Advertisement

ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅಗಲಿಕೆಗೆ ಗಣ್ಯರ ಕಂಬನಿ

06:41 AM Jan 22, 2019 | |

ಬೆಂಗಳೂರು: ತುಮಕೂರಿನ ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿರುವುದಕ್ಕೆ ನಾಡಿನ ಹಲವಾರು ಸಂಘ ಸಂಸ್ಥೆಗಳು, ಗಣ್ಯರು, ರಾಜಕೀಯ ನಾಯಕರು ಹಾಗೂ ಅಧಿಕಾರಿಗಳು ಕಂಬನಿ ಮಿಡಿದಿದ್ದಾರೆ. ತ್ರಿವಿಧ ದಾಸೋಹಿ, ಆಧ್ಯಾತ್ಮ ಚೇತನ ಮರೆಯಾಗಿರುವುದರಿಂದ ರಾಜ್ಯ ಮಾತ್ರವಲ್ಲದೆ, ಇಡೀ ದೇಶವೇ ಅನಾಥವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಗಣ್ಯರು, ಶ್ರೀಗಳಿಗೆ ಭಾರತರತ್ನ ಗೌರವ ನೀಡುವಂತೆ ಆಗ್ರಹಿಸಿದ್ದಾರೆ.

Advertisement

ಬೆಂಗಳೂರು ವಕೀಲರ ಸಂಘ ಸಂತಾಪ: ಶತಾಯುಷಿ, ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾಗಿರುವುದಕ್ಕೆ ಬೆಂಗಳೂರು ವಕೀಲರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಶಿಕ್ಷಣದ ಮೂಲಕ ಜನರಿಗೆ ಬದುಕು ರೂಪಿಸಿಕೊಟ್ಟ ಸ್ವಾಮೀಜಿ, ದಾಸೋಹ ತಣ್ತೀಕ್ಕೆ ಅರಿವು, ಆಧ್ಯಾತ್ಮ ಮತ್ತು ಅಕ್ಷರವನ್ನೂ ಸೇರಿಸಿದವರು. ಅವರ ಅಗಲಿಕೆಗೆ ಸಂಘ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಸ್‌ಕ್ಲಬ್‌ನಿಂದ ಸಂತಾಪ: ಶತಾಯುಷಿ, ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ನಿಧನಕ್ಕೆ ಬೆಂಗಳೂರು ಪ್ರಸ್‌ಕ್ಲಬ್‌ ಸಂತಾಪ ಸೂಚಿಸಿದೆ. ಕಳೆದ ವರ್ಷವಷ್ಟೇ ಪ್ರಸ್‌ಕ್ಲಬ್‌ ಆಫ್ ಬೆಂಗಳೂರಿನ 50ನೇ ವರ್ಷಾಚರಣೆ ಸಂದರ್ಭದಲ್ಲಿ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ “ಶತಮಾನದ ಶ್ರೀ’ ಗೌರವ ನೀಡಿ ವಂದಿಸಲಾಗಿತ್ತು. ಶ್ರೀಗಳು ದೈಹಿಕವಾಗಿ ನಮ್ಮೊಂದಿಗೆ ಇಲ್ಲದೆ ಇದ್ದರೂ ಅವರ ಕಾಯಕಯೋಗ, ಅಕ್ಷರ ದಾಸೋಹದ ಚೇತನ ಎಂದೆಂದಿಗೂ ನಮಗೆ ಪ್ರೇರಣೆಯಾಗಿರುತ್ತದೆ ಎಂದು ಬೆಂಗಳೂರು ಪ್ರಸ್‌ಕ್ಲಬ್‌ ಅಧ್ಯಕ್ಷ ಕೆ.ಸದಾಶಿವ ಶೆಣೈ ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿ ಸಂತಾಪ: ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಸಂತಾಪ ಸೂಚಿಸಿದೆ. ಲಕ್ಷಾಂತರ ಬಡಮಕ್ಕಳಿಗೆ ಅನ್ನ, ವಿದ್ಯೆ ನೀಡುವ ಮೂಲಕ ನಿಜವಾದ ಶಿವನಾದವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿ. ಶ್ರೀಗಳ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಸಮಿತಿ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ ಕೋರಿದ್ದಾರೆ.

