ಹಿಂದೂಸ್ತಾನಿ ಸಂಗೀತದ ಕ್ಷೇತ್ರಕ್ಕೆ ಮಂಗಳೂರಿನ ದೊಡ್ಡ ಕೊಡುಗೆ – ಪಂಡಿತ್ ಉಪೇಂದ್ರ ಭಟ್ಟರು. ಕಳೆದ ಮೂರು ದಶಕಗಳಲ್ಲಿ ಪ್ರಮುಖ ಗಾಯಕರಾಗಿ ಗೌರವ ಸಂಪಾದಿಸಿದ ಭಟ್ಟರು ಮೂಲತಃ ಮಂಗಳೂರಿನ ಗೌಡ ಸಾರಸ್ವತ ಸಮಾಜದ ಪುರೋಹಿತ ಅರ್ಚಕ ವೇದಮೂರ್ತಿ ಪದ್ಮನಾಭ ಭಟ್ ಹಾಗೂ ಪದ್ಮಾವತಿ ಭಟ್ಟ ಇವರ ಪುತ್ರ.
ವೃತ್ತಿಯಲ್ಲಿ “ಭಟ್ ಮಾಮ್’ ಆಗಿದ್ದರೂ ಸಂಗೀತದಲ್ಲಿ ರಾಜ ಪುರೋಹಿತರಾಗಿ ಬೆಳೆದ ಇವರಿಗೆ ಈ ಬಾರಿ ಕಲ್ಯಾಣಪುರ ವೆಂಕಟರಮಣ ದೇವಳದಲ್ಲಿ ವೇ.ಮೂ. ಚೇಂಪಿ ರಾಮಚಂದ್ರ ಅನಂತ ಭಟ್ ಇವರ ನೇತೃತ್ವದಲ್ಲಿ ಅನಂತ ವೈದಿಕ ಕೇಂದ್ರದ ಮೂಲಕ ಶ್ರೀ ಕೈವಲ್ಯ ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀ ಗುರು ಮಹಾರಾಜರ ಕರಕಮಲಗಳಿಂದ ಪುರಸ್ಕಾರ ಪ್ರದಾನ ನಡೆದಿದೆ.
ಸಂಗೀತದ ಆರಂಭಿಕ ಶಿಕ್ಷಣವನ್ನು ಪ್ರಸಿದ್ಧ ಗುರು ವಿ| ನಾರಾಯಣ ಪೈ ಅವರಿಂದ ಹಾಗೂ ಮಾಧವ ಗುಡಿ ಅವರಿಂದ ಪಡೆದ ಭಟ್ಟರು ಬಾಲ್ಯದಲ್ಲೇ ಮಹಾಗಾಯಕ ಭೀಮಸೇನ ಜೋಶಿಯವರ ಆರಾಧಕರಾಗಿದ್ದರು. 1980ರಲ್ಲಿ ಪುಣೆಗೆ ಹೋಗಿ ನೆಲೆಸಿ ಭೀಮಸೇನ ಜೋಶಿಯವರ ಆಪ್ತಶಿಷ್ಯರಾಗಿ ಕೊನೆತನಕ ಅವರೊಂದಿಗೆ ಇದ್ದು ಗುರು ಸೇವೆ ಮಾಡಿ ಧನ್ಯತೆ ಕಂಡವರು. “ಗುರು ಭೀಮಸೇನ ಜೋಶಿಯವರ ಪರಮಾನುಗ್ರಹ -ಆಶೀರ್ವಾದಗಳಿಂದ ಅವರ ಶೈಲಿಯಲ್ಲಿಯೇ ಗಾಯನ ಮಾಡುವ ಭಾಗ್ಯ ನನ್ನದಾಯಿತು’ ಎಂದವರು ಅಭಿಮಾನದಿಂದ ಹೇಳುತ್ತಾನೆ.
