Advertisement

ಕುಡಿವ ನೀರು ಸಮಸ್ಯೆಗೆ ಬೇಕಿದೆ ಶಾಶ್ವತ ಪರಿಹಾರ

10:30 AM May 13, 2019 | Team Udayavani |

ಹೊನ್ನಾಳಿ: ಅರೆ ಮಲೆನಾಡು ಅಥವಾ ಮಲೆನಾಡಿನ ಹೆಬ್ಟಾಗಿಲು ಎಂದು ನ್ಯಾಮತಿ ಹಾಗೂ ಹೊನ್ನಾಳಿ ತಾಲೂಕುಗಳನ್ನು ಕರೆಯುವ ಪ್ರತೀತಿ ಈಗಲೂ ಇದೆ. ಆದರೆ ಬೇಸಿಗೆ ಬಂತೆಂದರೆ ಕುಡಿಯುವ ನೀರಿನ ಹಾಹಾಕಾರ ಅವಳಿ ತಾಲೂಕಿನ ಸುಮಾರು 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರಾರಂಭವಾಗುತ್ತದೆ.

Advertisement

ಎರಡು ತಾಲೂಕುಗಳ ಸುಮಾರು 30 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಂತರ್ಜಲ ಕುಸಿತದಿಂದ ಬೋರ್‌ವೆಲ್ಗಳಲ್ಲಿ ನೀರಿಲ್ಲದಂತಾಗಿ ನೀರಿನ ಸಮಸ್ಯೆಯುಂಟಾಗಿದ್ದು, ಗ್ರಾಮಸ್ಥರು ಕುಡಿಯುವ ನೀರಿಗಾಗಿ ಹೊಲ, ಗದ್ದೆ ಅಥವಾ ತೋಟಗಳಲ್ಲಿರುವ ಖಾಸಗಿ ಬೋರ್‌ಗಳನ್ನು ಅವಲಂಬಿಸುವಂತಾಗಿದೆ. ಇನ್ನೂ ಕೆಲವು ಗ್ರಾಮಗಳಲ್ಲಿ ಗ್ರಾ.ಪಂ.ವತಿಯಿಂದ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ.

ಹೊನ್ನಾಳಿ ತಾಲೂಕಿನ ತಿಮ್ಲಾಪುರ, ತಿಮ್ಲಾಪುರ ತಾಂಡ, ಹೊನ್ನೂರು ವಡ್ಡರಟ್ಟಿ, ಚೀಲಾಪುರ, ಎಚ್.ಕಡದಕಟ್ಟೆ ಹಾಗೂ ಬಹುಮುಖ್ಯವಾಗಿ ನ್ಯಾಮತಿ ತಾಲೂಕಿನ ಸುರಹೊನ್ನೆ, ಫಲವನಹಳ್ಳಿ, ಸೋಗಿಲು, ಚಟ್ನಹಳ್ಳಿ, ಮಾಚಿಗೊಂಡನಹಳ್ಳಿ, ಬೆಳಗುತ್ತಿ, ಸುರಹೊನ್ನೆ, ಆರುಂಡಿ, ಮಲ್ಲಿಗೇನಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಉಲ್ಬಣಗೊಂಡಿರುವುದರಿಂದ ತಾಲೂಕು ಆಡಳಿತ ಟ್ಯಾಂಕರ್‌ ಹಾಗೂ ಖಾಸಗಿ ಬೋರ್‌ವೆಲ್ಗಳ ಮೂಲಕ ಕುಡಿಯುವ ನೀರು ಕೊಡುತ್ತಿದೆ.

ಪ್ರತಿವರ್ಷ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವ ಬದಲು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಮಬುದು ಗ್ರಾಮಸ್ಥರ ಆಗ್ರಹವಾಗಿದೆ.

90 ಲಕ್ಷ ಅನುದಾನ ಬಿಡುಗಡೆ: ಕುಡಿಯುವ ನೀರಿನ ತೀವ್ರ ಸಮಸ್ಯೆ ಇರುವ ಕಡೆಗಳಲ್ಲಿ ಪೈಪ್‌ಲೈನ್‌ ಕಾಮಗಾರಿ, ಮೋಟಾರ್‌ ಅಳವಡಿಕೆ ಹಾಗೂ ಇನ್ನಿತರ ಕಾಮಗಾರಿಗಳಿಗೆ ಜಿ.ಪಂ ವತಿಯಿಂದ ರೂ. 50 ಲಕ್ಷ ಹಾಗೂ ಬರ ಪರಿಹಾರ ನಿಧಿಯಿಂದ ಜಿಲ್ಲಾಧಿಕಾರಿ ಖಾತೆಯಿಂದ ರೂ. 40 ಲಕ್ಷ ಸೇರಿ ಒಟ್ಟು 90 ಲಕ್ಷ ರೂ. ಬಿಡುಗಡೆಯಾಗಿರುವುದರಿಂದ ನೀರಿನ ಸಮಸ್ಯೆ ಇರುವಂತಹ ಎಲ್ಲಾ ಗ್ರಾಮಗಳಲ್ಲೂ ಸಹ ವ್ಯಾಪಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಇಇ ನಾಗಪ್ಪ ತಿಳಿಸಿದ್ದಾರೆ.

Advertisement

ಶುದ್ಧ ಕುಡಿಯುವ ನೀರಿನ ಘಟಕ: 2017 -19ರ ಸಾಲಿನಲ್ಲಿ ತಾಲೂಕಿನ 166 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದವು. ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಹೊರತುಪಡಿಸಿ ಸುಮಾರು 130 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿಗೆ ಕೊರತೆ ಇಲ್ಲ.

ಅವಳಿ ತಾಲೂಕಿನ ಸುಮಾರು 30 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಆ ಗ್ರಾಮಗಳ ಅಗತ್ಯಕ್ಕನುಗುಣವಾಗಿ ಟ್ಯಾಂಕರ್‌ ಮೂಲಕ ಅಥವಾ ಖಾಸಗಿ ಬೋರ್‌ ಬಾಡಿಗೆ ಪಡೆದು ನೀರನ್ನು ಒದಗಿಸುತ್ತಿದ್ದೇವೆ. ಒಟ್ಟಾರೆ ನೀರಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.
• ರಾಘವೇಂದ್ರ, ತಾ.ಪಂ ಇಒ ಹೊನ್ನಾಳಿ

ಅವಳಿ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಸುಮಾರು 30 ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. ಆದರೆ ನೀರಿನ ಲಭ್ಯತೆ ಕಡಿಮೆ ಇರುವುದರಿಂದ ಅಂತಹ ಗ್ರಾಮಗಳಿಗೆ ಟ್ಯಾಂಕರ್‌ ಅಥವಾ ಖಾಸಗಿ ಕೊಳವೆಬಾವಿ ಮುಖಾಂತರ ನೀರು ಕೊಡಲಾಗುತ್ತಿದೆ.
ನಾಗಪ್ಪ, ಎಇಇ, ಹೊನ್ನಾಳಿ

Advertisement

Udayavani is now on Telegram. Click here to join our channel and stay updated with the latest news.

Next