Advertisement

ಬೆಳೆ ಹಾನಿ ವರದಿ ಸಿದ್ಧಪಡಿಸಿ

10:35 AM Jun 20, 2019 | Naveen |

ಹೊನ್ನಾಳಿ: ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳ ಬರಗಾಲದಿಂದ ತೋಟಗಾರಿಕೆ ಬೆಳೆಯಾದ ಅಡಕೆ ಒಣಗುತ್ತಿದ್ದು, ತೋಟಗಾರಿಕೆ ಇಲಾಖೆ ನೌಕರರು ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ನಷ್ಟ ಅಂದಾಜು ಪಟ್ಟಿ ತಯಾರಿಸಬೇಕು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Advertisement

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಬರ ಪರಸ್ಥಿತಿ ಅನುಪಾಲನ ಸಭೆಯ ಅಧ್ಯಕ್ಷತೆವಹಿಸಿ ಅವರು ಮತನಾಡಿದರು. ತಾಲೂಕಿನ ಯಾವ ಗ್ರಾಮಗಳಿಗೆ ತೋಟಗಾರಿಕೆ ಅಧಿಕಾರಿಗಳು ಈವರೆಗೆ ಭೇಟಿ ನೀಡಿದ್ದೀರಿ. ತೆಂಗು-ಅಡಕೆ ಹಾನಿ ಪ್ರಮಾಣ ಏನು ಎಂದು ಪ್ರಶ್ನಿಸಿದಾಗ ಅಧಿಕಾರಿಗಳಿಂದ ಅಸ್ಪಷ್ಟ ಉತ್ತರ ಬಂತು. ಆಗ ಶಾಸಕರು ತೋಟಗಾರಿಕೆ ಸಹಾಯಕ ನಿರ್ದೇಶಕ ಶಂಕರ್‌ ಅವರಿಗೆ, ಸಮರ್ಪಕವಾಗಿ ಕೆಲಸ ಮಾಡದವರಿಗೆ ತಕ್ಷಣ ನೋಟಿಸ್‌ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜನರ ಸೇವೆಗಾಗಿ ನಾವು, ನೀವು ಇದ್ದೇವೆ. ಸರ್ಕಾರ ಒಳ್ಳೆಯ ವೇತನ ನೀಡುತ್ತದೆ. ಸರ್ಕಾರಿ ಕೆಲಸ ದೇವರ ಕೆಲಸವೆಂದು ತಿಳಿದು ಮಾಡಬೇಕು ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ತಾಲೂಕಿನಲ್ಲಿ ದೇವಸ್ಥಾನ, ಮನೆ, ಶೌಚಾಲಯ ನಿರ್ಮಾಣಕ್ಕೆ ಮರಳು ಸಿಗುತ್ತಿಲ್ಲ. ಜಿಲ್ಲಾಧಿಕಾರಿಗಳೊಂದಿಗೆ ಈ ಬಗ್ಗೆ ಮಾತನಾಡಿದ್ದು, ಮೂರು ಕ್ವಾರಿಗಳಲ್ಲಿ ಅಧಿಕಾರಿಗಳು ಮರಳು ವಿತರಿಸುವ ಕೆಲಸ ತಕ್ಷಣ ಮಾಡಬೇಕು ಎಂದು ಹೇಳಿದರು.

ತುಂಗಭದ್ರಾ ನದಿಯಿಂದ ಎತ್ತಿನ ಗಾಡಿಯಲ್ಲಿ ಮರಳು ತೆಗೆದುಕೊಂಡು ಹೋದ ಬಡವರ ಮೇಲೆ ಪೊಲೀಸರು ಕೇಸು ದಾಖಲಿಸಿ ಜೈಲಿಗೆ ಕಳಿಸುತ್ತಿದ್ದಾರೆ. ಇದರಲ್ಲಿ ಸಿಪಿಐ ಕೈವಾಡ ಇದೆ. ಇದು ಮುಂದುವರಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ನನಗೆ ಜನರ ಹಿತ ಮುಖ್ಯ. ಎಲ್ಲದಕ್ಕೂ ಕಾನೂನು ತೋರಿಸಿದರೆ ಸರಿ ಇರುವುದಿಲ್ಲ ಎಂದು ಪೊಲೀಸ್‌ ಇಲಾಖೆ ವಿರುದ್ಧ ಗುಡುಗಿದರು.

Advertisement

ಜೂ.31ರೊಳಗಾಗಿ ಬೆಳೆ ವಿಮೆ ಪಾವತಿಸಲು ಅವಕಾಶವಿದ್ದು ರೈತರು ವಿಮೆ ಪಡೆಯಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಿಸಾನ್‌ ಸಮ್ಮಾನ್‌ ಯೋಜನೆಯಡಿಯಲ್ಲಿ ವರ್ಷಕ್ಕೆ 6 ಸಾವಿರ ರೂ. ವಿತರಿಸಲಾಗುವುದು. ಜೂ. 25ರೊಳಗಾಗಿ ರೈತರು ಸೂಕ್ತ ದಾಖಲೆ ನೀಡಿ ಹೆಸರು ನೋಂದಾಯಿಸಬೇಕು ಎಂದು ಹೇಳಿದರು.

ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರು ಮತಾನಾಡಿ, ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಹೊನ್ನಾಳಿ ತಾಲೂಕಿನ 7734 ರೈತರ ದಾಖಲೆಗಳನ್ನು ಈಗಾಗಲೆ ಅಪ್‌ಡೇಟ್ ಮಾಡಲಾಗಿದೆ. ಅರ್ಜಿಗಳು ಬಂದ ಹಾಗೆ ನಿರಂತರವಾಗಿ ಅಪ್‌ಡೇಟ್ ಮಾಡಲಾಗುವುದು ಎಂದು ಹೇಳಿದರು.

ತಾ.ಪಂ ಇಒ ರಾಘವೇಂದ್ರ, ತೋಟಗಾರಿಕೆ ಸಹಾಯಕ ನಿರ್ದೇಶಕ ಶಂಕರ್‌, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಿಶ್ವನಾಥ್‌, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next