ಮಂಗಳೂರಿನಲ್ಲಿ ಹಲವು ಸಂಗೀತ ಕಛೇರಿ, ಭಾವಗೀತ, ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಿದ್ದ ಉಪೇಂದ್ರ ಭಟ್ಟರು ಗುರುಗಳಡಿ ಪಳಗಿ ರಾಗ ಸ್ವರ ಭಾವ, ಮಂಡನೆಗಳ ಸೂಕ್ಷ್ಮಗಳನ್ನು ಅರಗಿಸಿಕೊಂಡು 1980ರಿಂದ ಪ್ರಮುಖ ಗಾಯಕರಾದರು. “ಸಂಗೀತ ವಿಶಾರದ’, “ಸಂಗೀತ ಅಲಂಕಾರ’ ಉಪಾಧಿಗಳ ಜತೆಗೆ ಸ್ನಾತಕೋತ್ತರ ಗಂಧರ್ವ ಮಹಾವಿದ್ಯಾಲಯದ ಪದವಿಯನ್ನೂ ಗಳಿಸಿದರು. ಆಕಾಶವಾಣಿ, ದೂರದರ್ಶನಗಳಲ್ಲಿ, ದೇಶದ ಪ್ರತಿಷ್ಠಿತ ಸಂಗೀತ ಸಭಾಗಳಲ್ಲಿ, ಉತ್ಸವ ವೇದಿಕೆಗಳಲ್ಲಿ ಕಛೇರಿ ನೀಡಿದ್ದಾರೆ.
1979ರಲ್ಲಿ ಲಂಡನ್‌ನಲ್ಲಿ ಹಿಂದೂಸ್ತಾನಿ ಕಛೇರಿ ನೀಡಿದ ಭಟ್ಟರು ಅಮೆರಿಕ, ಮಧ್ಯಪೂರ್ವ ದೇಶಗಳಲ್ಲೂ ಹಾಗೂ ಭಾರತದ ವಿವಿಧೆಡೆ ಕಛೇರಿ ನೀಡಿ ವಿವಿಧ ಮಾನ ಸಮ್ಮಾನ ಗಳಿಗೆ ಪಾತ್ರರಾಗಿದ್ದಾರೆ. 1996ರಲ್ಲಿ ಸಂತ ಜ್ಞಾನೇಶ್ವರ ಉತ್ಸವದಲ್ಲಿ ರಾಷ್ಟ್ರಪತಿ ಶಂಕರದಯಾಳ ಶರ್ಮಾರಿಂದ ಸಮ್ಮಾನ, ಹರಿವಲ್ಲಭ ಸಂಗೀತ ವೇದಿಕೆಯಿಂದ ಸಮ್ಮಾನ, ಮುಂಬಯಿ ಸಂಗೀತೋತ್ಸವದಲ್ಲಿ ಪ್ರಧಾನಿ ವಾಜಪೇಯಿ ಅವರಿಂದ ಸಮ್ಮಾನ, ಉತ್ತರ ಅಮೆರಿಕದಲ್ಲಿ ಜರಗಿದ ಸಂಗೀತ ಪ್ರಶಸ್ತಿ, ದುಬಾೖ -ಬಹರೈನ್‌ಗಳಲ್ಲಿ ಸಮ್ಮಾನ ಹಾಗೂ ಪುರಸ್ಕಾರ ಗಳಿಂದ ಸನ್ಮಾನಿತರಾದ ಪಂ| ಉಪೇಂದ್ರ ಭಟ್ ಮಹಾರಾಷ್ಟ್ರ ಹಾಗೂ ಕರ್ನಾಟಕ -ಉಭಯ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.
