ಹೊನ್ನಾಳಿ: ದೇಶದಲ್ಲಿ ಸಾಮಾಜಿಕ ಬದಲಾವಣೆಗಾಗಿ ಶರಣರು, ಸಂತರು ಪಟ್ಟ ಶ್ರಮ ಅಪಾರವಾದದ್ದು ಎಂದು ತಾ.ಪಂ ಪ್ರಭಾರಿ ಅಧ್ಯಕ್ಷ ತಿಪ್ಪೇಶಪ್ಪ ಹೇಳಿದರು. ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಹಾಗೂ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಜಾತ್ಯತೀತ ಮನೋಭಾವ ಹೊಂದಿದ ಶರಣರಿಂದ ಸಮಾಜದಲ್ಲಿ ಏಕತೆ ಕ್ರಾಂತಿ ನಡೆಯಿತು. ಇದರಿಂದ ಇಂದು ಎಲ್ಲರೂ ಸಮಾನರು ಎನ್ನುವ ಭಾವನೆ ಮೂಡಿದೆ. ಶರಣರು ಮನುಕುಲದ ಒಳಿತಿಗಾಗಿ ಹೋರಾಡದಿದ್ದರೆ ಸಮಾಜದಲ್ಲಿ ಇನ್ನು ಅಸಮಾನತೆ ಜೀವಂತವಾಗಿರುತ್ತಿತ್ತು. ಸವಿತಾ ಮಹರ್ಷಿ ಹಾಗೂ ಮಡಿವಾಳ ಮಾಚಿದೇವ ಇಬ್ಬರ ಜಯಂತಿ ಕಾರ್ಯಕ್ರಮವನ್ನು ಎರಡು ಸಮಾಜದವರು ಒಟ್ಟುಗೂಡಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ತುಷಾರ್ ಬಿ.ಹೊಸೂರು ಮಾತನಾಡಿ, ನೆರೆ ಹಾವಳಿ ಹಾಗೂ ಭಾರಿ ಮಳೆಯಿಂದ ಉತ್ತರ ಕರ್ನಾಟಕದ ಜನತೆ ತತ್ತರಿಸಿ ಅನೇಕ ಕಷ್ಟ, ನಷ್ಟಗಳನ್ನು ಅನುಭವಿಸಿರುವ ಕಾರಣ ಎಲ್ಲ ಮಹಾತ್ಮರ ಜಯಂತಿ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಯಿತು ಎಂದು ಹೇಳಿದರು.
ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಕೇಂದ್ರಗಳಲ್ಲಿ 10 ಮಹಾತ್ಮರ ಜಯಂತಿ ಕಾರ್ಯಕ್ರಮಗಳನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಿದ ಕಾರಣ ಎರಡೂ ತಾಲೂಕುಗಳಿಂದ ಒಟ್ಟು 4 ಲಕ್ಷ ರೂ. ಉಳಿತಾಯವಾಗಿದ್ದು, ಈ ಹಣವನ್ನು ನೇರವಾಗಿ ಸಿಎಂ ಪರಿಹಾರ ನಿಧಿಗೆ ಕಳಿಸಿಕೊಡಲಾಗುವುದು ಎಂದರು. ಸವಿತಾ ಸಮಾಜದ ಅಧ್ಯಕ್ಷ ಎನ್.ಎಲ್.ರವಿ, ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ನಾಗರಾಜಪ್ಪ ಮಾತನಾಡಿದರು.
ಸವಿತಾ ಮಹರ್ಷಿ ಬಗ್ಗೆ ಶಿಕ್ಷಕ ಜನಾರ್ದನ ಹಾಗೂ ಮಾಚಿದೇವ ಬಗ್ಗೆ ಶಿಕ್ಷಕ ನಾಗರಾಜಪ್ಪ ಉಪನ್ಯಾಸ ನೀಡಿದರು. ತಾ.ಪಂ ಇಒ ಗಂಗಾಧರಮೂರ್ತಿ, ಬಿಇಒ ಜಿ.ಇ. ರಾಜೀವ್, ಪ.ಪಂ ಮುಖ್ಯಾ ಧಿಕಾರಿ ಎಸ್.ಆರ್. ವೀರಭದ್ರಯ್ಯ ಇದ್ದರು.