Advertisement
ರಾಜ್ಯದಲ್ಲೇ ಅತ್ಯಂತ ದೊಡ್ಡದಾದ 600 ಕೋಟಿ ರೂ. ವೆಚ್ಚದ ಸಾಗರಮಾಲಾ ಸಂಪರ್ಕವನ್ನೊಳಗೊಂಡ ಸರ್ವಋತು ವಾಣಿಜ್ಯ ಬಂದರು ನಿರ್ಮಾಣ ಶರಾವತಿ ಅಳವೆಯನ್ನೊಳಗೊಂಡು ಕಾಸರಕೋಡ ಟೊಂಕಾ ಪ್ರದೇಶದ 100 ಎಕರೆ ಪ್ರದೇಶದಲ್ಲಿ ಆರಂಭವಾಗಿದೆ. ಜೊತೆಯಲ್ಲಿ ಮೀನುಗಾರರ ಪ್ರತಿಭಟನೆ ನಡೆದಿದೆ. ಮೀನುಗಾರಿಕೆಗೆ, ಮೀನುಗಾರರಿಗೆ ಮತ್ತು ಮೀನುಗಾರರ ವಸತಿಗೆ ವಾಣಿಜ್ಯ ಬಂದರಿನಿಂದ ಯಾವುದೇ ತೊಂದರೆಯಿಲ್ಲ. ಮಾತ್ರವಲ್ಲ ಮೀನುಗಾರಿಕೆಗೆ ಹೆಚ್ಚು ಅವಕಾಶವಾಗಲಿದೆ ಎಂಬುದನ್ನು ಮೀನುಗಾರರಿಗೆ ಮನದಟ್ಟು ಮಾಡಿಕೊಟ್ಟರೆ ವಾಣಿಜ್ಯ ಬಂದರು ನಿರ್ಮಾಣ ವೇಗ ಪಡೆಯಲು ಸಾಧ್ಯವಿದೆ.
Related Articles
Advertisement
ಅಳವೆಯ ಹೂಳೆತ್ತಿ, ಎಡಬಲದಲ್ಲಿ ತಡೆಗೋಡೆ ನಿರ್ಮಿಸಲು ಅಗಾಧ ಪ್ರಮಾಣದ ಕಲ್ಲುಗಳು ಬೇಕು, ಅದನ್ನು ಒಯ್ಯಲು ಬೇಕಾಗಿ ರಸ್ತೆ ನಿರ್ಮಿಸುತ್ತಿದ್ದೇವೆ, ರಸ್ತೆ ಆದ ಮೇಲೆ ಹೂಳೆತ್ತುವ ಕೆಲಸ ಆರಂಭವಾಗುತ್ತದೆ, ಬಂದರು ನಿರ್ಮಾಣಕ್ಕೂ ಯಂತ್ರೋಪಕರಣಗಳು ಸಮುದ್ರ ಮಾರ್ಗದಲ್ಲಿ ಅಳವೆದಾಟಿ ಬರಬೇಕು ಅನ್ನುತ್ತದೆ ಕಂಪನಿ. ಅಳವೆ ವಿಸ್ತಾರದಿಂದ ಮಳೆಗಾಲ, ಬೇಸಿಗೆ ಎಲ್ಲ ಕಾಲದಲ್ಲೂ ಟ್ರಾಲರ್ ಮೀನುಗಾರಿಕೆ ನಡೆಸಬಹುದು. ಮೀನುಗಾರರಿಗೆ ಪ್ರತ್ಯೇಕ ಮಾರ್ಗವಿರುತ್ತದೆ. ನಮಗೆ ಹೆಚ್ಚು ಜಾಗ ಬೇಕಾದರೆ ಹೂಳೆತ್ತಿದ ಮಣ್ಣಿನಿಂದ ಹೊಸ ಜಾಗ ನಿರ್ಮಿಸಿಕೊಳ್ಳುತ್ತೇವೆ. ಮೀನುಗಾರರ ಮನೆಗೆ ಹಾನಿ ಮಾಡುವುದಿಲ್ಲ. ಅರ್ಹತೆ ಇದ್ದವರಿಗೆ ನೌಕರಿ ಕೊಡುತ್ತೇವೆ ಅನ್ನುತ್ತಾರೆ ಕಂಪನಿ ಅಧಿಕಾರಿಗಳು.
ಬಂದರು ನಿರ್ಮಾಣದಿಂದ ಆಯಾತ,ನಿರ್ಯಾತ ಹೆಚ್ಚಾಗುತ್ತದೆ. ಇಲ್ಲಿ ಸಮುದ್ರದ ಆಳದಲ್ಲಿ ಕಲ್ಲುಗಳಿಲ್ಲದ ಕಾರಣ ದೊಡ್ಡ ಹಡಗುಗಳು ಬರಬಹುದು, ಹೊಸಪಟ್ಟಣದಿಂದ ರೇಲ್ವೆ ಸಂಪರ್ಕವೂ ಸಿಗಲಿದೆ. ಉದ್ಯೋಗಾವಕಾಶ ಹೆಚ್ಚಲಿದೆ. ಈಗಿನ ಮೀನುಗಾರಿಕೆ ಜೊತೆ ಆಳಮೀನುಗಾರಿಕೆ ನಡೆಸಬಹುದು ಅನುತ್ತದೆ ಕಂಪನಿ.
