ಮುಧೋಳ: ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡರೆ ಕೋವಿಡ್ ಸಾಂಕ್ರಾಮಿಕ ರೋಗದ ಭಯವಿಲ್ಲ ಎಂದು ಶ್ರೀ ಶಂಕರಾರೂಢ ಸ್ವಾಮೀಜಿ ಹೇಳಿದರು.
ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದ ಜನಹಿತ ಟ್ರಸ್ಟ್ ಮುಧೋಳ ವತಿಯಿಂದ ಹನುಮಾನ್ ದೇವಸ್ಥಾನದಲ್ಲಿ ಜರುಗಿದ ಸಂಜೀವಿನಿ ಗೌರವ ಸಭೆಯಲ್ಲಿ ಅವರು ಮಾತನಾಡಿದರು.
ಪಿಡಿಒ ಎಸ್.ವೈ ಅಂಬಿಗೇರ, ಡಾ| ಮಂಜುನಾಥ ಗಾಲಿ ಮಾತನಾಡಿ, ಕೋವಿಡ್ ರೋಗದ ಕುರಿತು ಆಲಸ್ಯ ಮಾಡಬೇಡಿ. ನೆಗಡಿ, ಕೆಮ್ಮು, ಜ್ವರ ಇದ್ದರೆ ಕೂಡಲೇ ತಾಲೂಕು ವೈದ್ಯಾಧಿಕಾರಿಗಳಿಗೆ ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ. ಬೇರೆ ರಾಜ್ಯಗಳಿಂದ ಆಗಮಿಸಿದವರು ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು ಎಂದರು.
ಜನಹಿತ ಟ್ರಸ್ಟ್ ಆಡಳಿತಾಧಿಕಾರಿ ವಿಠ್ಠಲ ಪರೀಟ (ಜಮಖಂಡಿ) ಮಾತನಾಡಿ, ಗ್ರಾಮದ ಜನರ ರಕ್ಷಣೆಗೆ ನಮ್ಮೂರಿನ ಯೋಧರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು, ಸ್ವಯಂಸೇವಕರು ಹಗಲಿರುಳು ಶ್ರಮಿಸಿದ್ದಾರೆ. 21 ದಿನಗಳವರೆಗೆ ನಿತ್ಯ ಬೆಳಗ್ಗೆಯಿಂದ ರಾತ್ರಿವರೆಗೆ ಸ್ವಯಂ ಚೆಕ್ ಪೋಸ್ಟ್ ನಿರ್ಮಿಸಿ ಜಿಲ್ಲೆಗೆ ಶಿರೋಳ ಗ್ರಾಮ ಮಾದರಿಯಾಗಿದೆ. ಜನರ ಜೀವ ಉಳಿಸಲು ಶ್ರಮಿಸಿದ ಕೋವಿಡ್ ವಾರಿಯರ್ಸ್ ಗಳಿಗೆ ಟ್ರಸ್ಟ್‌ದಿಂದ ಸಂಜೀವನಿ ಗೌರವ ನೀಡಲಾಗುತ್ತಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸ್‌ಗಳಿಗೆ ಸನ್ಮಾನಿಸಿ ಸಂಜೀವಿನಿ ಗೌರವ ನೀಡಲಾಯಿತು.
ಗ್ರಾಪಂ ಅಧ್ಯಕ್ಷ ಸುರೇಶ ಢವಳೇಶ್ವರ, ಸೈನಿಕರಾದ ಅಡವೇಶ ಗಣಿ, ಮಾಳಪ್ಪ ಭಜಂತ್ರಿ, ಫಾರ್ಮಸಿ ವೆಂಕಟೇಶ ಜಾಲವಾದಿ, ಶಂಕರ ಲಮಾಣಿ, ಬಸವಂತ ಕಾಂಬಳೆ, ಅರುಣ ವಂದಾಲ, ಪ್ರಕಾಶ ಕೋಳಿಗುಡ್ಡ, ಮಹಾಂತೇಶ ವಂದಾಲ, ಕಾಡು ಜಕ್ಕನ್ನವರ, ಮಹಾಂತೇಶ ಕೊಣ್ಣೂರ, ಶ್ಯಾಮಲಾ ಪರೀಟ ಇತರರಿದ್ದರು.