ಹೊನ್ನಾಳಿ: ತಾಲೂಕಿನ 122 ಕೆರೆಗಳ ಪೈಕಿ ಬಹುತೇಕ ಕೆರೆಗಳು ಬೇಸಿಗೆಯಲ್ಲಿ ಬತ್ತಿ ಹೋಗುವುದು ಸಾಮಾನ್ಯವಾಗಿದೆ. ಸೌಳಂಗ ರೈತ ಕಾಯಕನ ಕೆರೆ, ಕತ್ತಿಗೆ ಕೆರೆ, ಕೂಲಂಬಿ ಕೆರೆ, ಹಿರೇಮಠ ಕೆರೆ, ಮಾದನಬಾವಿ ಕೆರೆ, ಮಾಸಡಿ ಕೆರೆ, ಚೀಲೂರು ಕೆರೆ, ಅರಕೆರೆ ಕೆರೆ, ಚಟ್ನಹಳ್ಳಿ, ಸೋಗಿಲು ಕೆರೆ, ಸೌಳಂಗ ಚಿಕ್ಕಕೆರೆ, ನರಸಗೊಂಡನಹಳ್ಳಿ ಕೆರೆ ತಾಲೂಕಿನ ಪ್ರಮುಖ ಕೆರೆಗಳು.
ಸೌಳಂಗಕೆರೆ, ಕುಂದೂರು ಕೆರೆ, ಕೂಲಂಬಿ, ಚೀಲೂರು ಕೆರೆ ಸೇರಿದಂತೆ ಕೆಲವು ಕೆರೆಗಳಲ್ಲಿ ಬೇಸಿಗೆಯಲ್ಲೂ ನೀರಿರುತ್ತದೆ. ಉಳಿದೆಲ್ಲಾ ಕೆರೆಗಳು ಈ ಬಾರಿಯ ಬಿರು ಬಿಸಿಲಿನ ತಾಪಕ್ಕೆ ಸಂಪೂರ್ಣವಾಗಿ ಬತ್ತಿವೆ.
ತಾಲೂಕಿನಲ್ಲಿಯೇ ಅತ್ಯಂತ ದೊಡ್ಡದಾದ ಕೆರೆ, ಸೌಳಂಗ ಹೊಸಕೆರೆ. ಇದನ್ನು ರೈತ ಕಾಯಕನ ಕೆರೆ ಎಂದೂ ಕರೆಯುತ್ತಾರೆ. ಇದರ ನೀರು ಸಂಗ್ರಹ ಸಾಮರ್ಥ್ಯ ಸುಮಾರು 7.5 ಟಿಎಂಸಿ ಅಡಿಯಷ್ಟಿದ್ದು, ಸುತ್ತಮುತ್ತಲಿನ 800 ಹೆಕ್ಟೇರ್ ಜಮೀನಿಗೆ ನೀರುಣಿಸುತ್ತದೆ. ಈ ಕೆರೆಯಲ್ಲಿ ನೀರಿನ ಸಾಮರ್ಥ್ಯದಷ್ಟೇ ಹೂಳು ತುಂಬಿಕೊಂಡಿದೆ ಎಂದು ಈ ಭಾಗದ ರೈತರು ಹೇಳುತ್ತಾರೆ. ಈ ಕೆರೆಯಿಂದ ಸೌಳಂಗ, ಚಟ್ನಹಳ್ಳಿ, ಪಲ್ಲವನಹಳ್ಳಿ, ಸೋಗಿಲು ಮತ್ತು ಇತರ ಗ್ರಾಮಗಳ ರೈತರ ಜಮೀನಿಗೆ ನೀರು ಲಭ್ಯವಾಗುತ್ತದೆ. ಮಳೆಗಾಲದಲ್ಲಿ ತುಂಗಾ ಆಣೆಕಟ್ಟು ನಾಲೆಯಿಂದ ನೀರು ಹರಿಸಿದ ಪ್ರಯುಕ್ತ ಸೌಳಂಗ ಕೆರೆಯಲ್ಲಿ ಇನ್ನೂ ನೀರಿದೆ.
ಕುಂದೂರು, ಕೂಲಂಬಿ ಮತ್ತು ಚೀಲೂರು ಕೆರೆಗಳಿಗೂ ನಾಲೆ ನೀರು ಹರಿಯುವುದರಿಂದ ಬೇಸಿಗೆಯಲ್ಲಿ ಕೆರೆಯಲ್ಲಿ ನೀರು ಸಂಗ್ರಹವಿರುತ್ತದೆ. ಕುಂದೂರು ಕೆರೆ ಸುಮಾರು 40 ಎಕರೆ ವಿಸ್ತಾರವಾಗಿದ್ದು, 4000 ಹೆಕ್ಟೇರ್‌ಗಳಿಗಿಂತ ಹೆಚ್ಚು ಜಮೀನಿಗೆ ಈ ಕೆರೆಯಿಂದ ನೀರುಣಿಸಲಾಗುತ್ತದೆ.
