ಹೊನ್ನಾವರ: ಪ್ರತಿ ಕಿಮೀಗೆ 10 ಕೋಟಿ ರೂ. ವೆಚ್ಚಮಾಡಿ ಚತುಷ್ಪಥ ಕಾಮಗಾರಿ ನಡೆದಿದೆ. ಸರ್ಕಾರದ ವಶದಲ್ಲಿದ್ದ ಭೂಮಿಯಲ್ಲಿ ಕೆಲಸ ಮುಕ್ತಾಯ ಹಂತದಲ್ಲಿದೆ. ಖಾಸಗಿ ಭೂಮಿ ವಶಪಡಿಸಿಕೊಂಡು ಅಲ್ಲೂ ಕಾಮಗಾರಿ ಆರಂಭವಾಗಿದೆ. ಮೇಲ್ಸೇತುವೆ ನಿರ್ಮಾಣ, ಪರ್ಯಾಯ ಚತುಷ್ಪಥ (ಬೈಪಾಸ್) ಕುರಿತು ಇನ್ನೂ ತೀರ್ಮಾನಕ್ಕೆ ಬರದಿರುವುದು, ರಾಜಕಾರಣಿಗಳ ಹಗ್ಗಜಗ್ಗಾಟಕ್ಕೆ ಚತುಷ್ಪಥ ಕೆಲವೆಡೆ ದ್ವಿಪಥವಾಗಿ, ಜಗ್ಗಿದ ಕಡೆ ಬಾಗಿ, ಅಂಕುಡೊಂಕಾಗಿ ಸಾಗುತ್ತಿರುವುದು, ಕೊನೆಗೂ ಚತುಷ್ಪಥದ ಉದ್ದೇಶ ಫಲಿಸುವ ಲಕ್ಷಣ ಕಾಣಿಸುತ್ತಿಲ್ಲ.
ಜಿಲ್ಲೆಯಲ್ಲಿ ವಿಶಿಷ್ಟವಾದ ಹೊನ್ನಾವರ ಕಾಲೇಜು ರಸ್ತೆ ಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 66 ಮತ್ತು 206 ಜೋಡಿಸುವ ಸರ್ಕಲ್ ಗತಿಯೇನು ? ಪ್ರತಿಭೋದಯದಿಂದ ಕರ್ನಲ್ ಹಿಲ್‌ವರೆಗೆ ಮೇಲ್‌ಸೇತುವೆ ನಿರ್ಮಾಣ ಆಗುತ್ತದೆ ಎಂದು ನೆಲದ ಒಳಗೂ, ಹೊರಗೂ ತಂತ್ರಜ್ಞರ ಸಮೀಕ್ಷೆ ನಡೆಯಿತು. ಈಗ ಕೈಬಿಟ್ಟ ಸುದ್ದಿ ಬಂದಿದೆ. ಕೆಲವರು ತಮ್ಮ ಆಸ್ತಿ ಉಳಿಸಿಕೊಳ್ಳುವುದಕ್ಕೆ ಕರ್ನಲ್ ಹಿಲ್ ಐತಿಹಾಸಿಕ, ಮಾಸ್ತಿಗುಡಿ ಪೌರಾಣಿಕ ಎಂದೆಲ್ಲಾ ಕಥೆಕಟ್ಟುತ್ತಾ ಅರ್ಜಿ ಗುಜರಾಯಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಐಆರ್‌ಬಿ ಕಂಪನಿ ಏನೂ ಹೇಳುತ್ತಿಲ್ಲ.
ಈ ಸರ್ಕಲ್‌ನಿಂದ ಗೋವಾ ರಾಜಧಾನಿ ಪಣಜಿ, ಕರಾವಳಿಯ ದೊಡ್ಡ ನಗರಗಳಾದ ಉಡುಪಿ, ಮಂಗಳೂರು, ಎರಡನೇ ವಾಣಿಜ್ಯ ರಾಜಧಾನಿ ಹುಬ್ಬಳ್ಳಿ, ಅಭಿವೃದ್ಧಿ ಹೊಂದುತ್ತಿರುವ ಶಿವಮೊಗ್ಗ ಸಮಾನ 180ಕಿಮೀ ದೂರದಲ್ಲಿದೆ. ಈ ಸರ್ಕಲ್‌ನಲ್ಲಿ ತಿಂಗಳಿಗೊಂದು ಅಪಘಾತ ಆಗುತ್ತಿದೆ. ಟ್ಯಾಂಕರ್‌ಗಳು ಪಲ್ಟಿ ಆಗುತ್ತವೆ. ವಾಹನಗಳು ನಿಂತು ಸಾಗಬೇಕಾಗಿದೆ. ಗುಜರಾತ್-ಮಹಾರಾಷ್ಟ್ರ-ಕೇರಳ-ಗೋವಾ ಮಾರ್ಗವಾಗಿ ಉಡುಪಿ-ಮಂಗಳೂರು-ಕೊಚ್ಚಿಗೆ ಹೋಗಿ ಬರುವ ವಾಹನಗಳು ಇದೇ ಸರ್ಕಲ್‌ನಿಂದ ಹಾಯ್ದು ಹೋಗುತ್ತವೆ. ಬೆಂಗಳೂರು- ಶಿವಮೊಗ್ಗ-ಜೋಗ ಮಾರ್ಗ ವಾಗಿ ಕಾರವಾರದಿಂದ ಭಟ್ಕಳದವರೆಗೆ ಬಂದು ಹೋಗುವ ವಾಹನಗಳು ಈ ಸರ್ಕಲ್ ದಾಟಿ ಹೋಗುತ್ತವೆ. ಉತ್ತರ ಕರ್ನಾಟಕದಿಂದ ಹುಬ್ಬಳ್ಳಿ- ಯಲ್ಲಾಪುರ-ಶಿರಸಿ ಮಾರ್ಗವಾಗಿ ಮಂಗಳೂರಿನಿಂದ ಕೇರಳ ತನಕ ಬಂದು ಹೋಗುವ ವಾಹನಗಳು ಇದೇ ಸರ್ಕಲ್ ಹಾಯ್ದು ಹೋಗುತ್ತವೆ.
