Advertisement
ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಪಾರ್ಥೀವ ಶರೀರವನ್ನು ಶನಿವಾರ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತರಲಾಯಿತು. ಬಳಿಕ ರಸ್ತೆ ಮಾರ್ಗವಾಗಿ ಹುಟ್ಟೂರಿಗೆ ಕೊಂಡೊಯ್ಯುವಾಗ ರಾಜಧಾನಿಯಲ್ಲಿ ಗೌರವಪೂರ್ವಕ ವಿದಾಯ ದೊರೆಯಿತು.
Related Articles
Advertisement
ಎಚ್‌ಎಎಲ್ ವಿಮಾನ ನಿಲ್ದಾಣ ರಸ್ತೆಯಿಂದ ಹೊರಟ ಸೇನಾವಾಹನ ಎಂಜಿ ರಸ್ತೆ, ಟೌನ್‌ಹಾಲ್ ಮೂಲಕ ಸಾಗಿ ಮೈಸೂರು ರಸ್ತೆ ಮಾರ್ಗವಾಗಿ ಮಂಡ್ಯದ ಕಡೆ ಸಾಗಿತು. ಮಾರ್ಗದ ಉದ್ದಕ್ಕೂ ಅಪಾರ ಸಂಖ್ಯೆಯ ಜನರು ಯೋಧಗುರುವಿನ ಪಾರ್ಥೀವ ಶರೀರಕ್ಕೆ ದೂರದಿಂದಲೇ ನಮಿಸಿ ಗೌರವ ಸೂಚಿಸಿದರು. ಮಂಡ್ಯ ತಲುಪುವ ತನಕ ವೀರಯೋಧನಿಗೆ ಗೌರವ ವಂದನೆ ದೊರೆಯಿತು.
ಮೃತ ಯೋಧನ ಪಾರ್ಥಿವ ಶರೀರ ಬೆಂಗಳೂರಿನಿಂದ ಹುಟ್ಟೂರಿಗೆ ರವಾನೆ ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸೇನಾ ಹೆಲಿಕಾಪ್ಟರ್‌ಗಾಗಿ ರಕ್ಷಣಾ ಇಲಾಖೆಗೆ ಮನವಿ ಮಾಡಿದ್ದರು. ಆದರೆ, ಲಭ್ಯತೆ ಇಲ್ಲದ ಕಾರಣ ಸಿಗಲಿಲ್ಲ ಎಂದು ಹೇಳಲಾಗಿದೆ.
ಗಣ್ಯರಿಂದ ಅಂತಿಮ ಗೌರವ: ಶನಿವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಸೇನಾ ವಿಮಾನದ ಮೂಲಕ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಹುತಾತ್ಮ ಯೋಧ ಗುರು ಪಾರ್ಥೀವ ಶರೀರವನ್ನು ತರಲಾಯಿತು.
ಎಚ್‌ಎಎಲ್‌ನಲ್ಲಿ ಸಿಎಂ ಕುಮಾರಸ್ವಾಮಿ, ಗೃಹ ಸಚಿವ ಎಂ.ಬಿ.ಪಾಟೀಲ್, ಸಂಸದರಾದ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಪಿ.ಸಿ.ಮೋಹನ್, ಮಾಜಿ ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಹಲವು ಗಣ್ಯರು ಹುತಾತ್ಮ ಯೋಧ ಗುರುಗೆ ಅಂತಿಮ ನಮನ ಸಲ್ಲಿಸಿದರು. ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಸೇನಾ ಅಧಿಕಾರಿಗಳು ಗೌರವ ವಂದನೆ ಸಲ್ಲಿಸಿದರು.