ಜೀಯು, ಹೊನ್ನಾವರ
ಹೊನ್ನಾವರ: ಹಾಲು ಚೆಲ್ಲಿದಂತೆ ಪ್ರಕೃತಿಯ ಮೇಲೆಲ್ಲಾ ಹಬ್ಬಿಕೊಳ್ಳುವ ಬೆಳದಿಂಗಳ ರಾತ್ರಿಯಲ್ಲಿ ಗದ್ದಲದಿಂದ 15ಕಿಮೀ ದೂರ ಬೆಟ್ಟದ ಮೇಲೆ ಸಂಗೀತ ಕೇಳುವ ಖುಷಿಯೇ ಬೇರೆ. ಬೆಳದಿಂಗಳು ಹುಟ್ಟಿಸುವ ಮಂದ ಉನ್ಮಾದದ ಜೊತೆ ಸಂಗೀತದ ನಾದ ಮೇಲೈಸುತ್ತಿದೆ. ಇಂತಹ ಒಂದು ಅಪೂರ್ವ ಕಾರ್ಯಕ್ರಮವನ್ನು ಡಿ.14 ರಂದು ಮುಸ್ಸಂಜೆಯಿಂದ ಮುಂಜಾನೆಯವರೆಗೆ ಕರಿಕಾನಮ್ಮನ ಬೆಟ್ಟದಲ್ಲಿ ಏರ್ಪಡಿಸಲಾಗಿದೆ.
ಹೆಸರಾಂತ ತಬಲಾ ವಾದಕ ಗೋಪಾಲಕೃಷ್ಣ ಹೆಗಡೆ ಸಂಯೋಜನೆಯಲ್ಲಿ ಕಳೆದ 21ವರ್ಷದಿಂದ ನಡೆಯುತ್ತಿರುವ ದೇಶ ಹಾಗೂ ವಿದೇಶದ ಸಂಗೀತ ಪ್ರಿಯರನ್ನು ಆಕರ್ಷಿಸುತ್ತಿರುವ ಈ ನಾದ ಸಮಾರಾಧನೆಗೆ ಕಲಾಮಂಡಲ, ಎಸ್ ಕೆಪಿ ಮ್ಯೂಸಿಕ್ ಟ್ರಸ್ಟ್, ಕರಿಕಾನಮ್ಮ ದೇವಸ್ಥಾನದ ಆಡಳಿತ ಮಂಡಳಿ ಕೈಜೋಡಿಸುತ್ತದೆ.
ನಾದ ಮಾಧವ ಪ್ರಶಸ್ತಿಯನ್ನು ಪಂ. ಬಿ.ಎಸ್. ಮಠ ಹಾಗೂ ವಿದುಷಿ ಅಕ್ಕಮಹಾದೇವಿ ಮಠ ಹಿಂದುಸ್ಥಾನಿ ವಾಯೋಲಿನ್ ವಾದಕ ಈ ದಂಪತಿಗೆ ಪ್ರದಾನ ಮಾಡಲಾಗುವುದು. ವಿದ್ವಾನ್ ಅವಿನಾಶ ಹೆಬ್ಟಾರ ಸಂಸ್ಮರಣ ಯುವ ಪುರಸ್ಕಾರವನ್ನು ಸಾರಂಗಿ ವಾದಕ ಸಫìರಾಜ ಖಾನ್ ಬೆಂಗಳೂರು, ಗಾಯಕ ವಿನಾಯಕ ಹುಗ್ಗಣ್ಣವರ್ ಮಂಬೈ, ತಬಲಾ ವಾದಕಿ ವಿಜೇತಾ ಹೆಗಡೆಗೆ ಪ್ರದಾನ ಮಾಡಲಾಗುವುದು.