ಅತ್ಯಂತ ಆಧುನಿಕವಾಗಿ ಬಂದರು ನಿರ್ಮಾಣವಾಗಲಿದ್ದು ಜಲ, ವಾಯು, ಪರಿಸರ ಮಾಲಿನ್ಯ ಆಗದಂತೆ, ಬಹುಪಾಲು ಯಾಂತ್ರೀಕೃತ ಉಪಕರಣಗಳೊಂದಿಗೆ ಬಂದರು ನಿರ್ಮಿಸುತ್ತೇವೆ. ಇಂತಹದೇ ಬಂದರನ್ನು ಆಂಧ್ರಪ್ರದೇಶದಲ್ಲಿ ನಿರ್ಮಿಸಿದ್ದೇವೆ. ಬೇಕಾದರೆ ಕರೆದೊಯ್ದು ತೋರಿಸುತ್ತೇವೆ ಅನ್ನುತ್ತದೆ ಕಂಪನಿ. ಈ ಎಲ್ಲ ವಿವರಗಳನ್ನು ಮೀನುಗಾರರಿಗೆ ಮನದಟ್ಟು ಮಾಡಿಕೊಡಲು ಕಂಪನಿ ಸಿದ್ಧತೆ ನಡೆಸಿದೆ.
ರಾಜಕಾರಣಿಗಳು ಮಧ್ಯಪ್ರವೇಶಿಸಿದ್ದಾರೆ. ಶೇ.80 ರಷ್ಟು ಆಯಾತ, ನಿರ್ಯಾತಗಳು ಬಂದರು ಮುಖಾಂತರವೇ ನಡೆದರೆ ದೇಶಕ್ಕೆ ಲಾಭ. ಆದ್ದರಿಂದ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಈ ಬಂದರು ಆಗಲೇ ಬೇಕಿದೆ. ಸರ್ಕಾರದ ನಿರ್ಧಾರವನ್ನು ಬದಲಿಸುವುದು ಅಷ್ಟು ಸುಲಭವಲ್ಲ ಎಂಬುದನ್ನು ಉತ್ತರ ಭಾರತದ ರೈತರ ಹೋರಾಟದಲ್ಲಿ ನೋಡುತ್ತಿದ್ದೇವೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರವಿದೆ. ಸರ್ಕಾರಗಳ ನಿರ್ಣಯವನ್ನು ಆಡಳಿತ ಪಕ್ಷದ ರಾಜಕಾರಣಿಗಳು ವಿರೋಧಿಸುವುದಿಲ್ಲ. ಆದರೆ ಮೀನುಗಾರರಲ್ಲಿ ಯೋಜನೆ ಕುರಿತು ವಿಶ್ವಾಸ ಹುಟ್ಟಿಸುವ ಕೆಲಸವನ್ನು ಅವರು ಮಾಡದಿದ್ದರೆ ಪ್ರತಿಪಕ್ಷಗಳು ಲಾಭಮಾಡಿಕೊಳ್ಳಲಿವೆ.
ಇದನ್ನೂ ಓದಿ :ಅಕ್ರಮ ಗಾಂಜಾ ಮಾರಾಟ ಜಾಲ ಪತ್ತೆ: ವ್ಯಕ್ತಿ ಬಂಧನ
ಹೈದರಾಬಾದ್ ಮೂಲದ, ಅಲ್ಲಿ ಆಡಳಿತ ಕಾರ್ಯಾಲಯ ಹೊಂದಿರುವ ಹೊನ್ನಾವರ ಪೋರ್ಟ್ ಕಂಪನಿ ಬೆಂಗಳೂರಿನಲ್ಲಿ ರಜಿಸ್ಟರ್ ಹೊಂದಿದೆ. ಭಾರತೀಯ ಸೈನ್ಯದ ನಿವೃತ್ತ ಕ್ಯಾಪ್ಟನ್, ಬಂದರು ನಿರ್ಮಾಣದಲ್ಲಿ ಅನುಭವವುಳ್ಳ ಸೂರ್ಯಪ್ರಕಾಶ ಗುತ್ತಾ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ
ಹೊನ್ನಾವರ ಬಂದರು ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಮಾಧ್ಯಮಗಳ ಮುಖಾಂತರ ಬಂದರಿನ ವಿವರವನ್ನು ಸಚಿತ್ರವಾಗಿ ತೆರೆದಿಡುವುದಾಗಿ ಉದಯವಾಣಿಗೆ ತಿಳಿಸಿದ್ದಾರೆ.
ಮಂಗಳೂರು ಬಂದರಿಗಿಂತ ದೊ ಡ್ಡಬಂದರು ಇಲ್ಲಿ ನಿರ್ಮಾಣವಾದರೆ, ಇದರಿಂದ ಮೀನುಗಾರರಿಗೆ, ಅವರ ವಸತಿಗೆ, ಮೀನುಗಾರಿಕೆಗೆ ತೊಂದರೆಯಾಗದಿದ್ದರೆ, ಅವರಿಗೆ ಲಾಭತರುವಂತಿದ್ದರೆ, ಇಡೀ ಜಿಲ್ಲೆಗೆ, ರಾಜ್ಯಕ್ಕೆ ದೊಡ್ಡ ಪ್ರಮಾಣದ ಲಾಭವಾಗುವುದಾದರೆ ಬಂದರನ್ನು ಜನ ಸ್ವಾಗತಿಸುತ್ತಾರೆ.