ಹೊನ್ನಾವರ: ಜಿಲ್ಲೆಯ ಹೊನ್ನಾವರ, ಸಿದ್ದಾಪುರ, ಭಟ್ಕಳ, ಕಾರವಾರ, ಶಿರಸಿ ತಾಲೂಕುಗಳ ಅರಣ್ಯ ಪ್ರದೇಶದಲ್ಲಿ ಮಂಗಗಳು ಸಾಯುತ್ತಿದ್ದು, ಹೊರಗಿನಿಂದ ಕಾಡಿನ ಪ್ರದೇಶಕ್ಕೆ ಹೋಗದೆ, ಕಾಡಿನ ಪ್ರದೇಶದಲ್ಲಿ ಇದ್ದವರು ವಿಶೇಷ ಕಾಳಜಿ ವಹಿಸಿ ಕಾಯಿಲೆ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಕೆಎಫ್‌ಡಿ ಪ್ರಭಾರ ವೈದ್ಯಾಧಿಕಾರಿ ಡಾ| ಸತೀಶ ಶೇಟ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ನಕುಲ್ ಇವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಸಭೆ ನಡೆಸಲಾಗಿದೆ. ಮಂಗಗಳು ಸತ್ತಿದ್ದು ಕಂಡುಬಂದಲ್ಲಿ ಅವುಗಳನ್ನು ಸುಟ್ಟುಹಾಕುವ ಮತ್ತು ಆ ಪ್ರದೇಶದಲ್ಲಿ ಔಷಧ ಸಿಂಪಡಿಸುವ ಕೆಲಸವನ್ನು ಅರಣ್ಯ ಇಲಾಖೆಗೆ ವಹಿಸಿಕೊಡಲಾಗಿದೆ. ದನಗಳ ಉಣ್ಣಿ ನಿವಾರಣೆಯ ಕೆಲಸವನ್ನು ಪಶು ವೈದ್ಯಕೀಯ ಇಲಾಖೆಗೆ ವಹಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಈ ಪ್ರದೇಶದಲ್ಲಿ ಜ್ವರ ಬಂದವರನ್ನು ಗುರುತಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಲಿದ್ದು, ಜ್ವರ ಪೀಡಿತ ಪ್ರದೇಶದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಕಾಡಿನ ಪ್ರದೇಶದಲ್ಲಿ ಮನೆಮಾಡಿಕೊಂಡವರು ಇಲಾಖೆ ಉಚಿತವಾಗಿ ನೀಡುವ ಎಣ್ಣೆಯನ್ನು ಕಾಲಿಗೆ ಹಚ್ಚಿಕೊಂಡು ಓಡಾಡಬೇಕು. ಹೊರಗೆ ಹೋಗಿ ಬಂದರೆ ಬಿಸಿ ನೀರಿನಿಂದ ಕೈಕಾಲು ತೊಳೆದುಕೊಳ್ಳಬೇಕು. ಈ ಸೂಚನೆಗಳನ್ನು ಆಯಾ ಭಾಗದ ಆರೋಗ್ಯ ಸಿಬ್ಬಂದಿ ನೀಡುತ್ತಾರೆ. ವೈರಾಣುಗಳು ತೀಕ್ಷ್ಣವಾಗಿರುವುದರಿಂದ ಸಾರ್ವಜನಿಕರು ಸಂಪೂರ್ಣ ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.
ಹೊನ್ನಾವರ 17, ಸಿದ್ದಾಪುರ 24, ಭಟ್ಕಳ 6, ಕಾರವಾರ 1, ಶಿರಸಿ 2 ಮಂಗಗಳು ಸತ್ತಿರುವುದನ್ನು ಗುರುತಿಸಿ ಉಣ್ಣಿಗಳನ್ನು ನಿವಾರಿಸಲಾಗಿದೆ. ಒಂಬತ್ತು ಮಂಗಗಳ ಶವ ಪರೀಕ್ಷೆ ಮಾಡಿಸಲಾಗಿದೆ. ಮೂರು ಕಡೆ ಉಣ್ಣಿ ಸಂಗ್ರಹಿಸಲಾಗಿದೆ. ಜ್ವರ ಬಂದ ಹೊನ್ನಾವರ 9, ಸಿದ್ದಾಪುರ 24 ಜನರ ರಕ್ತ ಪಡೆದು ಪರೀಕ್ಷೆಗೆ ಕಳಿಸಲಾಗಿದೆ. ಇಂತಹ ಕಾಯಿಲೆಯ ರಕ್ತ ಪರೀಕ್ಷೆಯನ್ನು ದೇಶದಲ್ಲಿ ಬೆಂಗಳೂರು ಮತ್ತು ಪುಣೆಗಳಲ್ಲಿ ಮಾತ್ರ ಮಾಡಲಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳ ವರದಿಯನ್ನು ಆರೋಗ್ಯ ಇಲಾಖೆ ದೃಢಪಡಿಸುವುದಿಲ್ಲ. ಆದರೆ ಯಾವುದೇ ಆಸ್ಪತ್ರೆಯಲ್ಲಿ ಕಾಯಿಲೆ ಪೀಡಿತ ಜನ ಚಿಕಿತ್ಸೆ ಪಡೆಯುತ್ತಿದ್ದರೆ ಇಲಾಖೆಗೆ ತಿಳಿಸಬೇಕು. ಶಿರಸಿ, ಸಿದ್ದಾಪುರ ಸಹಿತ ಮಂಗಗಳು ಮೃತಪಟ್ಟ ತಾಲೂಕುಗಳಲ್ಲಿ ಸಭೆ ನಡೆಸಿ ಕಾರ್ಯಯೋಜನೆ ರೂಪಿಸಲಾಗಿದೆ. ಕರಪತ್ರ ಹಂಚಿಕೆ ಮತ್ತು ಧ್ವನಿವರ್ಧಕದ ಮುಖಾಂತರ ಜನರನ್ನು ಎಚ್ಚರಿಸಲಾಗುತ್ತಿದೆ.
ಇಲಾಖೆ ಏನೇ ಮಾಡಿದರೂ ಜನ ಸಹಕರಿಸಿದರೆ ಮಾತ್ರ ಕಾಯಿಲೆ ನಿಯಂತ್ರಣ ಸಾಧ್ಯವಿದೆ. ಲಸಿಕೆಗೆ ಬೇಡಿಕೆ ಹೆಚ್ಚುತ್ತಿದ್ದು, ಹೆಚ್ಚುವರಿ ತಂದು ಕೊರತೆಯನ್ನು ತುಂಬಲಾಗುವುದು ಎಂದು ಅವರು ಹೇಳಿದರು.
ಪ್ರತಿವರ್ಷ ಮಳೆಗಾಲ ಮುಗಿದ ಮೇಲೆ ಚಳಿಗಾಲದಲ್ಲಿ ಚುಚ್ಚುಮದ್ದು ನೀಡಲಾಗುತ್ತಿತ್ತು. ಬೇಸಿಗೆ ಆರಂಭವಾದೊಡನೆ ಚಿಗುರುವ ಮಂಗನ ಕಾಯಿಲೆ ಒಂದು ಮಳೆಬಿದ್ದೊಡನೆ ಉಣ್ಣಿಗಳೆಲ್ಲ ನಾಶವಾಗಿ ಮಾಯವಾಗುತ್ತಿತ್ತು. ಈ ವರ್ಷ ಚಳಿಗಾಲದಲ್ಲೇ ಕಾಯಿಲೆ ಆರಂಭವಾಗಿದೆ. ಇನ್ನು ನಾಲ್ಕು ತಿಂಗಳು ಬೇಸಿಗೆ ಇದೆ. ವೈರಾಣುಗಳು ತೀವ್ರ ವಿಷಪೂರಿತವಾಗಿವೆ. ಹೊಸ ಊರುಗಳಲ್ಲಿ ಮಂಗಗಳು ಸಾಯುತ್ತಿವೆ. ಸರ್ಕಾರಿ ಯಂತ್ರದೊಟ್ಟಿಗೆ ಸಾರ್ವಜನಿಕರು ಕಾಳಜಿವಹಿಸಿ ಜೀವಹಾನಿಯಿಂದ ದೂರ ಉಳಿಯಬೇಕಾಗಿದೆ. ಕಳೆದ ಎರಡು ವರ್ಷಗಳಿಂದ ಪೇಟೆಯಲ್ಲೂ ಮಂಗನ ಹಾವಳಿ ತೀವ್ರವಾಗಿದ್ದು, ರೋಗ ಎಲ್ಲಿಯ ತನಕ ಹಬ್ಬುತ್ತದೆಯೋ ಗೊತ್ತಿಲ್ಲ. ಕಾಳಜಿ ಅಗತ್ಯವಾಗಿದೆ.
•ಡಾ| ಸತೀಶ ಶೇಟ್,
ಕೆಎಫ್‌ಡಿ ಪ್ರಭಾರ ವೈದ್ಯಾಧಿಕಾರಿ