ಹೊನ್ನಾವರ: ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ ಹಂದೆಯವರ ಸೆಲ್ಕೋ ಸೋಲಾರ್ ಸಂಸ್ಥೆ ಸೌರಶಕ್ತಿಯನ್ನು ಬಹುಪಯೋಗಿಯಾಗಿ ಗ್ರಾಮೀಣ ಭಾಗದ ಜನತೆಗೆ ಜೀವನಾಧಾರವಾಗಿ ಮಾಡಲು ಹಲವು ಸಂಶೋಧನೆ ನಡೆಸಿ ಯಶಸ್ವಿಯಾಗಿದೆ. ಈ ಕುರಿತು ಜನರಿಗೆ ತಿಳಿವಳಿಕೆ ನೀಡಬೇಕಾದ ಅಗತ್ಯವಿದೆ.
ಆರಂಭದ ದಿನಗಳಲ್ಲಿ ಸೌರಶಕ್ತಿ ದೀಪ ಬೆಳಗಿಸಲು, ಬಿಸಿನೀರು ಕಾಯಿಸಲು ಮಾತ್ರ ಎಂದು ನಂಬಲಾಗಿತ್ತು. ನಂತರದ ದಿನಗಳಲ್ಲಿ ವಿವಿಧ ಫ್ಯಾನ್ ಗಳು, ಏರ್ ಕಂಡೀಶನರ್‌ಗಳು, ಪ್ರಿಡ್ಜ್ಗಳು ಸೌರಶಕ್ತಿ ಚಾಲಿತವಾದವು. ನಂತರ ಮನೆಯೊಳಗೆ ಹೋದ ಸೌರಶಕ್ತಿ ಮಿಕ್ಸರ್, ಗ್ರೈಂಡರ್ , ಓವನ್, ಟೋಸ್ಟ್ ಮೇಕರ್, ಇಸ್ತ್ರಿಪೆಟ್ಟಿಗೆಗಳಿಗೆ ವಿಸ್ತಾರವಾಯಿತು.
ಈ ದಶಕದಲ್ಲಿ ಸೌರಶಕ್ತಿಯಲ್ಲಿ ಕ್ರಾಂತಿಕಾರಕ ಆವಿಷ್ಕಾರಗಳಾಗಿವೆ. ಸಣ್ಣಪುಟ್ಟ ಕೈಗಾರಿಕೆ, ಸ್ವ ಉದ್ಯೋಗಿಗಳಿಗೆ ಸೌರ ವಿದ್ಯುತ್ ಉಚಿತವಾಗಿ ದೊರೆಯುವಂತೆ ಉಪಕರಣಗಳು ಸಿದ್ಧವಾಗುತ್ತಿವೆ. ಸೌರಶಕ್ತಿಯಿಂದ ಹಳ್ಳಿಯ ಕುಂಬಾರನ ಚಕ್ರ ತಿರುಗುತ್ತಿದೆ. ಕಮ್ಮಾರನ ತಿದಿ ಉಸಿರಾಡಿ ಬೆಂಕಿ ಉರಿಸುತ್ತದೆ. ಆಕಳು ಹಾಲು ಕರೆಯುತ್ತದೆ, ನಿಶಬ್ಧವಾಗಿ ಕಬ್ಬಿನಗಾಣ ಹಾಲು ಸುರಿಸುತ್ತದೆ, ಕಾಲಿಗೆ ನೋವಿಲ್ಲದೇ ಬಟ್ಟೆ ಹೊಲಿಯುತ್ತದೆ, ಹಪ್ಪಳ ಮಾಡಿ ಒಣಗಿಸಿ ಕೊಡುತ್ತದೆ, ಪ್ರಿಂಟರ್ ಬಹುವರ್ಣದ ಮುದ್ರಣ ಮಾಡಿಕೊಡುತ್ತದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೌರಶಕ್ತಿ ಉಪಕರಣ ಕೊಡುವಲ್ಲಿ ಮೊದಲ ಸ್ಥಾನದಲ್ಲಿದೆ. ಹೊನ್ನಾವರ-ಭಟ್ಕಳ ತಾಲೂಕಿನ ಒಟ್ಟೂ 5000 ಕುಟುಂಬಗಳಿಗೆ ಸೋಲಾರ್ ವಿದ್ಯುತ್, ಸೋಲಾರ್ ಶಕ್ತಿಯ ಝೆರಾಕ್ಸ್, ಕಮ್ಮಾರನ ತಿದಿ, ಹೊಲಿಗೆಯಂತೆ, ಕಬ್ಬಿನಗಾಣ, ಬಿಸಿನೀರು ಉಪಕರಣ ಮೊದಲಾದವನ್ನು ವಿತರಿಸಿ ಸೆಲ್ಕೋದಿಂದ ಪುರಸ್ಕಾರ ಪಡೆದಿದೆ ಎಂದು ಯೋಜನಾಧಿಕಾರಿ ಈಶ್ವರ ಹೇಳಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ರಾಜ್ಯದಲ್ಲಿ 1.75ಲಕ್ಷ ಸದಸ್ಯರಿಗೆ ಸೌರಶಕ್ತಿಯ ಉಪಕರಣಗಳನ್ನು ಪಡೆಯುವಲ್ಲಿ ನೆರವು ನೀಡಿದೆ. ಸಹಕಾರಿ ಸಂಘಗಳು ಈ ವಿಷಯದಲ್ಲಿ ತುಂಬ ಹಿಂದಿವೆ. ಉತ್ಪಾದಕ ಉಪಕರಣಗಳಿಗೆ ಸಾಲನೀಡಿ, ಗ್ರಾಮೀಣ ಅಭಿವೃದ್ಧಿಗೆ ನೆರವಾಗಬೇಕಿದೆ. ವಿವರಗಳಿಗೆ ದತ್ತಾರಾಮ ಭಟ್, ವ್ಯವಸ್ಥಾಪಕರು,ಸೆಲ್ಕೋ ಸೋಲಾರ್, ಕುಮಟಾ ಅವರನ್ನು ಸಂಪರ್ಕಿಸಬಹುದಾಗಿದೆ.
ಜೀಯು, ಹೊನ್ನಾವರ