Advertisement

ತಂಬಾಕು ವಿರೋಧಿ ಆಂದೋಲನ ನಡೆಯಲಿ

12:31 PM Jun 02, 2019 | Naveen |

ಹೊನ್ನಾಳಿ: ತಂಬಾಕು ಉತ್ಪನ್ನಗಳಿಂದ ದೂರ ಇರಲು ಆಂದೋಲನವನ್ನು ನಡೆಸಬೇಕಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Advertisement

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ಜನ ಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ಜನ ಜಾಗೃತಿ ವೇದಿಕೆ, ನ್ಯಾಯಾಂಗ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಶ್ವ ತಂಬಾಕು ದುಶ್ಚಟ ವಿರೋಧಿ ದಿನಾಚರಣೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅನೇಕರು ತಂಬಾಕು, ಗುಟ್ಕಾ, ಪಾನ್‌ಪರಾಗ್‌ ಸೇರಿದಂತೆ ಇತರೆ ವಿಷಕಾರಿ ವಸ್ತುಗಳ ದಾಸರಾಗಿದ್ದಾರೆ. ಬೀಡಿ, ಸಿಗರೇಟ್‌ಗಳಿಗೆ ಮೊರೆ ಹೋದರೆ ಅವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಂಬಾಕು ಹಾಕದಿದ್ದರೆ, ಸಿಗರೇಟ್ ಸೇದದಿದ್ದರೆ ನನ್ನ ತಲೆ ಓಡುವುದಿಲ್ಲ ಎನ್ನುವ ಭ್ರಮೆಯಲ್ಲಿ ಅನೇಕರಿದ್ದಾರೆ. ಇದು ಶುದ್ಧ ತಪ್ಪು ಅಭಿಪ್ರಾಯ ಎಂದು ಹೇಳಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಕೆ.ಎಚ್.ಗಂಗಾಧರ ಮಾತನಾಡಿ, ವಿಶ್ವದಲ್ಲಿ ತಂಬಾಕು ಉತ್ಪನ್ನಗಳ ವಿರುದ್ಧ ಹೋರಾಟ ನಡೆಯುತ್ತಲೇ ಇದೆ. ಯಾವುದೂ ಪ್ರಚಾರವಿಲ್ಲದೆ ಹೆಚ್ಚು ಮಾರಾಟವಾಗುವ ವಸ್ತು ಎಂದರೆ ತಂಬಾಕು ಉತ್ಪನ್ನಗಳು ಎಂದು ಹೇಳಿದರು.

ಕೋಟ್ಪಾ ಕಾಯ್ದೆಯಡಿ ಸಾರ್ವಜನಿಕ ಸ್ಥಳದಲ್ಲಿ ಧೂಮ್ರಪಾನ ನಿಷೇಧ, ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ, 18 ವರ್ಷದೊಳಗಿನ ಮಕ್ಕಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳ 100 ಮೀ. ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಷೇಧ ಇದ್ದು ಇವುಗಳನ್ನು ಮೀರಿದರೆ ದಂಡ ಹಾಗೂ ಜೈಲು ಶಿಕ್ಷೆ ಇದೆ ಎಂದು ಹೇಳಿದರು.

Advertisement

ಸಾನ್ನಿಧ್ಯ ವಹಿಸಿದ್ದ ಡಾ| ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿಶ್ವವು ತಂಬಾಕು ರಹಿತ ಆಗಬೇಕೆಂಬುದು ವಿಶ್ವ ಆರೋಗ್ಯ ಸಂಸ್ಥೆ ಗುರಿಯಾಗಿದೆ. ಅದಕ್ಕೆ ಸ್ಪಂದಿಸಿ ನಾವು ನಡೆದುಕೊಳ್ಳಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಫಾದರ್‌ ಜೋಸೆಫ್‌ ಉಪನ್ಯಾಸ ನೀಡಿದರು. ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಕಸಬಾ ಅಧ್ಯಕ್ಷೆ ಎಚ್.ಡಿ.ಸಾವಿತ್ರಮ್ಮ, ಬಿಇಒ ಜಿ.ಇ. ರಾಜೀವ್‌, ತಾಲೂಕು ವೈದ್ಯಾಧಿಕಾರಿ ಡಾ| ಕೆಂಚಪ್ಪ, ಪ.ಪಂ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಜಿಲ್ಲಾ ಕೋಟ್ಪಾ ಸಲಹೆಗಾರ ಡಾ| ಸತೀಶ್‌ ಕಲಾಲ್ ಇತರರು ಇದ್ದರು. ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಸುರೇಶ್‌ ಹೊಸಕೇರಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ್‌ ಅಂಗಡಿ ಸ್ವಾಗತಿಸಿದರು. ಕತ್ತಿಗೆ ನಾಗರಾಜ್‌ ನಿರೂಪಿಸಿದರು. ನಾಗರಾಜ್‌ ವಂದಿಸಿದರು. ನಂತರ ಶ್ರೀಮಠದಿಂದ ಜಾಥಾ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next