ಹೊನ್ನಾಳಿ: ಪರಿಸರವನ್ನು ಮಲೀನಗೊಳಿಸಿರುವುದರ ಫಲವನ್ನು ಇಂದು ನಾವು ಕಾಣುತ್ತಿದ್ದೇವೆ. ಪರಿಸರದ ಸಂರಕ್ಷಣೆ ಎಲ್ಲರ ಹೊಣೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಮನುಷ್ಯನ ಅತೀ ಚಟುವಟಿಕೆಯಿಂದ ಭೂಮಿಯ ತಾಪಮಾನ ಹೆಚ್ಚಾಗಿ ಜೀವಸಂಕುಲಕ್ಕೆ ಕುತ್ತು ಬಂದಿದೆ. ಸಸ್ಯ ಸಂಪತ್ತು ಸಮೃದ್ಧವಾಗಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಈಗಾಗಲೇ ಮನುಷ್ಯನಿಗೆ ಅತಿವೃಷ್ಟಿ, ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳ ಮೂಲಕ ಪ್ರಕೃತಿ ಮನುಷ್ಯನಿಗೆ ಎಚ್ಚರಿಕೆ ನೀಡುತ್ತಿದೆ. ಇದನ್ನು ಮನುಷ್ಯ ಅರ್ಥಮಾಡಿಕೊಂಡು ಪರಿಸರ ಸ್ವಚ್ಛತೆ, ನೀರು, ಸಸ್ಯಸಂಪತ್ತುಗಳ ಸಂರಕ್ಷಣೆ ಮಾಡದೇ ಹೋದರೆ ಭವಿಷ್ಯದಲ್ಲಿ ಪ್ರಕೃತಿಯೇ ಮನುಷ್ಯನ ವಿರುದ್ಧ ಯುದ್ಧ ಸಾರುವುದರಲ್ಲಿ ಯಾವುದೇ ಆನುಮಾನವಿಲ್ಲ ಎಂದು ಹೇಳಿದರು
ಹಿರೇಕಲ್ಮಠದ ಡಾ| ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಮನುಷ್ಯನ ಅತೀ ಆಸೆಯಿಂದಾಗಿ ಇಂದು ಪರಿಸರ ಕಲುಷಿತಗೊಳ್ಳುತ್ತಿದ್ದು, ವಾತಾವರಣದಲ್ಲಿ ವೈಪರೀತ್ಯಗಳನ್ನು ಕಾಣುವಂತಾಗಿದೆ. ಪರಿಸರ- ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿ.ವಿ.ಎಸ್. ಸಂಸ್ಥೆಯ ಅಧ್ಯಕ್ಷ ಲಕ್ಷಣ್ ವೈಶ್ಯರ್, ಪಪಂ ಸದಸ್ಯರಾದ ಸುರೇಶ್ ಹೊಸಕೇರಿ, ಕೆ.ವಿ. ಶ್ರೀಧರ, ಪಪಂ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಮಾತನಾಡಿದರು.
ತಾ.ಪಂ ಉಪಾಧ್ಯಕ್ಷ ರವಿಕುಮಾರ್, ಮುಖಂಡ ಮಹೇಶ್ ಹುಡೇದ್, ಬಿ.ವಿ.ಎಸ್. ಸಂಸ್ಥೆಯ ನಿರ್ದೇಶಕರಾದ ಲಿಂಗಪ್ಪ, ಹಾಲೇಶ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀನಿಧಿ ಪಾಟೀಲ್ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ತಿಮ್ಮೇಶ್ ಸ್ವಾಗತಿಸಿದರು. ಶಿಕ್ಷಕ ಗಿರೀಶ್ ನಾಡಿಗೆ ನಿರೂಪಿಸಿದರು.