ಭಟ್ಕಳ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಮೀನುಗಾರಿಕಾ ಬೋಟ್‌ನ ಇಂಜಿನ್ ಕೆಟ್ಟು ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡಿರುವ ಮೀನುಗಾರರನ್ನು ಕೋಸ್ಟ್ ಗಾರ್ಡ್‌ನವರು ರಕ್ಷಿಸಿ ಕಾರವಾರಕ್ಕೆ ತಲುಪಿಸಿದ ಘಟನೆ ವರದಿಯಾಗಿದೆ.
ಖಮರುಲ್ ಬಾಹರ್ ಎನ್ನುವ ಬೋಟ್‌ನಲ್ಲಿ ಸುಮಾರು 24 ಜನ ಮೀನುಗಾರರು ಗುರುವಾರ ಬೆಳಗ್ಗೆ ಹೊನ್ನಾವರ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದರು. ಸುಮಾರು 15 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಬೋಟ್‌ನ ಇಂಜಿನ್ ಹಾಳಾಗಿದ್ದು, ಅಲ್ಲಿಯೇ ಲಂಗರು ಹಾಕಿ ತಮ್ಮನ್ನು ರಕ್ಷಿಸುವಂತೆ ಎಲ್ಲ ಕಡೆಗಳಿಗೂ ಕೂಡಾ ಕರೆ ಮಾಡಿ ತಿಳಿಸಿದ್ದರು. ಆದರೆ ಸಮುದ್ರದಲ್ಲಿ ಭಾರೀ ತೂಫಾನ್ ಇರುವುದರಿಂದ ಯಾವುದೇ ಬೋಟ್ ಅಲ್ಲಿಗೆ ಹೋಗುವುದು ಅಸಾಧ್ಯವಾಗಿತ್ತು.
ಬೋಟ್‌ನ ಮಾಲೀಕರು ಕಾರವಾರದ ಮೀನುಗಾರಿಕಾ ನಿರ್ದೇಶಕರಿಗೆ ವಿಷಯ ತಿಳಿಸಿ ರಕ್ಷಣೆಗೆ ಕೋರಿಕೆ ಸಲ್ಲಿಸಿದಂತೆ ಅವರು ಮಂಗಳೂರಿನ ಕೋಸ್ಟ್ ಗಾರ್ಡ್‌ಗೆ ತಿಳಿಸಿದ್ದರು. ಮಂಗಳೂರಿನ ಕಸ್ತೂರ್ಬಾ ಗಾಂಧಿ ಎನ್ನುವ ಕೋಸ್ಟ್‌ಗಾರ್ಡ್ ಬೋಟ್ ಕರ್ನಾಟಕ ಕರಾವಳಿಯಲ್ಲಿ ನಿಯಂತ್ರಣ ಮಾಡುತ್ತಿದ್ದು, ತಕ್ಷಣ ಅಪಾಯದಲ್ಲಿರುವ ಬೋಟ್‌ನ ಹತ್ತಿರ ಬಂದು ತಲುಪಿದರಾದರೂ ರಾತ್ರಿಯಾಗಿದ್ದರಿಂದ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಅವರ ರಕ್ಷಣೆಗೆ ಸಾಧ್ಯವಾಗಿರಲಿಲ್ಲ.
ನಂತರ ಶುಕ್ರವಾರ ಬೆಳಗ್ಗೆ ರೋಪಿನ ಸಹಾಯದಿಂದ ಅಪಾಯದಲ್ಲಿರುವ ಬೋಟ್‌ನ ಹತ್ತಿರಕ್ಕೆ ಹೋಗಿ ಅದರಲ್ಲಿರುವ 24 ಮೀನುಗಾರರನ್ನು ರಕ್ಷಣೆ ಮಾಡಿ ಕಾರವಾರಕ್ಕೆ ಕರೆದೊಯ್ದಿದ್ದು, ಬೋಟ್‌ನ್ನು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಬೋಟ್‌ನ್ನು ಸಮುದ್ರಲ್ಲಿಯೇ ಲಂಗರು ಹಾಕಿ ಇಡಲಾಗಿದ್ದು, ಇನ್ನಷ್ಟೇ ಅದರ ಕುರಿತು ಯೋಚಿಸಬೇಕಾಗಿದೆ ಎನ್ನಲಾಗಿದೆ. ಕಾರವಾರ ಬಂದರಿಗೆ ಅಪಾಯದಿಂದ ಪಾರಾಗಿ ಬಂದಿದ್ದ ಮೀನುಗಾರ ಬಂಧುಗಳನ್ನು ತಂಜೀಂ ಸಂಸ್ಥೆಯವರು ಹಾಗೂ ನಾಗರಿಕರು ಸ್ವಾಗತಿಸಿದರು.