ಹೊನ್ನಾಳಿ: ಗ್ರಂಥಾಲಯಗಳು ಜ್ಞಾನದ ಆಗರಗಳು. ಗ್ರಂಥಾಲಯಗಳ ಸ್ಥಿತಿಗತಿ ಉತ್ತಮವಾಗಿದ್ದರೆ ನಾಗರಿಕರು ಜ್ಞಾನವಂತರಾಗಿ ಉತ್ತಮ ಸಮಾಜ ನಿರ್ಮಾಣವಾಗುವುದರಲ್ಲಿ ಸಂದೇಹವೇ ಇಲ್ಲ.
ಹೊನ್ನಾಳಿ ತಾಲೂಕು ಕೇಂದ್ರ ಗ್ರಂಥಾಲಯ ಪಟ್ಟಣದ ಹೃದಯ ಭಾಗದಲ್ಲಿರುವ ಪಟ್ಟಣ ಪಂಚಾಯ್ತಿ ಕಚೇರಿ ಪಕ್ಕದಲ್ಲಿದೆ. ಗ್ರಂಥಾಲಯ 1988-89ನೇ ಸಾಲಿನಲ್ಲಿ ಹೆಂಚಿನ ಕಟ್ಟಡದಲ್ಲಿ ಪ್ರಾರಂಭವಾಯಿತು. ಹಳೆ ಕಟ್ಟಡ ಚಿಕ್ಕದಾಗಿದ್ದ ಕಾರಣ ಅದನ್ನು ಕೆಡವಿ ಹೊಸ ಆರ್ ಸಿಸಿ ಕಟ್ಟಡವನ್ನು 2010-11ನೇ ಸಾಲಿನಲ್ಲಿ ನಿರ್ಮಿಸಲಾಯಿತು.
ನೂತನ ಕಟ್ಟಡದಲ್ಲಿನ ಹಾಲ್‌ನ ಒಂದು ಭಾಗದಲ್ಲಿ ಓದುಗರು ಕುಳಿತು ಓದುವ ವ್ಯವಸ್ಥೆ ಇದ್ದು, ಮತ್ತೂಂದು ಭಾಗದಲ್ಲಿ ಗ್ರಂಥಗಳನ್ನು ರ್ಯಾಕ್‌ಗಳು ಹಾಗೂ ಗೋದ್ರೇಜ್ ಬೀರುಗಳಲ್ಲಿ ಇರಿಸಲಾಗಿದೆ.
ಈ ಗ್ರಂಥಾಲಯದಲ್ಲಿ ಸರಿಸುಮಾರು 27 ಸಾವಿರಕ್ಕಿಂತ ಹೆಚ್ಚು ಪುಸ್ತಕಗಳಿದ್ದು, ರಾಮಾಯಣ, ಮಹಾಭಾರತ, ಜ್ಞಾನಪೀಠ ಪುರಸ್ಕೃತರ ಗ್ರಂಥಗಳು, ವಿದ್ಯಾರ್ಥಿಗಳಿಗೆ ಆಕರ ಗ್ರಂಥಗಳು ಸೇರಿದಂತೆ ಕತೆ, ಕಾದಂಬರಿಗಳು ಇವೆ. ಮಾಸಿಕ, ವಾರ ಪತ್ರಿಕೆಗಳು ಸೇರಿದಂತೆ ಸ್ಥಳೀಯ ಹಾಗೂ ರಾಜ್ಯಮಟ್ಟದ ಎಲ್ಲಾ ದಿನಪತ್ರಿಕೆಗಳು ಗ್ರಂಥಾಲಯಕ್ಕೆ ಬರುತ್ತವೆ. ಗ್ರಂಥಾಲಯಕ್ಕೆ ಪ್ರತಿದಿನ 100ಕ್ಕಿಂತ ಹೆಚ್ಚು ವಾಚನಾಸಕ್ತರು ಭೇಟಿ ನೀಡುತ್ತಾರೆ. ಗ್ರಂಥಾಲಯ ಪ್ರತಿ ದಿನ ಬೆಳಿಗ್ಗೆ 9ರಿಂದ 12 ಹಾಗೂ ಸಂಜೆ 4ರಿಂದ 8 ಗಂಟೆಯವರೆಗೆ ಕಾರ್ಯ ನಿರ್ವಹಿಸುತ್ತದೆ.
ಗ್ರಂಥಾಲಯದ ಗ್ರಂಥ ಪಾಲಕರಾಗಿ ಗೀತಾ ಹಿತ್ತಲಮನೆ ಹಾಗೂ ಸಹಾಯಕಿಯಾಗಿ ಮಂಜಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ವರ್ಷ 3ರಿಂದ 4 ಸಾವಿರ ಹೊಸ ಪುಸ್ತಕಗಳು ಕೇಂದ್ರ ಗ್ರಂಥಾಲಯದಿಂದ ಬರುತ್ತಿದ್ದು, ಪತ್ರಿಕೆ ಹಾಗೂ ಇತರ ಅನುದಾನ ಸಮರ್ಪಕವಾಗಿ ಬರುತ್ತಿದೆ. ಪುಸ್ತಕಗಳನ್ನು ಇಡಲು ಕಟ್ಟಿಗೆ ರ್ಯಾಕ್‌ಗಳ ಕೊರತೆ ಇದೆ ಎಂದು ಗ್ರಂಥಪಾಲಕರು ಹೇಳುತ್ತಾರೆ.