ಕಸಾಪ ಅಧ್ಯಕ್ಷರ ಸಂತಾಪ: ಡಾ.ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿರುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ್‌ ಸಂತಾಪ ವ್ಯಕ್ತಪಡಿಸಿದ್ದಾರೆ. ಜೀವನದುದ್ದಕ್ಕೂ ತ್ರಿವಿಧ ದಾಸೋಹ ತಣ್ತೀವನ್ನು ಆಚರಿಸಿಕೊಂಡು ಬಂದ ಶ್ರೀಗಳು ಲಿಂಗೈಕ್ಯರಾಗಿ ನಮ್ಮೆಲ್ಲರ ಮನಸ್ಸಿನಲ್ಲಿ ಬಹುದೊಡ್ಡ ಶೂನ್ಯ ಬಿಟ್ಟು ಹೋಗಿದ್ದಾರೆ. ಬಸವಪಥಗಾಮಿಯಾಗಿದ್ದ ಅವರು, ಸಂತರ ಸಂತ ಎನಿಸಿದ್ದರು. ಅವರ ಅಗಲಿಕೆಯಿಂದ ಕನ್ನಡ ನಾಡು ಬಹುದೊಡ್ಡ ಆಧ್ಯಾತ್ಮಿಕ ಚೈತನ್ಯವನ್ನು ಕಳೆದುಕೊಂಡಂತಾಗಿದೆ ಎಂದು ಮನು ಬಳಿಗಾರ್‌ ತಿಳಿಸಿದ್ದಾರೆ.

Advertisement

ಲಕ್ಷಾಂತರ ಮಕ್ಕಳ ಬಾಳ ಬೆಳಕಾಗಿ, ತ್ರಿವಿಧ ದಾಸೋಹಗಳ ಮಾದರಿಯಾಗಿದ್ದ ಸಿದ್ಧಗಂಗಾ ಶ್ರೀಗಳು ಕನ್ನಡಿಗರ ಆಸ್ತಿ. ಅವರು ಭೌತಿಕವಾಗಿ ನಮ್ಮ ನಡುವೆ ಚಿರಮೌನಿಯಾಗಿದ್ದಾರೆ. ಅವರ ನಡೆ, ನುಡಿ, ಶರಣ ತತ್ವ ಪ್ರಸಾರ ಎಲ್ಲರಿಗೂ ಮಾದರಿ.
-ಜಿ.ಬಿ. ಪಾಟೀಲ್‌, ಜಾಗತಿಕ ಲಿಂಗಾಯತ ಮಹಾಸಭಾ ಪ್ರ.ಕಾರ್ಯದರ್ಶಿ

ಶ್ರೀಗಳ ಅಗಲಿಕೆಯಿಂದ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ. ಸ್ವಾಮೀಜಿಗಳ ತ್ರಿವಿಧ ದಾಸೋಹ ಎಲ್ಲ ಮಠ ಮಾನ್ಯಗಳಿಗೂ ಮಾದರಿ. ಸೇವೆಯನ್ನೇ ಉಸಿರಾಗಿಸಿಕೊಂಡು ಬದುಕಿನ ಶ್ರೀಗಳಿಗೆ ಕೇಂದ್ರ ಸರ್ಕಾರ ಭಾರತ ರತ್ನ ಗೌರವ ನೀಡಬೇಕು.
-ಬಸವರಾಜ್‌ ದಿಂಡೂರು, ವೀರಶೈವ ಲಿಂಗಾಯತ ಒಕ್ಕೂಟದ ಅಧ್ಯಕ್ಷ

