ಹೊನ್ನಾವರ: ಪೂರ್ವ, ಪಶ್ಚಿಮವಾಗಿ ಇಳಿಜಾರಿನಲ್ಲಿರುವ ಜಿಲ್ಲೆಯ ಭೂ ಪ್ರದೇಶದಲ್ಲಿ ನಿವಾಸಿಗಳು ಮತ್ತು ಕೊಂಕಣ ರೇಲ್ವೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಾಡಿದ ಭೂ ಸ್ಥಿತ್ಯಂತರದಿಂದಾಗಿ ಸಹಜವಾಗಿ ಹಳ್ಳ, ಹೊಳೆ, ನದಿಗೆ ಸೇರಿ ಹರಿದು ಹೋಗುವ ನೀರು ದಿಕ್ಕುತಪ್ಪಿದಂತೆ ಹುಚ್ಚೆದ್ದು ಕಂಡಲ್ಲಿ ನುಗ್ಗಿ ಮನೆ, ಧರೆ ಕೆಡವಿ ಕಷ್ಟಪಟ್ಟು ಸಮುದ್ರ ಸೇರುತ್ತಿದೆ.
Advertisement
ಹತ್ತಾರು ವರ್ಷಗಳಲ್ಲಿ ಒಂದೆರಡು ಬಾರಿ ಮಳೆ ಹೆಚ್ಚಾದಾಗ ಜಿಲ್ಲೆಗೆ ನೆರೆ ಕಾಡುತ್ತಿತ್ತು. ನೋಡನೋಡುತ್ತಿದ್ದಂತೆ ಬೆಟ್ಟದಿಂದ ತನ್ನ ದಾರಿ ಹಿಡಿದು ಹಳ್ಳಿಹಳ್ಳಿಯಿಂದ ಇಳಿದು ಪೇಟೆಯ ರಾಜಾಕಾಲುವೆ ಮಾರ್ಗವಾಗಿ ಸಮುದ್ರ ಸೇರುತ್ತಿತ್ತು. ಈಗ ಪ್ರತಿವರ್ಷ ಮಳೆಗಾಲ ಆರಂಭದಲ್ಲಿ ನೆರೆ ಗ್ಯಾರಂಟಿ. ಈ ವರ್ಷ ಜೂನ್ ತಿಂಗಳಲ್ಲಿ ಮಳೆ ಮಾಯವಾಗಿತ್ತು. ಜುಲೈ 2ನೇ ವಾರದಲ್ಲಿ ಬಿದ್ದ 2ದಿನದ ಮಳೆಗೆ ನೆರೆ ಕೋಲಾಹಲವಾಗಿ ಮಾಧ್ಯಮಗಳಲ್ಲಿ ಮಿಂಚಿತು.
