ಹೊನ್ನಾಳಿ: ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ನೀರಿನ ದರವನ್ನು ಏಕಾಎಕಿಯಾಗಿ ಏರಿಸಿರುವುದು ಸರಿಯಾದ ಕ್ರಮವಲ್ಲ ಎಂದು ತಾಪಂ ಸದಸ್ಯ ಸಿ.ಆರ್. ಶಿವಾನಂದ ಆಕ್ಷೇಪಿಸಿದರು.
ಸಾಮರ್ಥ್ಯಸೌಧದಲ್ಲಿ ನಡೆದ ತಾಪಂ ಸದಸ್ಯರ ತುರ್ತುಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರ ಅಕ್ಕಿಯನ್ನು ಉಚಿತವಾಗಿ ವಿತರಿಸಿ ಕುಡಿಯುವ ನೀರಿನ ದರವನ್ನು 2 ರಿಂದ 5 ರೂ.ಗೆ ಹೆಚ್ಚಿಸಿರುವುದರಿಂದ ಬಡವರಿಗೆ ಕಷ್ಟಕರವಾಗಿದೆ. ತಕ್ಷಣ ಈ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಈ ಹಿಂದೆ ಇದ್ದ ದರವನ್ನು ಮುಂದುವರಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಸದಸ್ಯೆ ಅಂಬುಜಾಕ್ಷಿ, ಮುಕ್ತೇನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಮೂರು ತಿಂಗಳಾದರೂ ದುರಸ್ತಿ ಮಾಡಿಲ್ಲ. ಗ್ರಾಮದ ಜನತೆ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ತಾಪಂ ಇಒ ಗಂಗಾಧರಮೂರ್ತಿ, ಅನೇಕ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಘಟಕದಿಂದ ನೇರ ಸಂಪರ್ಕ ಮಾಡಿಕೊಂಡಿರುತ್ತಾರೆ ಹೀಗಾದರೆ ಎಲ್ಲರಿಗೂ ನೀರು ಲಭ್ಯವಾಗುವುದಿಲ್ಲ.
ಕುಂಕುವ ಗ್ರಾಮದಲ್ಲಿ ಶುದ್ಧ ಕುಡಿಯುವ ಘಟಕದ ಗಾಜು ಒಡೆದು ಯಂತ್ರದ ಮೆಮೊರಿಯನ್ನು ಕದ್ದೊಯ್ದಿದ್ದಾರೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು. ದರ ಏರಿಕೆ ವಿಚಾರ ಸರ್ಕಾರಕ್ಕೆ ಸಂಬಂಧಿಸಿದ್ದು. ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲು ಸರ್ಕಾರದಿಂದ 98.96 ಲಕ್ಷ ರೂ. ಅನುದಾನ ಬಂದಿದ್ದು, ಕ್ರಿಯಾ ಯೋಜನೆ ರೂಪಿಸಬೇಕಿದೆ ಎಂದು ತಿಳಿಸಿದರು.
ತಾಪಂ ಪ್ರಭಾರಿ ಅಧ್ಯಕ್ಷ ಕೆ.ಎಲ್. ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪೇಶಪ್ಪ, ತಾಪಂ ಸದಸ್ಯರಾದ ಕೆ.ಎಸ್.ವಿಜಯಕುಮಾರ್, ರೇಖಾ, ದ್ರಾಕ್ಷಾಯಣಮ್ಮ, ಕವಿತಾ, ಅಮೃತಬಾಯಿ ಹಾಗೂ ಅಧಿಕಾರಿಗಳು ಹಾಜರಿದ್ದರು.