ಲಕ್ಷಾಂತರ ಬಡ ಮಕ್ಕಳಿಗೆ ವಿದ್ಯೆ, ವಸತಿ, ಅನ್ನ ಒದಗಿಸಿದ ತ್ರಿವಿಧ ದಾಸೋಹಿ ಶ್ರೀಗಳು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಕೋಟ್ಯಂತರ ಭಕ್ತರಿಗೆ ಆಗಿರುವ ದುಖಃ ಭರಿಸುವ ಶಕ್ತಿಯನ್ನು ಬಸವಾದಿ ಶರಣರು ದಯಪಾಲಿಸಲಿ.
-ಎಚ್‌.ಎಂ. ರೇಣುಕ ಪ್ರಸನ್ನ, ಅಖೀಲ ಭಾರತ ವೀರಶೈವ ಮಹಾಸಭೆ ಕಾರ್ಯದರ್ಶಿ 

ಲಕ್ಷಾಂತರ ಬಡ ಮಕ್ಕಳ ಬಾಳಿಗೆ ಅಕ್ಷರ, ಅನ್ನ ದಾಸೋಹದ ಮೂಲಕ ಬೆಳಕು ನೀಡಿರುವ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿರುವುದಕ್ಕೆ ತೀವ್ರ ದುಖವಾಗಿದೆ. ಶ್ರೀಗಳಿಗೆ ಭಾರತ ರತ್ನ ನೀಡಿ ಗೌರವಿಸಬೇಕು.
-ಉಮೇಶ್‌ ಪಾಟೀಲ್‌, ಅಖೀಲ ಭಾರತ ವೀರಶೈವ ಮಹಾಸಭೆ ಯುವ ಅಧ್ಯಕ್ಷ

ಸಿದ್ಧಗಂಗೆಯನ್ನು ಜ್ಞಾನಗಂಗೆಯನ್ನಾಗಿಸಿದ ಶ್ರೇಷ್ಠ ಸಂತ ಶ್ರೀ ಶಿವಕುಮಾರ ಸ್ವಾಮೀಜಿ ನಮ್ಮೊಂದಿಗಿಲ್ಲ ಎಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಕಾಯಕವೇ ಕೈಲಾಸ ಎಂಬ ತತ್ವ ಪರಿಪಾಲಿಸಿದ ತ್ರಿವಿಧ ದಾಸೋಹ ಮೂರ್ತಿಗೆ ಭಕ್ತಿಪೂರ್ವಕ ನಮನಗಳು.
-ಟಿ.ಎ.ಶರವಣ, ವಿಧಾನ ಪರಿಷತ್‌ ಸದಸ್ಯ 

ಸರಳ ಜೀವಿಯಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿ, ತಮ್ಮ ಪ್ರತಿಮೆ ಅಥವಾ ಹೆಸರಿನಲ್ಲಿ ಕಟ್ಟಡ ನಿರ್ಮಿಸುವುದನ್ನು ಇಷ್ಟಪಡುತ್ತಿರಲಿಲ್ಲ. ಬೇಕಿದ್ದರೆ ಆ ಹಣವನ್ನು ಮಠಕ್ಕೆ ನೀಡಿ, ಅದರಿಂದ ಮಕ್ಕಳಿಗೆ ಶಿಕ್ಷಣ, ದಾಸೋಹ ಹಾಗೂ ವಸತಿ ಒದಗಿಸಬಹುದು ಎನ್ನುತ್ತಿದ್ದರು. ಶ್ರೀಗಳ ಅಗಲಿಕೆಯಿಂದ ರಾಜ್ಯ ಬಡವಾಗಿದ್ದು, ವಯಕ್ತಿಕವಾಗಿ ಮನಸ್ಸಿಗೆ ತೀವ್ರ ನೋವಾಗಿದೆ.
-ಗಂಗಾಂಬಿಕೆ, ಬಿಬಿಎಂಪಿ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next