ಹೊಸದಿಲ್ಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಹೆಮ್ಮೆ ಎನಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಶುಕ್ರಾವಾರ ಟ್ವೀಟ್ ಮಾಡಿದ್ದಾರೆ.
ಟ್ರಂಪ್ ಅವರ ಸಲಹೆಗಾರ್ತಿಯಾಗಿರುವ ಇವಾಂಕಾ ಅವರು ಹೈದರಾಬಾದ್‌ನಲ್ಲಿ ನವೆಂಬರ್ 28 ರಿಂದ 30 ರ ವರೆಗೆ ನಡೆಯಲಿರುವ ಜಾಗತಿಕ ವಾಣಿಜೋದ್ಯಮಿಗಳ ಶೃಂಗಸಭೆಯಲ್ಲಿ ಅಮೆರಿಕದ ನಿಯೋಗದ ನೇತೃತ್ವವನ್ನು ವಹಿಸಲಿದ್ದಾರೆ.
ಪ್ರಧಾನಿ ಮೋದಿ ಅವರು ಜೂನ್ ತಿಂಗಳಿನಲ್ಲಿ ಅಮೆರಿಕ ಪ್ರವಾಸಕೈಗೊಂಡಿದ್ದಾಗ ಇವಾಂಕಾ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದರು.
ಈ ಬಗ್ಗೆ ಸಂತಸ ವ್ಯಕ್ತ ಪಡಿಸಿ ಟ್ವೀಟ್ ಮಾಡಿರುವ ಇವಾಂಕಾ ‘ಭಾರತದಲ್ಲಿ ನಡೆಯುವ ಜಿಇಎಸ್ ಶೃಂಗದಲ್ಲಿ ಅಮೆರಿಕ ನಿಯೋಗದ ನೇತೃತ್ವ ವಹಿಸುವುದು, ಮೋದಿ ಅವರನ್ನು ಭೇಟಿಯಾಗುವುದು ಮತ್ತು ವಿಶ್ವದ ಉದ್ಯಮಿಗಳನ್ನು ಭೇಟಿಯಾಗುತ್ತಿರುವುದು ಹೆಮ್ಮೆ ಎನಿಸುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಮಗಳ ಟ್ವೀಟ್‌ಗೆ ಟ್ರಂಪ್ ‘ಈ ಬಾರಿ ಭಾರತದಲ್ಲಿ ನಡೆಯುವ ಉದ್ಯಮಿಗಳ ಶೃಂಗದಲ್ಲಿ ಮಹಿಳಾ ಉದ್ಯಮಿಗಳ ಬೆಂಬಲಿಗಳಾಗಿ ಇವಾಂಕಾ ಭಾಗಿಯಾಗುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ಮೋದಿ ಅವರು ‘ಇವಾಂಕಾ ಅವರನ್ನು ಎದುರು ನೋಡುತ್ತಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.
35 ರ ಹರೆಯದ ಇವಾಂಕಾ ಜಾರೆದ್ ಕುಶ್ನೇರ್ ಅವರನ್ನು ವಿವಾಹವಾಗಿ ಮೂವರು ಮಕ್ಕಳನ್ನು ಹೊಂದಿದ್ದಾರೆ.