಲಿನಲ್ಲಿ ಸೀತಾರಾಮ ಒಬ್ಬರು. ಅಲ್ಲದೆ ಅಪತ್‌ಭಾಂಧವ ನಟನಾಗಿ ಅಭಿನಯಿಸಿರುವುದು ಇವರ ವಿಶೇಷತೆಯಲ್ಲಿ ಒಂದು. ನಾಟಕದ ಮೇಲಿರುವ ಗೌರವ ಶ್ರದ್ಧೆ,ನಿಷ್ಠೆ,ಪ್ರಾಮಾಣಿಕ ದುಡಿಮೆ ಸ್ವಾಮಿ ಭಕ್ತಿ ಇವೆಲ್ಲವು ಅವರಲ್ಲಿರುವ ಮೆಚ್ಚುವ‌ ಗುಣ.

ಊರಿಂದ ಊರಿಗೆ ದೋಣಿಯಲ್ಲಿ ಪ್ರಯಾಣಿಸಿ, ಎತ್ತಿನಗಾಡಿಯಲ್ಲಿ ರಂಗ ಪರಿಕರಗಳನ್ನು ಸಾಗಿಸಿಕೊಂಡು, ವಿದ್ಯುತ್‌ ಇಲ್ಲದ ಕಡೆಗಳಲ್ಲಿ ಗ್ಯಾಸ್‌ಲೈಟ್‌ ಪ್ರಕಾಶದಲ್ಲಿ ನಾಟಕವಾಡುತ್ತಿದ್ದ ಕಷ್ಟಕರವಾದ ಆ ದಿನಗಳಿಂದ ಹಿಡಿದು ಈಗಿನ ಅಧುನಿಕ ನಾಟಕ ರಂಗಭೂಮಿಯ ವ್ಯವಸಾಯದಲ್ಲೂ ನುರಿತ ಸೀತಾರಾಮರು. ಹಳ್ಳಿ, ಗ್ರಾಮ, ಪಟ್ಟಣ, ಜಿಲ್ಲೆ, ರಾಜ್ಯ ಸುತ್ತಾಡಿ ನಾಟಕ ಪ್ರದರ್ಶನದ ವ್ಯವಸ್ಥೆಗೊಳಿಸುವ ರಂಗಕರ್ಮಿಯಾಗಿ ಜೀವನ ಪೂರ್ತಿ ಕಳೆದರು.

ಇವರು ರಂಗ ಕಾರ್ಯದಲ್ಲಿ ದುಡಿದು, ಅಭಿನಯಿಸಿರುವ ಒಟ್ಟು ನಾಟಕಗಳ ಸಂಖ್ಯೆ ಮೂರು ಸಾವಿರ ದಾಟಬಹುದು. ಇವುಗಳಲ್ಲಿ ಅಧಿಕವಾಗಿ ಕೆ.ಎನ್‌. ಟೇಲರ್‌ರವರದೇ ಹೆಚ್ಚು, ಅಲ್ಲದೆ ಕೆಮೂ¤ರು ದೊಡ್ಡಣ ಶೆಟ್ಟಿ, ವಿಶು ಕುಮಾರ್‌, ಕೆ.ಬಿ. ಭಂಡಾರಿ, ದಾಮೋದರ ಬಂಗೇರ, ವಸಂತ ಕದ್ರಿ, ಪರ್ಸಿ ಉರ್ವ, ದೇವದಾಸ್‌ ಕಾಪಿಕಾಡ್‌, ಮನೋಹರ್‌ ಪ್ರಸಾದ್‌, ಜೆ.ಜೆ. ವರ್ಮ, ವಾಸುದೇವ ಕಾಮತ್‌, ಯಶವಂತ ಬೋಳೂರು ಮೊದಲಾದ ಇನ್ನೂ ಅನೇಕ ಲೇಖಕರ ನಾಟಕಗಳು. ಹಾಗೆಯೇ ಚಲನಚಿತ್ರದಲ್ಲೂ ಸೇವೆ ಸಲ್ಲಿಸಿರುವ ಸೀತಾರಾಮರು ತಮ್ಮದೇ ಆದ ತುಳು ನಾಟಕ ಸಭಾ ಎಂಬ ಕಲಾ ತಂಡ ಕಟ್ಟಿದ್ದಾರೆ. ಈ ಮೂಲಕ ಕೆಲವು ನಾಟಕಗಳನ್ನು ನಿರ್ದೇಶಿಸಿ, ಹೊಸ ಕಲಾವಿದರನ್ನು, ಸಂಗೀತಗಾರರನ್ನು ರಂಗಭೂಮಿಗೆ ಪರಿಚಯಿಸಿದ ಕೀರ್ತಿ ಇವರಿಗಿದೆ.

Advertisement

ತಮ್ಮ ಲಕ್ಷ್ಮಣ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next