“ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ’ ಎಂಬ ಸಿನಿಮಾದ ಪೋಸ್ಟರ್ ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಿತ್ತು. ಈಗ ಆ ಚಿತ್ರತಂಡ ಚಿತ್ರೀಕರಣ ಪೂರ್ಣಗೊಳಿಸಿ, ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಬಂದಿದೆ. ಹೊನ್ನರಾಜ್ ಈ ಸಿನಿಮಾದ ನಿರ್ದೇಶಕರು. ಜೊತಗೆ ನಾಯಕರಾಗಿಯೂ ನಟಿಸಿದ್ದಾರೆ.
ತಮ್ಮ ಸಿನಿಮಾ ಬಗ್ಗೆ ಮಾತನಾಡುವ ಹೊನ್ನರಾಜ್, “ಸಿನಿಮಾ ಮಾಡಬೇಕು ಎನ್ನುವುದು ನನ್ನ ಬಹಳ ವರ್ಷದ ಕನಸು. ಕುಟುಂಬದಲ್ಲಿ ನಡೆದ ನೈಜ ಘಟನೆ ಆಧರಿಸಿ ಚಿತ್ರ ಮಾಡಲಾಗಿದೆ. ಶೀರ್ಷಿಕೆಗೆ ನ್ಯಾಯ ಒದಗಿಸಿದ್ದು, ಒಳ್ಳೆಯ ಚಿತ್ರ ನೀಡಲಿದ್ದೇವೆ. ಯಾವುದೇ ತೊಂದರೆ ಇಲ್ಲದೆ ಚಿತ್ರೀಕರಣ ಪೂರ್ಣಗೊಂಡಿದೆ. ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಚಿತ್ರ ಇದಾಗಿದ್ದು ಇದರಲ್ಲಿ ನಾಯಕ ಯಶ್ ಅಭಿಮಾನಿ. ಸ್ನೇಹಕ್ಕೆ ಹೆಚ್ಚು ಮಹತ್ವ ಕೊಡುವವನು, ಸಮಾಜ ಸೇವೆಯಲ್ಲಿರುವ ನಾಯಕ ಮದುವೆ ಆಗುತ್ತಾನೋ ಇಲ್ಲವೋ ಎನ್ನುವುದೇ ಚಿತ್ರದ ತಿರುಳು. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು.
ಈ ಚಿತ್ರಕ್ಕೆ ಮದ್ದೂರು, ಹುಳಿಯಾರು, ಚಿಕ್ಕ ನಾಯಕನಹಳ್ಳಿ, ಶ್ರೀರಂಗಪಟ್ಟಣ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಹಾಡೊಂದನ್ನು 12 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.
ನಾಯಕಿ ಶೃತಿ ಬಬಿತ ಮಾತನಾಡಿ, “ಎರಡು ವರ್ಷದ ನಂತರ ನಟಿಸಿದ್ದೇನೆ. ಮೊದಲು ನನ್ನ ಹೆಸರು ಶೃತಿರಾಜ್ ಅಂತಿತ್ತು. ಈಗ ಶೃತಿ ಬಬಿತಾ ಅಂತ ಇಟ್ಟುಕೊಂಡಿದ್ದೇನೆ. ಮಾಡರ್ನ್, ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಹಳ್ಳಿಯಲ್ಲಿ ನಾಯಕ ತನಗೆ ಬುದ್ಧಿ ಕಲಿಸುತ್ತಾರೆ’ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.
Related Articles
ಚಿತ್ರದ ನಿರ್ಮಾಣದಲ್ಲಿ ಸಂಜಯ್ ಶ್ರೀನಿವಾಸ ಕೈಜೋಡಿಸಿದ್ದಾರೆ. ವಿನು ಮನಸು ಅವರ ಸಂಗೀತ, ಶಿವಪುತ್ರ ಅವರ ಛಾಯಾಗ್ರಹಣ, ಗಿರೀಶ್ ನೃತ್ಯ ನಿರ್ದೇಶಕರಾಗಿ ಕೆಲಸ ನಾಡಿದ್ದಾರೆ.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ನಿರ್ಮಾಪಕ ಕೆ.ಮಂಜು, ಈಗ ಸಿನಿಮಾ ನೋಡಲು ಯಾರೂ ಬರುತ್ತಿಲ್ಲ. ನೀವು ನೋಡಿ ಖರ್ಚು ಮಾಡಿ, ಸಾಲ ತಗೊಂಡು ಮಾಡೋದು ಸರಿಯಲ್ಲ. ಅಲ್ಲದೇ ಈಗಾಗಲೇ ಸಾಕಷ್ಟು ಮಲ್ಪಿಪ್ಲೆಕ್ಸ್ ಮುಚ್ಚುತ್ತಿವೆ. ರೆಗ್ಯುಲರ್ ನಿರ್ಮಾಪಕರು ಯಾರೂ ಈಗ ಚಿತ್ರ ಮಾಡುತ್ತಿ ಇಲ್ಲ. ನಿಮಗೆ ಆಸೆ ಇದ್ದರೆ ಬೇರೆ ಕೆಲಸ ಮಾಡಿ’ ಎಂಬ ಕಿವಿಮಾತು ಹೇಳಿದರು. ಕಲಾವಿದರಾದ ಮೈಸೂರು ಮಂಜುಳ , ರೇಖಾದಾಸ್ ಮತ್ತಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.