ಹೊನ್ನಾಳಿ: ಎಲ್ಲೆಡೆ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಬಡ ಪೋಷಕರಿಗೂ ತಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದಬೇಕು ಎಂಬ ಆಸೆ. ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದಿದವರು ಮಾತ್ರ ಇಂಜನಿಯರ್, ಡಾಕ್ಟರ್, ಅಧಿಕಾರಿ ಆಗುತ್ತಾರೆಂಬ ಭಾವನೆಯೂ ಇದಕ್ಕೆ ಕಾರಣ. ಇದಕ್ಕಾಗಿ ಬಡ ಪೋಷಕರು ಸಾಲಸೋಲ ಮಾಡಿಯಾದರೂ ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿದ್ದರು. ಇದನ್ನು ಮನಗಂಡ ರಾಜ್ಯ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದರಿಂದ 10ನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಿ ಬಡವರ ಮಕ್ಕಳ ಅಕ್ಷರ ಜ್ಞಾನಕ್ಕೆ ಮತ್ತಷ್ಟು ಬೆಳಕು ಚೆಲ್ಲಿದೆ.
ಇದುವರೆಗೂ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ ಪಿಯುನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ವಿಜ್ಞಾನ ವಿಭಾಗ ಆರಿಸಿಕೊಂಡು ಚಡಪಡಿಸುತ್ತಿದ್ದರು. ಅನೇಕ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದಲ್ಲಿ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳನ್ನು ಅರಗಿಸಿಕೊಳ್ಳದೆ ಅನುತ್ತೀರ್ಣವಾಗುತ್ತಿದ್ದರು. ಇದರಿಂದ ಕೆಲ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನೇ ಅರ್ಧಕ್ಕೆ ಮೊಟಕುಗೊಳಿಸಿದ ಘಟನೆಗಳೂ ನಡೆದಿವೆ.
ಈಗ ಹೊನ್ನಾಳಿ ತಾಲೂಕಿನ ಒಟ್ಟು ನಾಲ್ಕು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿ ಸರ್ಕಾರ ಆದೇಶ ಹೊರಡಿಸಿದೆ. ಪಟ್ಟಣಕ್ಕೆ ಹೊಂದಿಕೊಂಡಿರುವ ದೇವನಾಯ್ಕನಹಳ್ಳಿ ಸರ್ಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆ, ಬೆಳಗುತ್ತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ನ್ಯಾಮತಿಯ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಸಾಸ್ವೇಹಳ್ಳಿ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜುಗಳಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮ ಶಾಲೆಗಳು ಆರಂಭವಾಗಲಿವೆ.
ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರಿಗೇ ಸರ್ಕಾರ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆಯ ತರಬೇತಿ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಿಂದ ಇರುವ ಶಾಲೆಗಳಲ್ಲಿಯೇ ಇಂಗ್ಲಿಷ್ ಮಾಧ್ಯಮದ ಮೊದಲ ಇಯತ್ತೆ ಆರಂಭಿಸಲಾಗುತ್ತಿದೆ. ಹಾಗೂ ಪ್ರತಿ ವರ್ಷ ಮುಂದಿನ ಇಯತ್ತೆ ಸೇರಿಸಲಾಗುವುದು. ಸದ್ಯ ದೇವನಾಯ್ಕನಹಳ್ಳಿ ಸರ್ಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆ, ನ್ಯಾಮತಿಯ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಸಾಸ್ವೇಹಳ್ಳಿ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜುಗಳಲ್ಲಿ 8ನೇ ಇಯತ್ತೆಯಿಂದ 10ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮ ಇರುವುದರಿಂದ ಒಂದನೆಯ ತರಗತಿ ಆರಂಭಕ್ಕೆ ಯಾವುದೇ ಸಮಸ್ಯೆಯಾಗಲಿಕ್ಕಿಲ್ಲ ಎಂಬ ಭಾವನೆ ಇದೆ.
ಸರ್ಕಾರ ರಾಜ್ಯಾದ್ಯಂತ 1000 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆಯಲಿದೆ. ನಮ್ಮ ತಾಲೂಕಿನ ನಾಲ್ಕು ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮ ಬೋಧನೆಗೆ ಅವಕಾಶ ಮಾಡಿದೆ. ಇದೊಂದು ಒಳ್ಳೆಯ ಬೆಳವಣಿಗೆ.
ಜಿ.ರಾಜೀವ್,
ಬಿಇಒ, ಹೊನ್ನಾಳಿ.
ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆಗೆ ಅವಕಾಶ ಮಾಡಿ ಕೊಟ್ಟಿರುವುದು ಉತ್ತಮ ಬೆಳವಣಿಗೆ. ಇದರಿಂದ ಸರ್ಕಾರಿ ಶಾಲೆಗಳ ಕಡೆ ಎಲ್ಲಾ ಮಕ್ಕಳು ಮುಖ ಮಾಡುತ್ತಾರೆ.
ಎಚ್.ಎಸ್. ಉಮಾಶಂಕರ್,
ಬಿಆರ್‌ಸಿ, ಹೊನ್ನಾಳಿ
ಎಂ.ಪಿ.ಎಂ.ವಿಜಯಾನಂದಸ್ವಾಮಿ