Advertisement

ಇಚ್ಛಾಶಕ್ತಿ ಇದ್ದರೆ ಯಾವುದೂ ಅಸಾಧ್ಯವಲ್ಲ

04:48 PM May 23, 2019 | Naveen |

ಹೊನ್ನಾಳಿ: ನಾವು ಮಾಡುವ ಕಾರ್ಯದ ಸುತ್ತ ಯಶಸ್ಸು ಸುತ್ತುತ್ತ ಇರುತ್ತದೆ. ಉತ್ತಮ ಕಾರ್ಯಗಳನ್ನು ಮಾಡುವತ್ತ ನಮ್ಮ ಗಮನ ಇರಬೇಕು ಎಂದು ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಹೇಳಿದರು.

Advertisement

ನ್ಯಾಮತಿ ತಾಲೂಕಿನ ಕುಂಕುವ ಗ್ರಾಮದಲ್ಲಿ ವೀರಭದ್ರೇಶ್ವರ ಸ್ವಾಮಿ, ಆಂಜನೇಯ ಸ್ವಾಮಿ, ರಂಗನಾಥ ಸ್ವಾಮಿ ದೇವರುಗಳ ಶರಬಿ ಗುಗ್ಗಳ ಕೆಂಡದರ್ಚನೆ ಮತ್ತು ರಥೋತ್ಸವದ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಆವರು ಮಾತನಾಡಿದರು.

ಮನುಷ್ಯನಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಮಾಡುವ ಇಚ್ಛಾಶಕ್ತಿ ಬೇಕು. ಕುಂಕುವ ಗ್ರಾಮಸ್ಥರಿಗೆ ಇಚ್ಛಾಶಕ್ತಿ ಇರುವ ಕಾರಣ ಪ್ರತಿವರ್ಷ ಬೃಹತ್‌ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.

ತಾಲೂಕಿನ ಎಲ್ಲಾ ಕೆರೆಗಳ ನೀರು ತುಂಬಿಸುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕರು ಹೇಳಿದ್ದಾರೆ. ಕೇವಲ ಪ್ರಯತ್ನ ಮಾಡಿದರೆ ಸಾಲದು, ಪ್ರಯತ್ನದಿಂದ ಫಲ ಸಿಗಬೇಕು. ಮುಂದಿನ ದಿನಗಳಲ್ಲಿ ಕೆರೆ ತುಂಬುವ ಕೆಲಸವಾಗಲೇಬೇಕು ಎಂದು ಶಾಸಕರನ್ನು ಒತ್ತಾಯಿಸಿದರು.

ಉತ್ತಮವಾಗಿ ಸಂಸಾರ ನಡೆಸಿಕೊಂಡು ಹೋಗುವುದು ಪತಿ, ಪತ್ನಿ ಇಬ್ಬರದೂ ಜವಾಬ್ದಾರಿ. ಹಿರಿಯರನ್ನು ಗೌರವಿಸಿಕೊಂಡು ಸಂಸಾರದ ಬಂಡಿಯನ್ನು ಎಳೆಯಬೇಕು ಎಂದು ಹೇಳಿದರು.

Advertisement

ಹಿರೇಕಲ್ಮಠದ ಡಾ| ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆರ್ಥಿಕ ಹೊರೆ ಕಡಿಮೆ ಮಾಡುವುದು ಹಾಗೂ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಹೇಳಿದರು.

ಉಳ್ಳವರು ಹಮ್ಮಿಕೊಳ್ಳುವ ಮದುವೆಗಳಲ್ಲಿ ಆಹಾರ ಪದಾರ್ಥಗಳು ಹಾಳಾಗುವುದನ್ನು ಇಂದು ಕಾಣುತ್ತೇವೆ. ಮದುವೆಗೆ ಹೋದ ಜನರು ತಮಗೆ ಎಷ್ಟು ಬೇಕೋ ಅಷ್ಟು ಆಹಾರ ನೀಡಿಸಿಕೊಳ್ಳದೇ ಹೆಚ್ಚು ಬಡಿಸಿಕೊಂಡು ತಟ್ಟೆಯಲ್ಲಿ ಬಿಟ್ಟು ಹೋಗುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದರು.

ಪರಿಸರ ಸಂಪೂರ್ಣ ಹಾಳಾಗುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಸಸಿ ನೆಟ್ಟು ಪೋಷಿಸುವ ಗುಣ ಬೆಳಸಿಕೊಳ್ಳಬೇಕು ಎಂದು ಹೇಳಿದರು.

ಹೊಟ್ಯಾಪುರ ಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಲ್ಲಾ ದಾನಗಳಿಗಿಂತ ಕನ್ಯಾ ದಾನ ಶ್ರೇಷ್ಠವಾಗಿದೆ. ತಾಯಿ 9ತಿಂಗಳು ಹೊತ್ತು, ಹೆತ್ತು ಸಲುಹಿದ ಮಗಳನ್ನು ಇನ್ನೊಬ್ಬರಿಗೆ ದಾನ ಮಾಡುತ್ತಾಳೆ. ಆ ಮಗಳು ಮತ್ತೂಬ್ಬರ ಮನೆ ಸೊಸೆಯಾಗುತ್ತಾಳೆ. ಸೊಸೆಯನ್ನು ಮಗಳಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಪ್ರಕೃತಿ ಮುನಿಸಿಕೊಂಡರೆ ಹುಲು ಮಾನವರು ಏನೂ ಮಾಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬರ ತಾಂಡವ ನೃತ್ಯ ಮಾಡುತ್ತಿದೆ. ಪರಿಸರ ಉಳಿಸುತ್ತ ನಾವು ಗಮನ ಹರಿಸಬೇಕಿದೆ. ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಗ್ರಾಮದ ರುದ್ರಯ್ಯಸ್ವಾಮಿ ಮಾತನಾಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ತೋಟಪ್ಪ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ಎಸ್‌.ಆರ್‌. ಬಸವರಾಜಪ್ಪ ನಿರೂಪಿಸಿದರು. ಕುಮಾರ್‌ ವಂದಿಸಿದರು.

ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 69 ಜೋಡಿಗಳು ಗೃಹಸ್ತಾಶ್ರಮಕ್ಕೆ ಪಾದಾರ್ಪಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next