Advertisement

ರೊಕ್ಕ, ಲೆಕ್ಕ, ಬುಕ್ಕ ಸರಿಯಿದ್ರ ಒಕ್ಕಲ ಹಕ್ಕಲಾಗಲ್ಲ…! ಶಿವಯ್ಯ ಮುತ್ಯ ಬೆಂಕಿ ಭವಿಷ್ಯ

05:13 PM Apr 11, 2024 | Team Udayavani |

ವಿಜಯಪುರ : ಲೆಕ್ಕ, ರೊಕ್ಕ, ಬುಕ್ಕ ಸರಿ ಇದ್ರ ಒಕ್ಕಲೆಂದು ಹಕ್ಕಲಾಗುದಿಲ್ಲ. ಈ ವರ್ಷ ಶಿವ ಮಾತ್ರ ಒಂಟಿಗಾಲಿಲೆ ನಿಂತಾನ, ಜಯ-ಅಪಜಯದ ಎಲ್ಲಾ ಸಮ್ಮಿಶ್ರ ಐತಿ. ಹಿಂಗಾಗಿ ವಿರಸಕ್ಕಿಂತ ಸರಸವಿರಲಿ, ಸಮನ್ವಯದ ಭಾವ ಇರಲಿ.

Advertisement

ಗುರುವಾರ ಹೀಗೆ ಕಾಲಜ್ಞಾನದ ನುಡಿದಿರುವವರು ವಿಜಯಪುರ ತಾಲೂಕಿನ ಕತಕನಹಳ್ಳಿಯ ಚಕ್ರವರ್ತಿ ಬಬಲಾದಿ ಸದಾಶಿವ ಶಿವಯೋಗಿ ಪೀಠಾಧಿಪತಿ ಶಿವಯ್ಯ ಮುತ್ಯಾ. ಉತ್ತರ ಕರ್ನಾಟಕ ಭಾಗದಲ್ಲಿ ಬೆಂಕಿ ಭವಿಷ್ಯ ಎಂದೇ ಹೆಸರಾಗಿರುವ ಕತ್ನಳ್ಳಿ ಸದಾಶಿವ ಮುತ್ಯಾನ ಮಠದ ಕಾಲಜ್ಞಾನ ಆಧಾರಿತವಾಗಿ ನುಡಿದಿರುವ ಯುಗಾದಿ ಬೆಂಕಿ ಭವಿಷ್ಯ.

ಶಿವ ಮಾತ್ರ ಒಂಟಿಗಾಲಿಲೆ ನಿಂತಾನ, ಹೆಂಗ ಮಾಡ್ತೀರಿ ನೋಡ್ರಿ. ರೋಗ-ಆರೋಗ್ಯ, ಸಿಟ್ಟು-ಶಾಂತಿ, ಸಹನೆ-ಅಸಹನೆ, ಆರೋಗ್ಯ-ಅನಾರೋಗ್ಯ ಇವೆಲ್ಲ ಸಮ್ಮಿಶ್ರ ಐತಿ. ಸರಗೆರಿ-ಸೆರಮನಿ ಆಟದಂಗ ಅದರಾಗಿಂದ ಕಡ್ಯಾಕ ಆಗಬೇಕ, ಹೆಂಗ್ ಕಡ್ಯಾಕ ಆಕ್ಕೀರಿ ನೋಡ್ರಿ, ಏನ್ ಮಾಡ್ತೀರಿ ನೋಡ್ರಿ, ಸಮ್ಮಿಶ್ರದಿಂದ ಕಡ್ಯಾಗ ಆಗಬೇಕಂದರ ಹೆಂಗ ಮಾಡ್ತೀರಿ ನೋಡ್ರಿ ಎಂದು ಎಚ್ಚರಿಸಿದ್ದಾರೆ.

ಗಂಡ-ಹೆಂಡ್ರ ನಡುವ ಕೂಸ ಘಾಸಿ ಆದಂಗ ಆಕೈತಿ. ಈ ವರ್ಷ ಹೊಸ ಬೆಸಕಿ ಬರತೈತಿ, ಯಾರ್ಯಾರಿಗೆ ಬೆಸಕಿ ಹಾಕತೈತಿ, ಯಾರನ್ನ ಕೂಡಸತೈತಿ, ಯಾರನ್ನ ಅಗಲಸತೈತಿ ತಿಳಿದಿಲ್ಲ. ಎಲ್ಲದರಿಂದ ನೀವ್ ಕಡ್ಯಾಕ ಆಗಬೇಕಂದ್ರ ಕತಕನಹಳ್ಳಿ ಸದಾಶಿವನ ಮೊರೆ ಹೋಗಿ, ಸೇವಾ ಮಾಡಿದರ ಉಳಿತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.

