ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಸಿ ರಾಷ್ಟ್ರೀಯ ಅಹಿಂದ ಒಕ್ಕೂಟದಿಂದ ಅಕ್ಟೋಬರ್ 3 ರಂದು ಹುಬ್ಬಳ್ಳಿಯಿಂದ ಬೆಂಗಳೂರುವರೆಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ರಾಜ್ಯಾದ್ಯಕ್ಷ ಮುತ್ತಣ್ಣ ಶಿವಳ್ಳಿ ಹೇಳಿದರು.
ಬುಧವಾರ(ಸೆ 25) ಇಲ್ಲಿನ ಪ್ರವಾಸಿ ಮಂದಿರದಲ್ಲಿ ಅಹಿಂದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟವರು, ಅಂತಹ ನಾಯಕರ ಮೇಲೆ ಸಂಕಷ್ಟ ತರುವಂತಹ ಕಾರ್ಯವನ್ನು ಬಿಜೆಪಿ ಮಾಡಿದ್ದು, ಎಲ್ಲೆಲ್ಲಿ ಬಿಜೆಪಿ ಆಡಳಿತವಿಲ್ಲವೋ ಅಲ್ಲಿ ರಾಜ್ಯಪಾಲರನ್ನು ಮುಂದಿಟ್ಟುಕೊಂಡು ಸರ್ಕಾರ ಕೆಡವಲು ಮುಂದಾಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಅ.3 ರಂದು ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಿಂದ ಜಾಥಾ ಆರಂಭವಾಗಿ ಕಿತ್ತೂರ ಚನ್ನಮ್ಮ , ಸಂಗೊಳ್ಳಿ ರಾಯಣ್ಣ, ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಮಾಲಾರ್ಪನೆ ಮಾಡಿ ಕುಂದಗೋಳ ಮೂಲಕ ಶಿಗ್ಗಾಂವಿ, ಹಾವೇರಿ, ಚಿತ್ರದುರ್ಗದ ಮೂಲಕ ಬೆಂಗಳೂರ ವಿಧಾನಸೌಧದ ವರೆಗೆ ಜಾಥಾ ತೆರಳಲಿದೆ ಎಂದರು.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 136 ಶಾಸಕರು ಸೇರಿದಂತೆ, ಸಿದ್ದರಾಮಯ್ಯ ಅಭಿಮಾನಿಗಳು, ದಲಿತ ಸಂಘಟನೆಗಳು ಸೇರಿದಂತೆ ಎಲ್ಲರೂ ನೈತಿಕ ಬೆಂಬಲ ನೀಡುತ್ತಿದ್ದು, ಜಾಥಾದಲ್ಲಿ ಸಾವಿರಾರು ಜನರು ಭಾಗಿಯಾಗಲಿದ್ದಾರೆ. ಸಿಎಂ ಅವರು ರಾಜೀನಾಮೆ ನೀಡದೆ ಆಡಳಿತ ಮುಂದುವರೆಸಬೇಕು ಎಂದರು.
ರಾಜಶೇಖರ ಮೆಣಸಿನಕಾಯಿ, ಬಾಬಾಜಾನ್ ಮುಧೋಳ, ವೀರನಗೌಡ ಪಾಟೀಲ್, ವಿಶಾಲ ವಾಘಮೋಡೆ, ಶ್ರೀಧರ ದೊಡ್ಡಮನಿ, ಸಂಗೀತಾ ಚಾವ ಇದ್ದರು.