ದೇವಾಲಯದ ಮುಖ್ಯ ಅರ್ಚಕ ಸುಬ್ರಹ್ಮಣ್ಯ ಭಟ್ ಆಶೀರ್ವಚನ ನೀಡುವರು. ಡಾ| ಎಂ.ಜಿ. ಹೆಗಡೆ ಅಧ್ಯಕ್ಷತೆ ವಹಿಸುವರು. ಪಂ| ಬಿ.ಎಸ್. ಮಠ ಮತ್ತು ವಿದುಷಿ ಅಕ್ಕಮಹಾದೇವಿ ಮಠ ಅವರ ವಾಯೋಲಿನ್ ಜುಗಲ್ಬಂದಿ. ಪಂ| ಕೃಷ್ಣ ಭಟ್ ಮುಂಬೈ, ವಿದುಷಿ ಶಾರದಾ ಭಟ್ ಕಟ್ಟಿಗೆ ಮೈಸೂರು, ಶಿವಾನಂದ ಭಟ್ ಹಡಿನಬಾಳ, ಶ್ರೀಧರ ಹೆಗಡೆ ಕಲ್ಭಾಗ, ಡಾ| ಶಿಲ್ಪಾ ಹೆಗಡೆ ಮೈಸೂರು, ರಾಘವೇಂದ್ರ ಉಪಾಧ್ಯಾಯ ಮೂಡಬಿದ್ರಿ ಇವರ ಹಿಂದುಸ್ಥಾನಿ ಗಾಯನ ಮತ್ತು ಉಸ್ತಾದ್ ರಫಿಕ್ ಖಾನ್ ಮತ್ತು ಉಸ್ತಾದ್ ಶಫಿಕ್ ಖಾನ್‌ರ ಸಿತಾರ್ ಜುಗಲ್ಬಂದಿ, ಸರ್ಫರಾಜ ಖಾನ್ ಮತ್ತು ವಿನಾಯಕ ಹುಗ್ಗಣ್ಣವರ ಸಾರಂಗಿ ಮತ್ತು ಗಾಯನ ಜುಗಲ್ಬಂದಿ, ಕಿರಣ ಮಗೆಗಾರು ಹಿಂದುಸ್ಥಾನಿ ಬಾನ್ಸುರಿ, ಶ್ರೀನಿಧಿ ಶಿರೂರು ಕರ್ನಾಟಕ ಬಾನ್ಸುರಿ ವಾದನವಿದೆ. ಇವರಿಗೆ ಗೌರೀಶ ಯಾಜಿ ಕೂಜಳ್ಳಿ, ಹರಿಶ್ಚಂದ್ರ ನಾಯ್ಕ ಇಡಗುಂಜಿ, ಭರತ್ ಹೆಗಡೆ ಹೆಬ್ಬಲಸು, ಸತೀಶ ಭಟ್ ಹೆಗ್ಗಾರ ಸಂವಾದಿನಿ ಸಾಥ್ ನೀಡುವರು.
ಗೋಪಾಲಕೃಷ್ಣ ಹೆಗಡೆ ಕಲ್ಭಾಗ, ಭೀಮಾಶಂಕರ ಬಿದನೂರ್ ಮೈಸೂರು, ಪರಮೇಶ್ವರ ಹೆಗಡೆ ಮೈಸೂರು, ವಿಜೇತಾ ಹೆಗಡೆ ಪುಣೆ,
ಮಯಾಂಕ ಬೇಡೇಕರ್ ಗೋವ, ಮಧು ಕುಡಾಲ್ಕಾರ್ ಅಂಕೋಲಾ, ಗಣಪತಿ ಹೆಗಡೆ ಹರಿಕೇರಿ, ಶರತ್ ಹೆಗಡೆ ಬೆಂಗಳೂರು ತಬಲಾ ಸಾಥ್ ನೀಡುವರು.
ತಂಪಾದ ವಾತಾವರಣ, ಉತ್ತಮ ಆತಿಥ್ಯದ ಜೊತೆಯಲ್ಲಿ ಸಂಗೀತದಲ್ಲಿ, ಪ್ರಕೃತಿಯ ಮಂದ ಬೆಳಕಿನಲ್ಲಿ ನಡೆಯುವ ಈ ಸಂಗೀತ ಕಾರ್ಯಕ್ರಮ ಬಾಳಿಗೆ ಸಾಂತ್ವನ ನೀಡುವ, ಬಹುಕಾಲ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮ. ಕಷ್ಟಪಟ್ಟು ಏರ್ಪಡಿಸುತ್ತೇವೆ, ಇಷ್ಟಪಟ್ಟವರೆಲ್ಲಾ ಬನ್ನಿ ಎಂದು ಗೋಪಣ್ಣ ಕರೆದಿದ್ದಾರೆ.