ಹೊನ್ನಾವರ: ಸ್ವಚ್ಛ, ನೇರ ಐದು ಕಿಮೀ ಉದ್ದದ ಸಮುದ್ರ ತೀರ, ಅದಕ್ಕೆ ಹೊಂದಿಕೊಂಡಿರುವ ಎತ್ತರದ ಮ್ಯಾಂಗನೀಸ್ ಗುಡ್ಡ, ಓರೆಯಲ್ಲಿ ಶ್ರೀ ಉಗ್ರನರಸಿಂಹ, ಶ್ರೀ ಉಮಾಂಬಾಗಣಪತಿ ದೇವಸ್ಥಾನ ಹಾಗೂ ಗುರುಮೂರ್ತಿಗಳು. ಇನ್ನೊಂದು ಬದಿಗೆ ವಿಶಾಲ ಹಸಿರು ಚಿಮ್ಮುವ ಗದ್ದೆ, ತೋಟಗಳು. ಇಂತಹ ಅಪೂರ್ವ ನೈಸರ್ಗಿಕ ಸೌಂದರ್ಯಕ್ಕೆ ಅರಣ್ಯ ಇಲಾಖೆ ಪ್ರವಾಸೋದ್ಯಮದ ಸೌಲಭ್ಯ ಒದಗಿಸಿಕೊಟ್ಟು ಜನಾಕರ್ಷಕ ಮಾಡಿತು.
ಈಗ ಶ್ರೀ ರಾಘವೇಶ್ವರ ಶ್ರೀಗಳ ಮಾರ್ಗದರ್ಶ ನದಲ್ಲಿ ಮಠವನ್ನು ಶಿಲಾಮಯವಾಗಿ ಶಿಲ್ಪಶಾಸ್ತ್ರದಂತೆ ನಿರ್ಮಿಸಲಾಗಿದ್ದು, ಗುರುಮೂರ್ತಿ ಗಳಿಗೆ ಪ್ರತ್ಯೇಕ ಗುಡಿ ನಿರ್ಮಿಸಲಾಗಿದೆ. 1954ರಲ್ಲಿ ರಾಮಚಂದ್ರಾಪುರ ಮಠದ 35ನೇ ಪೀಠಾಧಿಪತಿಗಳಾದ ಶ್ರೀ ರಾಘವೇಂದ್ರ ಭಾರತೀ ಸ್ವಾಮಿಗಳು ಅಪ್ಸರಕೊಂಡವನ್ನು ಶಾಖಾಮಠವಾಗಿ ಸ್ವೀಕರಿಸಿದ್ದರು. ಸ್ಥಳೀಯರು ಶಂಭು ಹೆಗಡೆ ಮುಖಂಡತ್ವದಲ್ಲಿ ಮಠವನ್ನು ಕಾಯ್ದುಕೊಂಡು ಬಂದರು. ನವೀಕರಣಮಾಡಿಸಿ ಸ್ಥಿರಮೂರ್ತಿ ಪ್ರತಿಷ್ಠಾಪನೆ ಮಾಡಿಸಿದ್ದರು. ನಂತರ ಉಂಟಾದ ದೋಷಗಳನ್ನು ಸರಿಪಡಿಸಿಕೊಂಡು ಮಠಾಯತನ ಪದ್ಧತಿಯಂತೆ ಪುನಃ ಚರಮೂರ್ತಿ ಪ್ರತಿಷ್ಠಾಪನೆಗಾಗಿ ಸಿದ್ಧತೆಯಾಗಿದೆ.
