ಹೊನ್ನಾವರ: ತಾಪಂ ಸಾಮಾನ್ಯ ಸಭೆಯಲ್ಲಿ ಅನುಪಾಲನಾ ವರದಿ ಸಲ್ಲಿಸದ, ಸಭೆಗೆ ಸತತವಾಗಿ ಗೈರಾಗುವ ಇಲಾಖೆ ಅಧಿಕಾರಿಗಳ ವಿರುದ್ಧ ಅಧ್ಯಕ್ಷರಾದಿಯಾಗಿ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ಸಭೆಯ ಠರಾವಿನ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಸದಸ್ಯ ಗಣಪಯ್ಯ ಗೌಡರು, ಹಿಂದಿನ ಸಭೆಯಲ್ಲಿ ಚರ್ಚಿತವಾದ ವಿಷಯವನ್ನೇ ಠರಾವಿನಲ್ಲಿ ಬರೆದಿದ್ದಾರೆ ಎನ್ನುವ ನಂಬಿಕೆ ನಮಗೆಲ್ಲರಿಗೂ ಇದೆ. ಹಾಗಾಗಿ ಮುಂದಿನ ವಿಷಯದ ಚರ್ಚೆಗೆ ಮುಂದಾಗಿ ಎಂದರು. ಚಿಕ್ಕ ನೀರಾವರಿ ಇಲಾಖೆ ಮತ್ತು ಅರಣ್ಯ ಇಲಾಖೆಯವರು ತಾಪಂ ಸಭೆಗಳಿಗೆ ಸತತವಾಗಿ ಗೈರಾಗುತ್ತಿದ್ದಾರೆ. ಅಧಿಕಾರಿಗಳು ಸತತವಾಗಿ ಗೈರಾದರೆ ಸಭೆ ನಡೆಸಿ ಪ್ರಯೋಜನವೇನು ಅಧ್ಯಕ್ಷರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸದಸ್ಯರ ಒತ್ತಾಯಕ್ಕೆ ಮಣಿದ ಅಧ್ಯಕ್ಷರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತಿಳಿಸುತ್ತೇವೆ ಎಂದಾಗ ಅದಕ್ಕೆ ಒಪ್ಪದ ಸದಸ್ಯರು ಡಿಸಿ ಕಚೇರಿಯಲ್ಲಿ ಧರಣಿ ಕೂರೋಣ ಎಂದರು. ಅರಣ್ಯಾಧಿಕಾರಿ ತರಾಟೆಗೆ: ಸತತವಾಗಿ ಗೈರಾಗುತ್ತಿದ್ದ ಅರಣ್ಯ ಇಲಾಖೆ ಅಧಿ ಕಾರಿಯನ್ನು ಕರೆಮಾಡಿ ಕರೆಸಿ ಅಧ್ಯಕ್ಷರು, ತಾಪಂ ಸದಸ್ಯರೆಲ್ಲರೂ ಗ್ರಾಮೀಣ ಪ್ರದೇಶದಿಂದ ಚುನಾಯಿತರಾಗಿರುತ್ತಾರೆ. ಅರಣ್ಯ ಇಲಾಖೆಯೊಂದಿಗೆ ನೇರ ಸಂಬಂಧ ಹೊಂದಿರುತ್ತಾರೆ. ನೀವು ಪದೇಪದೇ ಸಬೂಬು ಹೇಳಿ ತಪ್ಪಿಸಿಕೊಳ್ಳುವುದು ಯಾಕೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸ್ಪಷ್ಟನೆ ನೀಡಿದ ಅಧಿಕಾರಿಗಳು ಮಂಕಿ ವಲಯ ಹೊನ್ನಾವರ ಮತ್ತು ಭಟ್ಕಳ ಎರಡು ತಾಲೂಕಿನ ನಡುವೆ ಹಂಚಿಕೆಯಾಗಿರುವುದರಿಂದ ಮತ್ತು ತರಬೇತಿ ಇದ್ದ ಸಮಯದಲ್ಲಿ ಹಾಜರಾಗಲು ಕಷ್ಟವಾಗುತ್ತದೆ. ಮುಂದೆ ನಾವು ಹಾಜರಾಗಲು ಸಾಧ್ಯವಾಗದಿದ್ದರೆ ಬದಲಿ ಸಿಬ್ಬಂದಿ ಕಳುಹಿಸುತ್ತೇವೆ ಎಂದರು.
ಜನಪ್ರತಿನಿಧಿಗಳಿಗೂ ಮಾಹಿತಿ ನೀಡದ ನೀರಾವರಿ ಇಲಾಖೆ: ತಾಲೂಕಿನಲ್ಲಿ ಐದಾರು ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುತ್ತಿದ್ದ ಏತ ನೀರಾವರಿ ಯೋಜನೆಗಳು ಹಳ್ಳ ಹಿಡಿಯುತ್ತಿದ್ದು ಇಂದು ಅದು ಐದಾರು ನೂರು ಎಕರೆಗೆ ಬಂದು ಮುಟ್ಟಿದೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಕೆಲಸದ ಬಗ್ಗೆ ಮಾಹಿತಿ ಕೇಳಿದರೆ ಉಡಾಪೆಯಿಂದ ವರ್ತಿಸುತ್ತಾರೆ. ಅವರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸದಸ್ಯರಾದ ಅಣ್ಣಯ್ಯ ನಾಯ್ಕ ದೂರಿದರು. ಇದಕ್ಕೆ ಅಧ್ಯಕ್ಷರೂ ದನಿಗೂಡಿಸಿದರು.
ಸದಸ್ಯರಾದ ಆರ್.ಪಿ.ನಾಯ್ಕ ಮಂಗಗಳ ಹಾವಳಿ ಬಗ್ಗೆ ಪ್ರಸ್ಥಾಪಿಸಿ ಅರಣ್ಯಾಧಿಕಾರಿಗಳಿಂದ ಸಹಾಯ ಕೇಳಿದರು. ಮಂಗನಕಾಯಿಲೆ ನಿಯಂತ್ರಣ, ಶಿಕ್ಷಣ ಇಲಾಖೆ, ಹೆಸ್ಕಾಂ, ಆರೋಗ್ಯ, ಸಮಾಜ ಕಲ್ಯಾಣ ಇಲಾಖೆ ಕಾರ್ಯವೈಖರಿ ಬಗ್ಗೆ ಆಯಾ ಇಲಾಖೆ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಯಿತು. ಉಪಾಧ್ಯಕ್ಷ ಲಲಿತಾ ಈಶ್ವರ ನಾಯ್ಕ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಖಾಜಿ ಮಹಮದ್ ಇರ್ಷಾದ್, ಪ್ರಭಾರ ಕಾರ್ಯನಿರ್ವಾಹಕ ಸುರೇಶ ನಾಯ್ಕ ಹಾಗೂ ಬಹುತೇಕ ಸದಸ್ಯರು ಹಾಜರಿದ್ದರು.