ಪಂಚ ಮಹಾಭೂತಗಳು, ಪೃಥ್ವಿ, ಆಕಾಶ, ಬೆಂಕಿ, ವಾಯು, ವರುಣ ಯಾವ್ಯಾವ ರೀತಿ, ಯಾರ್ಯಾರ ಮ್ಯಾಲೆ ಹೆಂಗ ಸಿಟ್ ತೀರಿಸಿಕೊಳ್ಳತಾವ ಅಂತ ಹೇಳಾಕ ಬರೂದಿಲ್ಲ. ಪಂಚ ಮಹಾಭೂತಗಳ ಕ್ರೋಧದಿಂದ ಉಳಿಯಬೇಕಿದ್ದಲ್ಲಿ ಚಕ್ರವರ್ತಿ ಸದಾಶಿವನ ಕೃಪೆ ಅಗತ್ಯ ಎಂದಿದ್ದಾರೆ.

Advertisement

ಲೆಕ್ಕ, ರೊಕ್ಕ, ಬುಕ್ಕ ಸರಿ ಇದ್ರ ಒಕ್ಕಲೆಂದು ಹಕ್ಕಲಾಗುದಿಲ್ಲ. ವಿರಸಕ್ಕಿಂತ ಸರಸವಿರಲಿ. ಎಲ್ಲರೂ ನನ್ನವರೆಂಬ ಸಮನ್ವಯ ಭಾವ ಇರಲಿ, ರೋಗ-ರುಚಿನ ಹೆಚೈತಿ. ಪ್ರಾಣಿ-ಪಕ್ಷಿ ಅಲ್ಲೋಕ ಕಲ್ಲೋಲ ಆಕೈತಿ. ಕಾಡಿನಾಗಿದ್ದ ಪ್ರಾಣಿ ನಾಡಿನ್ಯಾಗ, ನಾಡಿನ್ಯಾಗ ಇದ್ದ ಪ್ರಾಣಿ ಕಾಡಿನ್ಯಾಗ. ಇದರಿಮದ ಪಾರಾಗಬೇಕಂದ್ರ ಚಕ್ರವರ್ತಿ ಸದಾಶಿವನ ಒಲುಮೆಗೆ ಪಾತ್ರರಾಗಬೇಕು ಎಂದು ಸೂಚಿಸಿದ್ದಾರೆ.

ಬೆಳ್ಳಗಿದ್ದುದೆಲ್ಲ ಹಾಲ ಅನ್ನಾಕ ಹೋಗಬ್ಯಾಡ್ರಿ. ಹಾಲು ಬೆಳ್ಳಗ ಐತಿ, ಕಳ್ಳಿಹಾಲು ಬೆಳ್ಳಗಾ ಐತಿ, ಸುಣ್ಣದ ನೀರೂ ಬೆಳ್ಳಗ ಕಾಣಸತೈತಿ. ಆದರ ಕಳ್ಳಿಹಾಲು, ಸುಣ್ಣದ ನೀರು ಬೆಳ್ಳಗಿದ್ರೂ ಹಾಲ ಆಕೈತೇನ್, ಹಾಲು ಹಾಲ, ಕಳ್ಳಿ ಹಾಲು ಕಳ್ಳಿಹಾಲ, ಸುಣ್ಣದ ನೀರು ಸುಣ್ಣದ ನೀರಾ. ಇಂಥವ್ನ ಯಾರೂ ನಂಬಾಕ ಹೋಗಬ್ಯಾಡ್ರಿ ಎಂದು ಭವಿಷ್ಯದ ಬದುಕಿಗೆ ಇಡಬೇಕಿರುವ ಅಡಿಯ ಕುರಿತು ಕಾಲಜ್ಞಾನ ಆಧಾರಿತ ಧರ್ಮ ಸಂದೇಶ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next