Related Articles
Advertisement
ಈಗ ಎರಡು ವರ್ಷಗಳಿಂದ ಚತುಷ್ಪಥ ಕಾಮಗಾರಿ ಗುಡ್ಡ ಸೀಳಿಕೊಂಡು ನಡೆದಿದೆ. ಅಗಾಧ ಪ್ರಮಾಣದ ಮಣ್ಣು ಸ್ಥಿತ್ಯಂತರವಾಗಿದೆ. ಧರೆ ನೆತ್ತಿಯಮೇಲಿನ ತೂಗುಕತ್ತಿಯಾಗಿದೆ. ಬೆಟ್ಟದಿಂದ ಹರಿದು ಬರುವ ನದಿ, ಹಳ್ಳಗಳ ಎಡಬಲ ದಂಡೆಗಳಲ್ಲಿ ಸಾವಿರಾರು ಎಕರೆ ಅತಿಕ್ರಮಣ ಸಾಗುವಳಿಯಾಗಿದೆ. ಕೊಂಕಣ ರೇಲ್ವೆ ಜೋಡು ಮಾರ್ಗಕ್ಕಾಗಿ ಖರೀದಿಸಿದ ಭೂಮಿಯೆಲ್ಲಾ ಅತಿಕ್ರಮಣದಾರರ ಪಾಲಾಗಿದೆ. ರೇಲ್ವೆ ಹಳಿಯ ಅಕ್ಕಪಕ್ಕದಲ್ಲೇ ಮನೆಗಳೆದ್ದಿವೆ. ಅಂಗಡಿಕಾರರು, ಪೇಟೆಯ ಪಕ್ಕದ ಮನೆಯವರು ತಮ್ಮ ತ್ಯಾಜ್ಯವನ್ನೆಲ್ಲಾ ಗಟಾರಿಗೆ ಸುರಿಯುತ್ತಾರೆ. ಶಿಕ್ಷಣ ಸಂಸ್ಥೆಗಳು ತಮ್ಮ ಸಾವಿರಾರು ವಿದ್ಯಾರ್ಥಿಗಳ ಮೂತ್ರಾಲಯದ ಮತ್ತು ಊಟದ ನಂತರದ ನೀರನ್ನು ಗಟಾರುಗಳಿಗೆ ಹರಿಸುತ್ತವೆ. ಪೇಟೆಗೆ ಬಂದ ಪ್ರವಾಹ ಮಳೆಗಾಲದ ನೀರು ಹೋಗುವ ಗಟಾರಿನಲ್ಲಿ ಹರಿಯಲಾರದೆ ರಸ್ತೆ ಮೇಲೆ ಹರಿಯುತ್ತಿದೆ. ತಗ್ಗುಪ್ರದೇಶದ ಮನೆಗಳೊಳಗೆ ನೀರು ನುಗ್ಗುತ್ತದೆ.
1947ರಲ್ಲಿ ಸ್ವಾತಂತ್ರ್ಯ ಬಂದಾಗ ಉತ್ತರಕನ್ನಡ ಜಿಲ್ಲೆಯ ಜನಸಂಖ್ಯೆ 3ಲಕ್ಷ. ಪ್ಲೇಗು, ಸಿಡುಬು, ಮಲೇರಿಯಾಗಳು ಲಕ್ಷ ಜನರನ್ನು ಬಲಿಪಡೆದಿದ್ದವು. 72ವರ್ಷಗಳಲ್ಲಿ ಊರು ಬಿಟ್ಟವರ ಹೊರತಾಗಿ 13ಲಕ್ಷ ಜನ ಜಿಲ್ಲೆಯಲ್ಲಿದ್ದಾರೆ. ಜಿಲ್ಲೆಯ ಅರ್ಧದಷ್ಟು ಜನರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿಲ್ಲ. ಮಳೆಗಾಲದಲ್ಲಿ ನೆರೆಕಾಟ ತಪ್ಪುವುದಿಲ್ಲ. ಗುಡ್ಡ ಬೆಟ್ಟದ ನೀರನ್ನು ಅರಣ್ಯ ಇಲಾಖೆ ಮತ್ತು ಖಾಸಗಿ ಭೂಮಿಗೆ ಬಿಡುವ ನೀರನ್ನು ಭೂ ಮಾಲಕರು ಹೊಂಡ ತೆಗೆದು ನೀರಿಂಗಿಸಿದ್ದರೆ ಅಂತರ್ಜಲ ಏರುತ್ತಿತ್ತು. ನೆರೆ ತಪ್ಪುತ್ತಿತ್ತು. ಇಂತಹ ಸಣ್ಣ ಯೋಜನೆ ಜನರ ತಲೆಗೆ ಹೋಗುವುದಿಲ್ಲ. ದೊಡ್ಡ ಯೋಜನೆ ಬರುವುದಿಲ್ಲ. ವರ್ಷವೂ ನೆರೆ, ಪರಿಹಾರ, ಗಂಜಿಕೇಂದ್ರ ತಪ್ಪಿಲ್ಲ.