ಹೊನ್ನಾಳಿ: ಎಲ್ಲಾ ಧರ್ಮಗಳ ಸಾರ ಒಂದೇ. ವೀರಶೈವ ಧರ್ಮ ವಿಶಾಲವಾದ ತಳಹದಿಯ ಮೇಲೆ ಬೆಳೆದು ಬಂದಿದ್ದು ಅನಾದಿ ಕಾಲದಿಂದಲೂ ಈ ನಾಡಿನ ಸಂಸ್ಕೃತಿ, ಧಾರ್ಮಿಕತೆಗೆ ಭದ್ರ ಬುನಾದಿ ಒದಗಿಸಿದೆ. ನಮ್ಮ ಸನಾತನ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ನಾವೆಲ್ಲರೂ ಚಿಂತನೆ ನಡೆಸಬೇಕಿದೆ ಎಂದು ಶ್ರೀಮದ್ ರಂಭಾಪುರಿ ವೀರ ಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ತಾಲೂಕಿನ ಮುಕ್ತೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ, ವೀರಭದ್ರೇಶ್ವರ ಕೆಂಡದಾರ್ಚನೆ, ದುರ್ಗಾಂಬಿಕಾ ಶಿಲಾಮೂರ್ತಿ ಸ್ಥಾಪನೆ, ಶ್ರೀ ಮೈಲಾರಲಿಂಗೇಶ್ವರ ಕರಿಗಲ್ಲು ಸ್ಥಾಪನೆ ಹಾಗೂ ಜನಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಈ ನಾಡು ವಿಶಿಷ್ಟ ಪರಂಪರೆಯನ್ನು ಹೊಂದಿದ್ದು, ಧರ್ಮ ಮತ್ತು ಸಂಸ್ಕೃತಿ ಅನಾದಿ ಕಾಲದಿಂದಲೂ ಮನುಕುಲದ ಏಳಿಗೆಗೆ ದಾರಿದೀಪವಾಗಿವೆ. ಇತ್ತೀಚಿನ ದಿನಗಳಲ್ಲಿ ಭಯೋತ್ಪಾದನೆ, ಉಗ್ರವಾದದಂತಹ ದುಷ್ಕೃತ್ಯಗಳಿಂದ ಯುವಜನಾಂಗ ದಾರಿ ತಪ್ಪುತ್ತಿದ್ದು, ಸಮಾಜವನ್ನು ಸರಿದಾರಿಗೆ ತರಲು ನಾವೆಲ್ಲರೂ ಚಿಂತನೆ ನಡೆಸಬೇಕಾಗಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಮಹತ್ತರ ಪಾತ್ರ ವಹಿಸುತ್ತವೆ. ಆದರೆ ಪ್ರಸ್ತುತ ವ್ಯವಸ್ಥೆಯಲ್ಲಿ ಇಂದಿನ ರಾಜಕೀಯ ಹರಿಯುವ ನೀರಾಗದೇ ನಿಂತ ನೀರಾಗಿ ಮಲಿನವಾಗುತ್ತಿದೆ. ಅಧಿಕಾರದ ಆಸೆಗಾಗಿ ಧರ್ಮ-ಧರ್ಮಗಳ ಮಧ್ಯೆ, ಜಾತಿ-ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಿರುವುದು ಆಘಾತಕಾರಿ ಬೆಳವಣಿಗೆ. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಆದರೆ ಗ್ರಾಮದಲ್ಲಿ ರಾಜಕೀಯ ವೈಷಮ್ಯದಿಂದ ಅಭಿವೃದ್ಧಿಗೆ ಕುಂದು ತಂದುಕೊಳ್ಳದೆ ಎಲ್ಲರೂ ಜಾತಿ ಭೇದ ಮರೆತು ಸಹೋದರರಂತೆ ಬದುಕಿದಾಗ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಶಾಸಕ ರೇಣುಕಾಚಾರ್ಯ ಮಾತನಾಡಿ, ಗುರುಪೀಠಗಳು ಪರಂಪರೆಯ ಪ್ರತೀಕವಾಗಿದ್ದು, ಸಂತರು ಶರಣರು ದಾರ್ಶನಿಕರು ಜನಿಸಿದ ಪುಣ್ಯ ಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಪರಸ್ಪರ ಸಹೋದರರಂತೆ ಬಾಳುವುದು ಆದ್ಯ ಕರ್ತವ್ಯವಾಗಿದೆ. ಮನುಷ್ಯ ಹೇಗಾದರೂ ಬದುಕಬಹುದು. ಆದರೆ ಅದನ್ನು ಬದುಕು ಎನ್ನಲಾಗದು. ಮಾನವಂತನಾಗಿ, ಆದರ್ಶ, ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಬದುಕಬೇಕೆನ್ನುವುದು ಸರ್ವಧರ್ಮಗಳ ಸಿದ್ಧಾಂತವಾಗಿದೆ ಎಂದರು.
ವೀರಶೈವ ತತ್ವಾದರ್ಶಗಳನ್ನು ಪರಿಪಾಲಿಸುತ್ತಾ, ಮನುಕುಲಕ್ಕೆ ಧರ್ಮ ಜಾಗೃತಿ ಮಾಡಿಸಿ, ಮನುಜರನ್ನು ಮಾನವೀಯತೆಯೆಡೆಗೆ ಕೊಂಡೊಯ್ಯುತ್ತಿರುವ ರೇಣುಕಾದಿ ಜಗದ್ಗುರು ರಂಭಾಪುರಿ ಶ್ರೀಗಳ ಸಾಧನೆ ನಾಡಿನ ಧಾರ್ಮಿಕ ಕ್ಷೇತ್ರಕ್ಕೆ ಮಾದರಿಯಾಗಿದೆ ಎಂದರು. ಹಿರೇಕಲ್ಮಠದ ಡಾ| ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ರಾಂಪುರ ಬೃಹನ್ಮಠ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ, ಅವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಭಾರತೀಯ ಸಂಸ್ಕೃತಿಗೆ ವೀರಶೈವ ಧರ್ಮದ ಕೊಡುಗೆ ಅನನ್ಯವಾಗಿದ್ದು, ಆದರ್ಶ ಮತ್ತು ಮೌಲ್ಯಗಳನ್ನು ಪ್ರತಿಪಾದನೆ ಮಾಡಿದ ಈ ಧರ್ಮ ಇಂದು ರಾಜಕೀಯ ದುರುದ್ದೇಶಕ್ಕಾಗಿ ಬಳಕೆಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.
•
ರಂಭಾಪುರಿ ಜಗದ್ಗುರುಗಳು