ನಾಲ್ಕು ದಿಕ್ಕುಗಳಲ್ಲಿರುವ ಶಾಲೆ, ಆಸ್ಪತ್ರೆ, ದೇವಾಲಯ, ಚರ್ಚ್, ಸರ್ಕಾರಿ ಕಚೇರಿಗಳಿಗೆ ಹೋಗಿ ಬರುವ ಜನ ಮತ್ತು ಹಳ್ಳಿಗಳಿಂದ ಬರುವ ಜನ ಈ ಸರ್ಕಲ್ ದಾಟಲೇ ಬೇಕು. ನಗರ ಯೋಜನಾಬದ್ಧವಲ್ಲದ ಕಾರಣ ಜನಸಾಮಾನ್ಯರಿಗೆ ಬೇಕಾದ ಸಂಸ್ಥೆಗಳು ನಾಲ್ಕು ದಿಕ್ಕಿನಲ್ಲಿವೆ. ಸಾವಿರಾರು ಜನ ಈ ಸರ್ಕಲ್ ಬಳಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಚತುಷ ³ಥ ಹಾಯ್ದು ದೂರದ ವಾಹನಗಳು, ಊರವಾಹನಗಳು, ವಿದ್ಯಾರ್ಥಿಗಳು, ವೃದ್ಧರು, ರೋಗಪೀಡಿತರು ದಾಟುವುದು ಹೇಗೆ. ಸರ್ವಿಸ್ ರಸ್ತೆ ಒದಗಿಸಿದರೂ ಸಮಸ್ಯೆ ಪರಿಹಾರವಾಗುವುದಿಲ್ಲ. ಮೇಲ್ ಸೇತುವೆಯೊಂದೇ ಪರಿಹಾರವಾಗಿತ್ತು. ಚತುಷ್ಪಥಕ್ಕೆ ನಿಗದಿಪಡಿಸಿದ ಅವಧಿ ಮುಗಿಯುತ್ತ ಬಂದ ಕಾರಣ ಗಡಿಬಿಡಿಯಲ್ಲಿ ಐಆರ್‌ಬಿ ಕೆಲಸ ಮುಗಿಸುತ್ತಿದೆ. ಸ್ಥಳೀಯರಿಗೂ, ನಾಲ್ಕು ಪ್ರಮುಖ ಜಿಲ್ಲೆಗಳಿಂದ, ಗೋವಾದಿಂದ ಈ ಸರ್ಕಲ್ ಹಾಯ್ದು ಓಡಾಡುವ ವಾಹನಗಳಿಗೂ ಅನುಕೂಲ ಮಾಡಿಕೊಡುವುದು ಹೇಗೆ ? ಸರ್ಕಲ್ ಅಪಾಯಕಾರಿಯಾಗಿ ಇರಬೇಕೋ? ಮೇಲ್ ಸೇತುವೆ ಬೇಕೋ ? ಸರ್ಕಲ್ ಶಾಶ್ವತ ಶಾಪ ಆಗದಿರಲು ಜನರ ಜೊತೆ ರಾಜಕಾರಣಿಗಳು ಹೋರಾಡಿ ಮೇಲ್ ಸೇತುವೆ ಪಡೆಯಬೇಕಾಗಿದೆ.
ಗೊತ್ತಾಗದ ಯೋಜನೆ
ಜಿಲ್ಲೆಯಲ್ಲಿ ವಿಶಿಷ್ಟವಾದ ಹೊನ್ನಾವರ ಕಾಲೇಜು ರಸ್ತೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 66 ಮತ್ತು 206 ಜೋಡಿಸುವ ಸರ್ಕಲ್ ಗತಿಯೇನು ? ಪ್ರತಿಭೋದಯದಿಂದ ಕರ್ನಲ್ ಹಿಲ್‌ವರೆಗೆ ಮೇಲ್‌ಸೇತುವೆ ನಿರ್ಮಾಣ ಆಗುತ್ತದೆ ಎಂದು ನೆಲದ ಒಳಗೂ, ಹೊರಗೂ ತಂತ್ರಜ್ಞರ ಸಮೀಕ್ಷೆ ನಡೆಯಿತು. ಈಗ ಕೈಬಿಟ್ಟ ಸುದ್ದಿ ಬಂದಿದೆ. ಕೆಲವರು ತಮ್ಮ ಆಸ್ತಿ ಉಳಿಸಿಕೊಳ್ಳುವುದಕ್ಕೆ ಕರ್ನಲ್ ಹಿಲ್ ಐತಿಹಾಸಿಕ, ಮಾಸ್ತಿಗುಡಿ ಪೌರಾಣಿಕ ಎಂದೆಲ್ಲಾ ಕಥೆಕಟ್ಟುತ್ತಾ ಅರ್ಜಿ ಗುಜರಾಯಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಐಆರ್‌ಬಿ ಕಂಪನಿ ಏನೂ ಹೇಳುತ್ತಿಲ್ಲ.
ಜೀಯು ಹೊನ್ನಾವರ