ಜ. 17ರಿಂದ 19ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಿಗದಿಯಾಗಿವೆ. ಜ. 17ರಂದು ನವಚಂಡಿಹವನ, ವಾಸ್ತುಹವನ, ದೇವರ ಸಪ್ತಾದಿವಾಸ ಕಾರ್ಯಕ್ರಮಗಳಿವೆ. ಜ. 18ರಂದು ಶ್ರೀಗಳು ಸಪರಿವಾರ ಉಗ್ರ ನರಸಿಂಗ, ಉಮಾಂಬಾಗಣಪತಿ ಹಾಗೂ ಗುರುಮೂರ್ತಿಗಳ ಪ್ರತಿಷ್ಠಾಪನೆ, ಶಿಖರ ಕಲಶ ಪ್ರತಿಷ್ಠೆ, ಪ್ರಾಣಪ್ರತಿಷ್ಠೆ, ಮೊದಲಾದ ಕಾರ್ಯಕ್ರಮಗಳನ್ನು ನೆರವೇರಿಸುವರು. ಜ. 19ರಂದು ಬ್ರಹ್ಮಕಲಶಾಭಿಷೇಕ, ಪೂರ್ಣಾಹುತಿ ನಡೆಯಲಿದೆ. ಜ. 14ರಿಂದ 19ರವರೆಗೆ ಚತುರ್ವೇದ ಪಾರಾಯಣ ನಡೆಯಲಿದೆ.
ಜ. 16ರಂದು ಸಂಜೆ ಆಗಮಿಸುವ ರಾಘವೇಶ್ವರ ಶ್ರೀಗಳು ಜ. 17ರಂದು 6-8ರವರೆಗೆ ರಾಮಪದ ಕಾರ್ಯಕ್ರಮ ನಡೆಸುವರು. ಜ. 18ರಂದು 3ಕ್ಕೆ ಶ್ರೀಗಳ ಅನುಗ್ರಹ ಸಭೆ ನಡೆಯಲಿದೆ. ನಂತರ ಶ್ರೀಪಾದ ಭಟ್ ಕಡತೋಕಾ ಇವರ ಗೀತರಾಮಾಯಣ, ಜ. 19ರಂದು ರಾತ್ರಿ ಯಕ್ಷಗಾನವಿದೆ. ಹೊನ್ನಾವರ ಮಂಡಲದ ಪ್ರಧಾನ ಗುರಿಕಾರ ವೇ| ಸುಬ್ರಹ್ಮಣ್ಯ ಭಟ್ಟರ ಮಾರ್ಗದರ್ಶನದಲ್ಲಿ ಸೀಮೆಯ ಪ್ರಮುಖರಾದ ಸುಬ್ರಾಯ ಹೆಗಡೆ ಮಾನ್ಯ, ಪಿ.ಎಸ್. ಭಟ್ ಉಪ್ಪೋಣಿ ಮೊದಲಾದವರಿಂದ ಕಾರ್ಯಕ್ರಮದ ಸಿದ್ಧತೆ ನಡೆದಿದೆ. ಶರಾವತಿ ಹುಟ್ಟಿದ ಅಂಬುತೀರ್ಥದ ಬಳಿ ರಾಮಚಂದ್ರಾಪುರ ಮಠವಿದೆ. ಶರಾವತಿ ಸಂಗಮವಾಗುವ ಅಪ್ಸರಕೊಂಡದ ಬಳಿ ಮಠದ ಶಾಖೆ ಇದೆ ಎಂದು ರಾಘವೇಶ್ವರ ಶ್ರೀಗಳು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಅವರ ಬಯಕೆಯಂತೆ ಶಿಷ್ಯರು, ಭಕ್ತರು ಮಠಕ್ಕೆ ಹೊಸ ಕಳೆಬರುವಂತೆ ಮಾಡಿದ್ದಾರೆ.
ಹಲವು ಕನ್ನಡ, ತಮಿಳು ಸಿನಿಮಾ ಚಿತ್ರೀಕರಣಗೊಂಡ, ಚಿತ್ರವಿಚಿತ್ರ ಗುಹೆಗಳುಳ್ಳ, ಮಿರಿಮಿರಿ ಮಿಂಚುವ ಗುಡ್ಡಗಳನ್ನೊಳಗೊಂಡ ಅಪ್ಸರಕೊಂಡದಲ್ಲಿ ನಿಸರ್ಗ, ಆಧ್ಯಾತ್ಮ ಸಮ್ಮಿಲನಗೊಂಡು ದೈವೀ ಅನುಭೂತಿ ನೀಡುವ ಅಪರೂಪದ ಕ್ಷೇತ್ರವಾಗಿ ಪ್ರವಾಸಿಗರನ್ನು, ಭಾವುಕರನ್ನು ಸಮಾನವಾಗಿ ಸೆಳೆಯುತ್ತಿದೆ.