Advertisement

ಗಣತಿ ನಡೆಸಿದ ಗೌರವ ಶಿಕ್ಷಕರಿಗೆ ಸಂಭಾವನೆ ಇನ್ನೂ ಬಂದಿಲ್ಲ !

06:20 AM Jan 13, 2018 | Team Udayavani |

ಬೆಳ್ಮಣ್‌: 2015ರ  ಏಪ್ರಿಲ್‌-ಮೇನಲ್ಲಿ ಸರಕಾರದ ಒತ್ತಾಯ ಮೇರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಏನೋ ನಡೆಯಿತು. ಆದರೆ ಇದರಲ್ಲಿ ಹೆಚ್ಚುವರಿ ಸಹಾಯಕರಾಗಿ ಕಾರ್ಯನಿರ್ವಹಿಸಿದ ಗೌರವ ಶಿಕ್ಷಕಿಯರಿಗೆ ಸಂಭಾವನೆಯೇ ಬಂದಿಲ್ಲ! ಗಣತಿ ನಡೆದು ಎರಡೂ ವರೆ ವರ್ಷವಾದರೂ ಕಾರ್ಕಳ ತಾಲೂಕಿನ 18 ಮಂದಿಗೆ ನಯಾಪೈಸೆ ಸಂಭಾವನೆ ನೀಡಿಲ್ಲ. ಇದು ಸಂಬಂಧಪಟ್ಟ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.  

Advertisement

ಪತ್ರಕರ್ತ ಶಿಕ್ಷಕನ ಮನವಿ
ಸಂಭಾವನೆಗೆ ಇಲಾಖೆಗಳಿಗೆ ಪತ್ರ, ಮನವಿ ಇತ್ಯಾದಿ ಎಲ್ಲ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ  ನಿವೃತ್ತ ಶಿಕ್ಷಕ ಬಿ. ಪುಂಡಲೀಕ ಮರಾಠೆ 2016ರ ಡಿ.31ರಂದು ಸಮಾಜ ಕಲ್ಯಾಣ ಸಚಿವ ಸಚಿವ ಎಚ್‌. ಆಂಜನೇಯ ಅವರಿಗೆ ಉಡುಪಿಯಲ್ಲಿ ಮನವಿ ನೀಡಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿ, ಸಂಬಂಧಿಸಿದ ಕಚೇರಿ ಮುಖ್ಯಸ್ಥರ ಫೋನ್‌ ನಂಬರ್‌ ನೀಡಿದ್ದರು. ಆದರೂ ಈ ಬಗ್ಗೆ ಕೇಳಿದಾಗೆಲ್ಲ ಜಾರಿಕೊಳ್ಳುವ ಉತ್ತರಗಳೇ ಬರುತ್ತಿವೆ.
  
ಪಾವತಿಸಬೇಕಾದ್ದು ಎಷ್ಟು?
18 ಗಣತಿಗಾರರಿಗೆ ಪಾವತಿಯಾಗಬೇಕಾದ್ದರಲ್ಲಿ ಲಕ್ಷಗಟ್ಟಲೆ ಮೊತ್ತವೇನೂ ಇಲ್ಲ. ತಲಾ 5500 ರೂ.ಗಳತೆ 99 ಸಾವಿರ ರೂ. ಮಾತ್ರ. ಲಕ್ಷ , ಕೋಟಿ ಲೆಕ್ಕದಲ್ಲೇ ಮಾತನಾಡುವ ಸರಕಾರ, ಈ ಮೊತ್ತವನ್ನೂ ನೀಡಲು ತಿಣುಕಾಡುತ್ತಿದೆ.

ವರ್ಷ ಕಳೆದರೂ ಬಾರದ ಸಂಭಾವನೆ
ಕಾರ್ಕಳ ತಹಶೀಲ್ದಾರ್‌ ಆದೇಶ (ನಂ.ಸಿಎನ್‌ಎಸ್‌ಸಿಆರ್‌ 01/2014-15, ದಿನಾಂಕ 10-04-2015)ರ ಪ್ರಕಾರ ಗಣತಿ ಕಾರ್ಯಕ್ಕೆ ಮೀಸಲು ಸಿಬಂದಿಯಾಗಿ ಆಯಾ ಪ್ರದೇಶದ ಶಾಲೆಗಳ ಗೌರವ ಶಿಕ್ಷಕಿಯರನ್ನು ನೇಮಕ ಮಾಡಲಾಗಿತ್ತು. ತರಬೇತಿ ವೇಳೆ ತಹಶೀಲ್ದಾರ್‌ ಮತ್ತು ನೋಡಲ್‌ ಅಧಿಕಾರಿಗಳು ಸಾಮಾನ್ಯ ಗಣತಿದಾರರಿಗೆ ನೀಡುವಷ್ಟೇ ಗೌರವ ಸಂಭಾವನೆ ನೀಡುವುದಾಗಿ ಹೇಳಿದ್ದರು. ಇತರ ಎಲ್ಲರಿಗೂ ಒಂದೆರಡು ತಿಂಗಳಲ್ಲಿ ಗೌರವಧನ ಹಾಗೂ ಹೆಚ್ಚುವರಿ ರಜೆ ಸೌಲಭ್ಯವನ್ನು ಇಲಾಖೆ ನೀಡಿತ್ತು. ಆದರೆ ಅವರೊಂದಿಗೇ ಕೆಲಸ ಮಾಡಿದ 18 ಶಿಕ್ಷಕಿಯರಿಗೆ ವರ್ಷ ಕಳೆದರೂ ಸಂಭಾವನೆ ನೀಡಲಾಗಿಲ್ಲ.  

ಕನಸಿನ ಮಾತು!
ಗಣತಿ ಮಾಡಿದ ಗೌರವ ಶಿಕ್ಷಕಿಯರಿಗೆ ಗೌರವ ಧನ ಲಭಿಸುವ ಲಕ್ಷಣ ಕ್ಷೀಣವಾಗಿದೆ. ಜನಪ್ರತಿನಿಧಿಗಳೂ ಚುನಾವಣೆ ಕಸರತ್ತಿನಲ್ಲೇ ಈಗ ಬ್ಯುಸಿಯಾಗುತ್ತಿರುವುದರಿಂದ ಅವರಿಂದ ನ್ಯಾಯಸಿಗುವುದು ಕನಸಿನ ಮಾತಾಗಿದೆ.

ಪುಂಡಲೀಕ ಮರಾಠೆ, 
ನಿವೃತ್ತ ಶಿಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next