ಹೊನ್ನಾಳಿ: ರಾಜ್ಯ ಸರ್ಕಾರ ಕೆಲದಿನಗಳ ಹಿಂದೆ ಸಿಡಿ ಹಾಯುವುದು ಸೇರಿದಂತೆ ಮೂಢ ನಂಬಿಕೆ ನಿಷೇಧ ಕಾಯ್ದೆ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದ್ದರೂ ನ್ಯಾಮತಿ ತಾಲೂಕಿನ ಕಂಚಿಕೊಪ್ಪ ಗ್ರಾಮದ ಆರಾಧ್ಯ ದೇವತೆಗಳಾಗಿರುವ ಮಾಯಮ್ಮ, ಮರಿಯಮ್ಮ ದೇವಿಯರ ಜೋಡಿ ಸಿಡಿ ಹಬ್ಬ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಮಧ್ಯಾಹ್ನ 2.30ರಿಂದ ಪ್ರಾರಂಭವಾದ ಜೋಡಿ ಸಿಡಿ ಹಬ್ಬ ಸಂಜೆ 4.30ರವರೆಗೆ ಪಾರಂಪರಿಕ ಶ್ರದ್ಧಾ-ವೈಭವಗಳೊಂದಿಗೆ ನೆರವೇರಿತು. ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಹರಿಹರ ತಾಲೂಕು ನಂದಿಗುಡಿ ಬೃಹನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಿಡಿ ಬಂಡಿಯನ್ನೇರಿ ಜೋಡಿ ಸಿಡಿ ಉತ್ಸವಕ್ಕೆ ಚಾಲನೆ ನೀಡಿದರು.
ಕಂಚಿಕೊಪ್ಪ ಗ್ರಾಮದ ಬೊಮ್ಮಲಿಂಗೇಶ್ವರಸ್ವಾಮಿ ದೇವಸ್ಥಾನದಿಂದ ಹೊರಟ ಜೋಡಿ ಸಿಡಿ ಉತ್ಸವ ಗ್ರಾಮದ ಹೊರವಲಯದ ಸರ್ಕಾರಿ ಪ್ರೌಢಶಾಲೆಯ ಪಕ್ಕದ ಮಾರ್ಗದಲ್ಲಿ ಊರನ್ನು ಪ್ರದಕ್ಷಿಣೆ ಹಾಕಿ, ತುಗ್ಗಲಹಳ್ಳಿ ಕೆಂಚಿಕೊಪ್ಪ ಮಾರ್ಗದಲ್ಲಿರುವ ಸಿಡಿ ಉತ್ಸವದ ರಾಜಮಾರ್ಗದ ಮೂಲಕ ಮಾಯಮ್ಮ, ಮರಿಯಮ್ಮ ದೇವಿಯರ ದೇವಸ್ಥಾನ ತಲುಪಿತು. ನಂತರ ಹುತ್ತೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಭರ್ಜರಿಯಾಗಿ ಜೋಡಿ ಸಿಡಿ ಉತ್ಸವ ನಡೆಯಿತು. ಜೋಡಿ ಸಿಡಿ ಬಂಡಿಗಳು ಮೂರು ಬಾರಿ ದೇವಿಯರ ದೇವಸ್ಥಾನವನ್ನು ಪ್ರದಕ್ಷಿಣೆ ಹಾಕುವುದರೊಂದಿಗೆ ಉತ್ಸವ ಸಂಪನ್ನಗೊಂಡಿತು.
ಸಿಡಿ ಬಂಡಿಗೆ ಸುಮಾರು 40-50 ಅಡಿ ಉದ್ದದ ಬೃಹದಾಕಾರದ ಮರದ ಸಿಡಿಗಣ (ನೊಗ) ಜೋಡಿಸಲಾಗಿದ್ದು, ಅದಕ್ಕೆ ಒಬ್ಬ ಮಹಿಳೆಯನ್ನು ಕಟ್ಟಲಾಗಿರುತ್ತದೆ. ಸಿಡಿ ಉತ್ಸವ ಮೂಗಿಯುವವರೆಗೆ ಮಹಿಳೆ ದೇವಿಯನ್ನು ನೆನೆಯುತ್ತ ಸಿಡಿಯ ಮೇಲೆಯೇ ಇರುತ್ತಾರೆ. ಈ ದೃಶ್ಯವನ್ನು ವೀಕ್ಷಿಸಿದ ಜನಸ್ತೋಮ ಮಾಯಮ್ಮ, ಮರಿಯಮ್ಮದೇವಿ ನಿನ್ನಾಲ್ಕು ಉಧೋ ಧೋ ಎಂದು ಉದ್ಘೋಷ ಮಾಡಿದರು. ಕೆಂಚಿಕೊಪ್ಪ ಗ್ರಾಮದಲ್ಲಿ ಊರಿನ ಗೌಡರ ಬಂಡಿ ಮತ್ತು ರೈತರ ಬಂಡಿ ಎಂದು ಎರಡು ಸಿಡಿ ಬಂಡಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದು, ಉಪವಾಸ ವ್ರತ, ನಿಯಮ-ನಿಷ್ಠೆ ಪಾಲಿಸಿದ್ದ ಇಬ್ಬರು ಮಹಿಳೆಯರು ಸಿಡಿ ಆಡಿದರು. ಗ್ರಾಮದ ಸುತ್ತ ಸಿಡಿ ಬಂಡಿ ಸಂಚರಿಸುವ ವೇಳೆ ಸಿಡಿ ಆಡುವ ಮಹಿಳೆಯರು ದೇವರ ಪದಗಳನ್ನು ಜಾನಪದ ಶೈಲಿಯಲ್ಲಿ ಹಾಡುತ್ತಾ, ಅಕ್ಕಿಯನ್ನು ದಾರಿಯುದ್ದಕ್ಕೂ ಎರಚುತ್ತಾರೆ. ಗ್ರಾಮ ಸುಭಿಕ್ಷವಾಗಲಿ, ಏನೂ ತೊಂದರೆ ಬಾರದಂತೆ ದೇವಿಯರು ನಮ್ಮನ್ನು ರಕ್ಷಿಸಲಿ ಎಂಬ ಉದ್ದೇಶದಿಂದ ಈ ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಗ್ರಾಮದ ಹಿರಿಯರು ಹೇಳಿದರು. ಮಾಜಿ ಶಾಸಕರುಗಳಾದ ಡಿ.ಜಿ.ಶಾಂತನಗೌಡ ಮತ್ತು ಡಾ,ಡಿ.ಬಿ.ಗಂಗಪ್ಪ ಇತರ ಜನಪ್ರತಿನಿಧಿ ಗಳು ಇದ್ದರು.