Advertisement

ಅಭಿವೃದ್ಧಿಗೆ ಹರಿದು ಬರುತ್ತಿದೆ ಅನುದಾನ

11:28 AM Jan 02, 2020 | Naveen |

ಹೊನ್ನಾಳಿ: ಪೇಜಾವರ ವಿಶ್ವೇಶತೀರ್ಥಂಗಳವರ ಅಸ್ತಂಗತ ದೇಶಕ್ಕೆ ತುಂಬಲಾರದ ನಷ್ಟ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

Advertisement

ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ, ಚೀಲೂರು ಜಿ.ಪಂ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೂಜ್ಯ ಶ್ರೀಗಳು ಎಲ್ಲಾ ಧರ್ಮಿಯರ ಗುರುಗಳಾಗಿ ಹೊರಹೊಮ್ಮಿ ಶಾಂತಿಯ ಸಂಕೇತವಾಗಿದ್ದರು. ಅವರು ಅಮರರು ಎಂದು ಹೇಳಿದರು. ಚೀಲೂರು ಜಿ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸಿಸಿ ರಸ್ತೆ, ಡಾಂಬರೀಕರಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ರೂ. 20ಕೋಟಿ ಅನುದಾನ ಮಂಜೂರು ಮಾಡಿಸಿ, ಕೆಲ ಕಾಮಗಾರಿಗಳು
ಮುಗಿದಿದ್ದು ಇನ್ನು ಕೆಲ ಕಾಮಗಾರಿಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಹೇಳಿದರು.

ಬಿ.ಎಸ್‌.ಯಡಿಯೂರಪ್ಪ ಮುಖ್ಯ ಮಂತ್ರಿಗಳಾದ ಮೇಲೆ ತಾಲೂಕಿಗೆ ಸಾಕಷ್ಟು ಅನುದಾನ ಹರಿದು ಬರುತ್ತಿದ್ದು ಇದಕ್ಕೆ ಕಾರಣ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಕಾರಣ ಎಂದ ಅವರು, ಅಭಿವೃದ್ಧಿಯಲ್ಲಿ ಸದಾ ಮುಂದಿರುವ ರೇಣುಕಾಚಾರ್ಯ ತಾಲೂಕನ್ನು ರಾಜ್ಯದಲ್ಲಿಯೇ ಮಾದರಿ ತಾಲೂಕು ಮಾಡುವ ಗುರಿ ಹೊಂದಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಬಿಎಸ್‌ವೈ ನೂತನ ತಾಳಿ ಭಾಗ್ಯ ಯೋಜನೆ ಜಾರಿ ಮಾಡುತ್ತಿದ್ದು ಇದಕ್ಕಾಗಿ ಸರ್ಕಾರದ ವತಿಯಿಂದ ಪ್ರತಿ ದಂಪತಿಗೆ ರೂ.60 ಸಾವಿರ ವೆಚ್ಚ ಮಾಡಲಿದ್ದು, ರೂ.40ಸಾವಿರ ತಾಳಿಗೆ, ರೂ.15 ಸಾವಿರ ವಧುವಿಗೆ ಹಾಗೂ ರೂ.5 ಸಾವಿರ ವರನ ಬಟ್ಟೆಗೆ ಖರ್ಚು ಮಾಡಲಾಗುವುದು ಎಂದು ಹೇಳಿದರು.

Advertisement

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ತಾಲೂಕಿನ ಒಟ್ಟು 88 ಕೆರೆಗಳನ್ನು ತುಂಬಿಸುವ 400 ಕೋಟಿ ರೂ. ಪ್ರಸ್ತಾವನೆಗೆ ಸರ್ಕಾರದಿಂದ ಹಸಿರು ನಿಶಾನೆ ಬಂದಿದ್ದು, ಕೆರೆ ತುಂಬಿಸಲಾಗುವುದು ಎಂದು ಹೇಳಿದರು.

ವಿಪಕ್ಷದವರು ವಿರೋಧಿಸುವುದಕ್ಕಾಗಿಯೇ ವಿರೋಧಿಸುತ್ತಿದ್ದಾರೆ. ನನ್ನ ಅವಧಿಯಲ್ಲಿ ಆಗಿರುವ ಸಾಧನೆಗಳು ಜನರ ಕಣ್ಮುಂದೆ ರರಾಜಿಸುತ್ತಿವೆ ಎಂದು ಹೇಳಿದರು.

ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಡಿ.ಜಿ.ರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಚೀಲೂರು ಕೆರೆಯನ್ನು ಪ್ರವಾಸೋದ್ಯಮ ಇಲಾಖೆಗೆ ಸೇರಿಸಿ ಸಮಗ್ರ ಅಭಿವೃದ್ಧಿ ಮಾಡಬೇಕು, ಶಾಲೆ ದುರಸ್ತಿ, ತುಂಗಭದ್ರಾ ನದಿಗೆ ತಡೆಗೋಡೆ ಸೇರಿದಂತೆ ವಿವಿಧ ಬೇಡಿಕೆ ಮಂಡಿಸಿದರು. ತಾ.ಪಂ ಪ್ರಭಾರಿ ಅಧ್ಯಕ್ಷ ಎಸ್‌.ಪಿ.ರವಿಕುಮಾರ್‌, ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್‌, ಟಿಜಿ ಹಳ್ಳಿ ಗ್ರಾ.ಪಂ ಅಧ್ಯಕ್ಷ ನಾಗರಾಜಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next