ಮುಂಬಯಿ: ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮುಂದಿನ ಪರ್ಯಾಯ ಸ್ವೀಕರಿಸಲಿದ್ದು, ಈ ಸಂದರ್ಭವಾಗಿ ಒಂದು ತಿಂಗಳ ಕಾಲ ಮುಂಬಯಿ ನಗರದಲ್ಲಿ ಮೊಕ್ಕಾಂ ಹೂಡಿರುವ ಶ್ರೀಗಳನ್ನು ಪಲಿಮಾರು ಮೇಗಿನ ಮನೆ ಕುಟುಂಬಸ್ಥರು ಮತ್ತು ಮೂಲ್ಕಿ ಪಡುಮನೆ ಕುಟುಂಬಸ್ಥರು ಅಂಧೇರಿ ಪಶ್ಚಿಮದ ಕರಿಷ್ಮಾ ಕ್ಯಾಟರರ್ನ ಆಡಳಿತದಲ್ಲಿರುವ ಪಟಾರೆ ಪ್ರಭು ಟ್ರಸ್ಟ್ ಹಾಲ್‌ನಲ್ಲಿ ಗೌರವ ಪೂರ್ವಕವಾಗಿ ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪೂಜ್ಯ ಶ್ರೀಗಳು, ಪಲಿಮಾರು ಎಂಬ ಹಳ್ಳಿಯಿಂದ ಈ ಮಹಾನಗರಕ್ಕೆ ವಲಸೆ ಬಂದು ಕಷ್ಟ, ಶ್ರದ್ಧೆಯಿಂದ ಬದುಕು ಕಟ್ಟಿ ಸಂಪಾದಿಸಿದ ಬಹುಪಾಲು ಊರಿನ ಅಭಿವೃದ್ಧಿಗೆ ಸೇರಿಕೊಂಡಿದೆ.
ಪಲಿಮಾರಿನಲ್ಲಿರುವಷ್ಟು ದೇವಸ್ಥಾನ, ದೈವಸ್ಥಾನಗಳು ಜಿಲ್ಲೆಯಲ್ಲಿ ಎಲ್ಲೂ ಇಲ್ಲ. ಪ್ರೀತಿಯ ಭಾಷೆಗೆ ಮಹತ್ವವಿದೆ. ನನ್ನನ್ನು ಅಭಿಮಾನದಿಂದ ಆಹ್ವಾನಿಸಿ ಪ್ರೀತಿಯ ದ್ಯೋತಕವಾಗಿ ಸಮರ್ಪಿಸಿದ ಈ ಗೌರವ ಶ್ರೀ ಕೃಷ್ಣನಿಗೆ ಅರ್ಪಣೆ. ಬದುಕಿನಲ್ಲಿ ಯಾವುದೇ ವೃತ್ತಿ ಮಾಡಿದರೆ ಅದರಲ್ಲಿ ದೇವರನ್ನು ಕಾಣುವಂತಾಗಬೇಕು. ದೇವರ ಮೇಲೆ ನಂಬಿಕೆ ನಮ್ಮ ಪ್ರತಿಯೊಂದು ಕಾರ್ಯಕ್ಕೆ ರಕ್ಷಣೆಯಾಗುತ್ತದೆ. ನಂಬಿಕೆ, ವಿಶ್ವಾಸ ದೇವರ ಮೇಲೆ ಇದ್ದಾಗ ಅದು ದೇವರ ಚಿತ್ತಕ್ಕೆ ಬಂದಾಗ ಎಲ್ಲಾ ಕೆಲಸವು ಪೂರ್ಣವಾಗುತ್ತದೆ. ಪಲಿಮಾರು ಶ್ರೀಗಳ ಪರ್ಯಾಯವೆಂದರೆ ಅದು ಪಲಿಮಾರು ಊರಿಗೆ ಸಲ್ಲುವಂಥದ್ದು. ಪರ್ಯಾಯ ಸಂದರ್ಭದಲ್ಲಿ ಅಪಾರ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ಪಲಿಮಾರು ಮಠದ ಡಾ| ವಂಶಿಕೃಷ್ಣ ಆಚಾರ್ಯ ಪುರೋಹಿತರು ಪ್ರಾಸ್ತಾವಿಕ ಮಾತುಗಳನ್ನಾಡಿ, ಪಲಿಮಾರು ಶ್ರೀಗಳು ಶ್ರೀ ಕೃಷ್ಣನ ಗರ್ಭಗುಡಿಯ ಗೋಪುರಕ್ಕೆ ಬಂಗಾರದ ಕವಚ ಅರ್ಪಿಸುವ ಬಗ್ಗೆ ನೂರು ಕೆಜಿ ಚಿನ್ನ, ಸುಮಾರು 32 ಕೋ. ರೂ. ವೆಚ್ಚದ ಯೋಜನೆ ಹಾಗೂ ಸಹಸ್ರ ಕೋಟಿ ತುಳಸಿ ಅರ್ಚನೆ ಹಾಗೂ ಪ್ರಮುಖ ಯೋಜನೆಗಳನ್ನು ಭಕ್ತರ ಮುಂದೆ ತೆರೆದಿಟ್ಟರು.
ಈ ಸಂದರ್ಭದಲ್ಲಿ ಪಲಿಮಾರು ಮೇಗಿನ ಮನೆ ಕುಟುಂಬಸ್ಥರಾದ ಸುಧಾಕರ ಶೆಟ್ಟಿ ಬಂಜಾರ, ದಿವಾಕರ ಶೆಟ್ಟಿ, ಸುಕುಮಾರ ಶೆಟ್ಟಿ, ಪುಷ್ಪರಾಜ್ ಶೆಟ್ಟಿ ವರ್ಲಿ, ಮೂಲ್ಕಿ ಪಡುಮನೆ ಕುಟುಂಬಸ್ಥರ ಪರವಾಗಿ ಸುಧೀರ್ ಶೆಟ್ಟಿ ಚರಿಷ್ಮಾ ಬಿಲ್ಡರ್ ಅವರು ಶ್ರೀಗಳನ್ನು ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದರು. ಉದ್ಯಮಿ ಅನಿಲ್ ಶೆಟ್ಟಿ ಏಳಿಂಜೆ ಕಾರ್ಯಕ್ರಮ ನಿರ್ವಹಿಸಿದರು.
ಸಭೆಯಲ್ಲಿ ರವಿ ಶೆಟ್ಟಿ ಸಾಯಿಪ್ಯಾಲೇಸ್, ವಸಂತ್ ಶೆಟ್ಟಿ ಪಲಿಮಾರು, ಶಂಕರ ಶೆಟ್ಟಿ ರೋನಕ್, ಶಿರ್ವನಡಿಬೆಟ್ಟು ನಿತ್ಯಾನಂದ ಹೆಗ್ಡೆ, ಸುರೇಂದ್ರ ಕುಮಾರ್ ಹೆಗ್ಡೆ, ಸಿಎ ಸುಧೀರ್ ಆರ್. ಎಲ್. ಶೆಟ್ಟಿ, ಪರ್ಯಾಯ ಸಮಿತಿ ಮುಂಬಯಿ ಗೌರವಾಧ್ಯಕ್ಷ ಡಾ| ಎಂ. ನರೇಂದ್ರ ರಾವ್ ಉಪಸ್ಥಿತರಿದ್ದರು. ಪಲಿಮಾರು ಶ್ರೀಗಳು ಮುಂಬಯಿ ಪರ್ಯಾಯ ಸಮಿತಿಯ ಗೌರವಾಧ್ಯಕ್ಷ ಡಾ| ಎಂ. ಎಸ್. ಆಳ್ವ ಅವರು ಶ್ರೀಗಳ ಮುಂಬಯಿ ಮೊಕ್ಕಾಂ ವಿವರಗಳನ್ನು ನೀಡಿ ವಂದಿಸಿದರು.