ಮಹಾರಾಷ್ಟ್ರದ ವಿಶ್ವಶಾಂತಿ ಸಂಗೀತಜೀವನ ಗೌರವ, ಕಲ್ಕೂರ ಪ್ರತಿಷ್ಠಾನದ ವಾದಿರಾಜ ಸಮ್ಮಾನ ಹಾಗೂ ಇವೆಲ್ಲಕ್ಕೆ ಕಲಶವಿಟ್ಟಂತೆ ಔರಂಗಾಬಾದಿನ ಕಲಾವೈಭವ ವೇದಿಕೆಯ ಭೀಮಸೇನ ಜೋಶಿ ಪ್ರಶಸ್ತಿಯ ಧನ್ಯತೆ ಹೊಂದಿದ್ದಾರೆ.
ಶಾಸ್ತ್ರೀಯ ಸಂಗೀತಗಾರರು ಭಾವಗೀತೆ, ಲಘು ಶಾಸ್ತ್ರೀಯ ಸಂಗೀತವನ್ನು ಹಾಡುವುದು ಘನತೆಗೆ ಕುಂದು ಎಂದು ಭಾವಿಸಿದ್ದ ಕಾಲದಲ್ಲಿ ಜನರೆಡೆಗೆ ಹಿಂದೂಸ್ತಾನಿಯನ್ನು ಕೊಂಡೊಯ್ಯುವಲ್ಲಿ ಗುರುವಿನ ದಾರಿಯಲ್ಲಿ ನಡೆದು ಉಪೇಂದ್ರ ಭಟ್ಟರು ಸಾಧನೆ ಮಾಡಿದ್ದಾರೆ.
ಕನ್ನಡ, ಮರಾಠಿ, ಕೊಂಕಣಿ, ಹಿಂದಿ ಈ ನಾಲ್ಕು ಭಾಷೆ ಗಳಲ್ಲಿ ಕಛೇರಿ ನೀಡಬಲ್ಲ ಗಾಯಕ ಉಪೇಂದ್ರಭಟ್ಟರು ಗುರು ವಿನ ನಿಧನಾನಂತರ ಅವರಿಗೆ ಶ್ರದ್ಧಾಂಜಲಿಯಾಗಿ ರೂಪಿಸಿದ “ಗುರುಸಾಕ್ಷಾತ್ ಪರಬ್ರಹ್ಮ’ ಧ್ವನಿತಟ್ಟೆ ಹನ್ನೆರಡು ಪ್ರಕಾರದ ಸಂಗೀತಗಳ ಸುಂದರ ಮಿಶ್ರಣ. ಅಂತೆಯೇ “ಭೀಮಸೇನ ಸಂತವಾಣಿ’, ಕನ್ನಡ ದಾಸವಾಣಿ “ರಾಮ ಶ್ಯಾಮ ಮಿಲನ’ (ರಾಮಕೃಷ್ಣ ಗೀತೆಗಳು) ಭಟ್ಟರ ಪರಿಕಲ್ಪನಾತ್ಮಕ ಪ್ರಸ್ತುತಿಗಳು.
ಇಷ್ಟು ಸಂಗೀತ ಸಿದ್ಧಿ, ಪ್ರಸಿದ್ಧಿಗಳಿದ್ದರೂ ಪಂಡಿತರು ಈಗಲೂ ಸರಳ ಸುಲಭ ವಿನಯವಂತ ಮಂಗಳೂರಿನ ರಥ ಬೀದಿಯ ಉಪೇಂದ್ರ ಭಟ್ಟರೇ ಆಗಿದ್ದಾರೆ. ಪತ್ನಿ ಮಿತ್ರವೃಂದಾ, ಭಟ್ಟರ ಗಾಯನದ ಪ್ರೋತ್ಸಾಹಕಿ ಮತ್ತು ವಿಮರ್ಶಕಿ. ಈ ಆದರ್ಶ ಕಲಾವಿದನಿಂದ ಇನ್ನೂ ಬಹುಕಾಲದ ಸಾಧನೆ ನಡೆಯಲಿ.
ಡಾ| ಎಂ. ಪ್ರಭಾಕರ ಜೋಶಿ