Advertisement

ಸಂತ ಸೇವಾಲಾಲ್‌ ಜಯಂತಿ ಸಂಪನ್ನ

12:35 PM Feb 16, 2020 | Naveen |

ಹೊನ್ನಾಳಿ: ಕಳೆದ ಮೂರು ದಿನಗಳಿಂದ ಅದ್ಧೂರಿಯಾಗಿ ನಡೆದ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಭಾಯಗಡ್‌ ಪುಣ್ಯಕ್ಷೇತ್ರದ ಸಂತ ಸೇವಾಲಾಲ್‌ ಜಯಂತ್ಯುತ್ಸವ ಶನಿವಾರ ಸಂಪನ್ನಗೊಂಡಿತು.

Advertisement

ಶನಿವಾರ ಬೆಳಗ್ಗೆ 8ಕ್ಕೆ ಮಹಾಭೋಗ್‌ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ತಾಂಡಾ ನಿಗಮದ ಅಧ್ಯಕ್ಷ ಶಾಸಕ ಪಿ.ರಾಜೀವ್‌, ಸಂತ ಸೇವಾಲಾಲ್‌ ಜನ್ಮ ಸ್ಥಾನ ಮಹಾ ಸಮತಿ ಅಧ್ಯಕ್ಷ ಮಾಜಿ ಸಚಿವ ರುದ್ರಪ್ಪ ಎಂ.ಲಮಾಣಿ ಸೇರಿದಂತೆ ಇತರ ಪ್ರಮುಖ ಮುಖಂಡರು ಹಾಜರಿದ್ದರು.

ಮಹಾಭೋಗ್‌ ನಂತರ ಸಾಮೂಹಿಕ ಭೋಜನದ ವ್ಯವಸ್ಥೆ ನಡೆಯಿತು. ಪ್ರಸಾದದ ನಂತರ ಭಕ್ತರು ಪುನಃ ತಮ್ಮ ಊರುಗಳಿಗೆ ತೆರಳಿದರು. ರಾಜ್ಯ ಹಾಗೂ ದೇಶದ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರು ಸೂರಗೊಂಡನಕೊಪ್ಪಕ್ಕೆ ಸಾಗರೋಪಾದಿಯಲ್ಲಿ ಆಗಮಿಸಿದ್ದರು. ಅದರಲ್ಲೂ ಸೇವಾಲಾಲ್‌ ಮಾಲಾಧಾರಿ ಪಾದಯಾತ್ರಿಗಳು ಫೆ.14ರ ಶುಕ್ರವಾರ ತಂಡೋಪ ತಂಡವಾಗಿ ಕ್ಷೇತ್ರಕ್ಕೆ ಆಗಮಿಸಿ ಸಾಕ್ಷಿಯಾದರು. ಪಾದಯಾತ್ರೆಯ ದಾರಿಯಲ್ಲಿ ಅಲ್ಲಲ್ಲಿ ಸಾರ್ವಜನಿಕರು ಸೇವಾಲಾಲ್‌ ಭಕ್ತರಿಗೆ ಮಜ್ಜಿಗೆ, ಜ್ಯೂಸ್‌, ಕಲ್ಲಂಗಡಿ ಹಣ್ಣು, ಲಘು
ಉಪಾಹಾರ ಹಾಗೂ ಭೋಜನದ ವ್ಯವಸ್ಥೆ ಮಾಡಿದ್ದರು.

ಒಟ್ಟಿನಲ್ಲಿ ಸೇವಾಲಾಲ್‌ ಮಾಲಾಧಾರಿ ಪಾದಯಾತ್ರಿಗಳು ತಮ್ಮ ಹರಕೆ-ಕಾಣಿಕೆ ಸಲ್ಲಿಸುವ ಮೂಲಕ ಭಕ್ತಿ ಮೆರೆದರು. ತಾವು ಧರಿಸಿದ ಮಾಲೆಗಳನ್ನು ಸೂರಗೊಂಡನಕೊಪ್ಪ ಸುಕ್ಷೇತ್ರದಲ್ಲಿ ವಿಸರ್ಜಿಸುವ ಮೂಲಕ ತಮ್ಮ ದುಶ್ಚಟಗಳನ್ನು ತ್ಯಜಿಸುವ ಇಚ್ಛಾಶಕ್ತಿ ಪ್ರದರ್ಶಿಸುತ್ತಿರುವುದು ಉತ್ತಮ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಾಗಿರುವುದಂತೂ ಸತ್ಯ. ಸೂರೆಗೊಂಡನಕೊಪ್ಪಸುರಗೋಡನಕೊಪ್ಪ
ದ ಭಾಯಾಗಡ್‌ ಪ್ರಕೃತಿಯ ಮಡಿಲಲ್ಲಿ ಫೆ.13ರ ಗುರುವಾರ, 14ರ ಶುಕ್ರವಾರ ಹಾಗೂ 15ರ ಶನಿವಾರ ಮಧ್ಯಾಹ್ನ 12ರವರೆಗೆ ಸಂತ ಸೇವಾಲಾಲರ ಭಕ್ತ ಸಮುದಾಯ ಎಲ್ಲಿ ನೋಡಿದರಲ್ಲಿ ಕಣ್ಣಿಗೆ ಗೋಚರಿಸುತ್ತಿದ್ದರು.

ರಾಜ್ಯದ ಕಲಬುರಗಿ, ಬೆಳಗಾವಿ, ರಾಯಚೂರು, ಬಳ್ಳಾರಿ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದಿಂದಲೂ ಲಕ್ಷಾಂತರ ಭಕ್ತಾದಿಗಳು ಸಂತ ಸೇವಲಾಲ್‌ ಜನ್ಮ ಸ್ಥಳಕ್ಕೆ ಬಂದು ಸೇರಿದ್ದರು. ಸಂತ ಸೇವಾಲಾಲ್‌ ಕ್ಷೇತ್ರ ಸೂರಗೊಂಡನಕೊಪ್ಪಕ್ಕೆ ಬಂದು
ಸೇರಿದ ಲಕ್ಷಾಂತರ ಭಕ್ತರಿಗೆ ಮೂಲ ಸೌಲಭ್ಯಗಳನ್ನು ರಾಜ್ಯ ತಾಂಡಾ ನಿಗಮ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳು ಸಕಲ ಸಿದ್ಧತೆಗಳನ್ನು ಮಾಡಿದ್ದವು.

Advertisement

ಫೆ. 14ರಂದು ಪೂರ್ಣಕುಂಭ ಮೆರವಣಿಗೆ, ಸಂತ ಸೇವಾಲಾಲ್‌ ಅವರಿಗೆ ಅಭಿಷೇಕ, ಮಾಲಾಧಾರಿಗಳಿಗೆ ದರ್ಶನ, ಮಹಾ ಮಂಗಳಾರತಿ, ಇರುಮುಡಿ ಸಮರ್ಪಣಾ ಕಾರ್ಯಕ್ರಮಗಳು ಜರುಗಿದವು. ಜಯಂತ್ಯುತ್ಸವ ಅಂಗವಾಗಿ ವಿವಿಧ ಕ್ರೀಡೆಗಳು, ಸಾಂಸ್ಕೃತಿಕ
ಕಾರ್ಯಕ್ರಮಗಳು ಜರುಗಿದವು.

Advertisement

Udayavani is now on Telegram. Click here to join our channel and stay updated with the latest news.

Next