ಮಾದನಬಾವಿ ಕೆರೆ ಉತ್ತಮ ಮಳೆಯಾದರೆ ಮಾತ್ರ ತುಂಬಿಕೊಳ್ಳುತ್ತದೆ. ಇದು ಮಳೆಗಾಲದಲ್ಲಿಯೇ ಬತ್ತಿಹೋಗುವ ಕೆರೆ ಎನಿಸಿಕೊಂಡಿದೆ. ಈ ಕೆರೆ ತುಂಬಿದರೆ ಕೆರೆ ಕೆಳ ಭಾಗದ ಸುಮಾರು 100ರಿಂದ 200 ಎಕರೆ ಜಮೀನಿಗೆ ನೀರುಣಿಸಬಹುದಾಗಿದೆ. ಸದ್ಯಕ್ಕೆ ಈ ಕೆರೆಯಲ್ಲಿ ಒಂದು ಹನಿ ನೀರು ಕೂಡ ಲಭ್ಯವಿಲ್ಲ.
ಮಾಸಡಿ, ನರಸಗೊಂಡನಹಳ್ಳಿ ಗ್ರಾಮಗಳು ಸೇರಿದಂತೆ ಕೆಲವು ಗ್ರಾಮಗಳ ಚಿಕ್ಕ ಕೆರೆಗಳು ನೀರಾವರಿಗೆ ಸಹಕಾರಿಯಾಗಿಲ್ಲ, ಆದೆರ ಇವುಗಳು ತುಂಬಿದರೆ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ಹೆಚ್ಚಾಗಿ ಕೊಳವೆಬಾವಿಗಳು ಮರುಪೂರಣಗೊಳ್ಳುತ್ತವೆ. ಈಗಾಗಲೇ ಈ ಎಲ್ಲಾ ಕೆರೆಗಳು ಬತ್ತಿವೆ.
ತಾಲೂಕಿನಲ್ಲಿರುವ ಎಲ್ಲಾ ಚೆಕ್‌ಡ್ಯಾಂಗಳ ನೀರು ಬತ್ತಿದ್ದು, ಉತ್ತಮ ಮಳೆಯಾದರೆ ಮಾತ್ರ ಮಾರ್ಚ್ ತಿಂಗಳವರೆಗೆ ನೀರಿನ ಸಂಗ್ರಹ ಇರುತ್ತದೆ.
ನ್ಯಾಮತಿ ತಾಲೂಕಿನ ಸುರಹೊನ್ನೆ, ಚಟ್ನಹಳ್ಳಿ, ಸೋಗಿಲು, ಕುದುರೆಕೊಂಡ, ಬೆಳಗುತ್ತಿ ಇತರೆ ಗ್ರಾಮಗಳ ಸುತ್ತಮುತ್ತ ಇರುವ ಕೆರೆಗಳು ಬತ್ತಿದ್ದು, ಕೊಳವೆ ಬಾವಿಗಳಲ್ಲೂ ನೀರು ಲಭ್ಯವಿಲ್ಲದ ಕಾರಣ ಗ್ರಾಮಗಳು ಬೇಸಿಗೆಯಲ್ಲಿ ತೀವ್ರವಾದ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ.
ಬೇಸಿಗೆಯಲ್ಲಿ ಕೆರೆಗಳು ಒಣಗಿದಾಗ ಹೂಳು ಎತ್ತುವ ಕೆಲಸ ಮಾಡಿದರೆ ನೀರು ಸಂಗ್ರಹಣಾ ಸಾಮರ್ಥಯ ಹೆಚ್ಚಾಗಿ ವರ್ಷಪೂರ್ತಿ ನೀರಿನ ಸಮಸ್ಯೆಯನ್ನು ತೊಲಗಿಸಬಹುದು ಎಂದು ಗ್ರಾಮಸ್ಥರು ಹೇಳುತ್ತಾರೆ.
ತಾಲೂಕಿನ ಎಲ್ಲಾ ಕೆರೆಗಳಿಗೆ ನದಿಯಿಂದ ನೀರು ತಂಬಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸತತ ಪ್ರಯತ್ನ ಮಾಡಿ ಕೆರೆ ತುಂಬಿಸುವ ಕೆಲಸ ಮಾಡಿಸುವೆ.
•
ಎಂ.ಪಿ.ರೇಣುಕಾಚಾರ್ಯ,
ಶಾಸಕರು, ಹೊನ್ನಾಳಿ.