ಹೊನ್ನಾಳಿ: ಕೆಎಸ್‌ಆರ್‌ಟಿಸಿ ಬಸ್‌ಗಳು ಪಟ್ಟಣದಲ್ಲಿನ ತಮ್ಮದೇ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳದೆ ಖಾಸಗಿ ಬಸ್‌ನಿಲ್ದಾಣದಲ್ಲಿ ನಿಲುಗಡೆ ಮಾಡಿ ಮುಂದಿನ ಊರಿಗೆ ಪ್ರಯಾಣಿಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಹರಿಹರ ಮತ್ತು ಶಿವಮೊಗ್ಗ ಕಡೆಗಳಿಂದ ಬರುವ ಬಹುತೇಕ ಕೆಎಸ್‌ಆರ್‌ಟಿಸಿ ಬಸ್‌ಗಳು ಪಟ್ಟಣದ ನ್ಯಾಮತಿ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ತೆರಳದೆ ಖಾಸಗಿ ಬಸ್‌ನಿಲ್ದಾಣದಲ್ಲಿ ನಿಲುಗಡೆ ಮಾಡುತ್ತಾರೆ. ಇದರಿಂದ ಪಟ್ಟಣದ ಹೊಸಕೇರಿ, ಸರ್ವರ್‌ಕೇರಿ, ದುರ್ಗಿಗುಡಿ, ಕೋರ್ಟ್, ತಾಲೂಕು ಆಸ್ಪತ್ರೆ, ಹಿರೇಮಠ, ತುಂಗಬದ್ರಾ ಬಡಾವಣೆ ಸೇರಿದಂತೆ ಇತರ ಕೇರಿಗಳಿಗೆ ತೆರಳಲು ಹೆಚ್ಚಿನ ತೊಂದರೆಯಾಗುತ್ತಿದೆ.
ಖಾಸಗಿ ಬಸ್‌ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಮುಕ್ಕಾಲು ಕಿ.ಮೀ. ದೂರವಿದ್ದು ಪ್ರಯಾಣಿಕರನ್ನು ಖಾಸಗಿ ಬಸ್‌ನಿಲ್ದಾಣದಲ್ಲಿ ಇಳಿಸುವುದರಿಂದ ಪ್ರಯಾಣಿಕರಿಗೆ ಲಗೇಜ್‌ಗಳೊಂದಿಗೆ ನಡೆದುಕೊಂಡು ಹೋಗುವುದು ತೊಂದರೆಯಾಗುತ್ತದೆ. ಸುಖಾ ಸುಮ್ಮನೆ ಆಟೋಗಳಿಗೆ ದುಡ್ಡು ಸುರಿಯಬೇಕು. ತಮ್ಮದೇ ಬಸ್ ನಿಲ್ದಾಣಕ್ಕೆ ತೆರಳಿ ಬಸ್‌ಗಳ ನಿಲುಗಡೆ ಮಾಡಲು ಕೆಎಸ್‌ಆರ್‌ಟಿಸಿ ಚಾಲಕರು ಹಾಗೂ ಕಂಡಕ್ಟರ್‌ಗಳಿಗೆ ಏನು ತೊಂದರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಹಿರೇಕಲ್ಮಠ ವಾಸಿ ಒಬ್ಬ ಶಿಕ್ಷಕರು ಸಂಸಾರ ಸಮೇತ ಬಸ್‌ನಲ್ಲಿ ಬಂದಾಗ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ಹೋಗುವುದಿಲ್ಲ ಇಲ್ಲಿಯೇ ಇಳಿಯಿರಿ ಕಂಟಕ್ಟರ್ ಒತ್ತಾಯಿಸಿದರು. ಇದಕ್ಕೆ ಪ್ರತಿಭಟಿಸಿದ ಶಿಕ್ಷಕ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ಹೋಗಲೇಬೇಕು. ಅಲ್ಲಿಂದ ನಮ್ಮ ಮನೆಗೆ ತೆರಳಲು ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರೂ ಕ್ಯಾರೇ ಎನ್ನದ ಕಂಡಕ್ಟರ್ ರೈಟ್, ರೈಟ್ ಎಂದು ಹೊರಟೇ ಬಿಟ್ಟ.
ಹೊನ್ನಾಳಿ ಪಟ್ಟಣಕ್ಕೆ ಆಗಮಿಸುವ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ಗಳು ತಮ್ಮದೇ ಆದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಕ್ಕೇ ಬರಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.