ಹೊನ್ನಾಳಿ: ಪಪಂ ಚುನಾವಣೆ ಮುಗಿದು ಒಂದೂವರೆ ವರ್ಷದ ನಂತರ ಸರ್ಕಾರ ಮೀಸಲಾತಿ ನಿಗದಿಯಾಗಿದ್ದು, ತಮಗೆ ಅಧಿಕಾರ ಯಾವಾಗ ಸಿಗುತ್ತದೆಯೋ ಎನ್ನುವ ಚಿಂತನೆಯಲ್ಲಿದ್ದ ಎಲ್ಲ ಸದಸ್ಯರಿಗೆ ಈಗ ನಿಟ್ಟುಸಿರು ಬಿಡುವಂತಾಗಿದೆ.
ಬಿಜೆಪಿಯಿಂದ ಗೆಲುವು ಸಾಧಿಸಿದ ಟಿ.ಎಚ್.ರಂಗನಾಥ್, ಎಚ್.ಬಿ.ಸುಮಾ, ಸವಿತಾ ಮಹೇಶ್, ರಂಜಿತ ಚಂದ್ರಪ್ಪ, ಅನುಶಂಕರ್, ರಾಜಪ್ಪ ಬಾವಿಮನೆ, ಬಾಬು ಓಬಳದಾರ, ಪದ್ಮಾ ಪ್ರಶಾಂತ್, ಕೆ.ವಿ.ಶ್ರೀಧರ್, ಎಚ್.ಬಿ.ಸುಮಾ ಅವರುಗಳಲ್ಲಿ ಮಹಿಳಾ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಪುರುಷ ಸದಸ್ಯರು ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಪಪಂ ಮೀಸಲಾತಿ ಸರ್ಕಾರ ನಿಗದಿಪಡಿಸಿದ್ದು ಅಧ್ಯಕ್ಷ, ಉಪಾಧ್ಯಕ್ಷ ಎರಡು ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾತಿ ಬಂದಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಯಾಗಿದೆ. ಪ.ಪಂ ಒಟ್ಟು 18 ಸ್ಥಾನಗಳಲ್ಲಿ 10 ಸ್ಥಾನ ಬಿಜೆಪಿ ಗೆಲ್ಲುವುದರ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದ್ದು ಇದರಲ್ಲಿ 6 ಮಹಿಳಾ ಸದಸ್ಯರಿದ್ದು, 4 ಪುರುಷರಿದ್ದಾರೆ. ಮಹಿಳಾ 6 ಸದಸ್ಯರಲ್ಲಿ ಸವಿತಾ ಮಹೇಶ್, ಪದ್ಮಾ ಪ್ರಶಾಂತ್, ಎಚ್ .ಬಿ. ಸುಮ ಸಾಮಾನ್ಯ ಮೀಸಲಾತಿ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಇವರು ನೇರ ಸ್ಪರ್ಧೆಯಲ್ಲಿದ್ದಾರೆ ಎಂದು ಹೇಳಬಹುದು.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ 4 ಜನ ಪುರುಷ ಸದಸ್ಯರಿದ್ದು, ಇದರಲ್ಲಿ ಟಿ.ಎಚ್.ರಂಗಪ್ಪ, ಕೆ.ವಿ.ಶ್ರೀಧರ, ರಾಜಪ್ಪ ಬಾವಿಮನಿ ಸಾಮಾನ್ಯ ಮೀಸಲಾತಿ ಕ್ಷೇತ್ರದಿಂದ ಆಯ್ಕೆಯಾಗಿ ಉಪಾಧ್ಯಕ್ಷ ಸ್ಥಾನಕ್ಕೆ ನೇರ ಸ್ಪರ್ಧೆಯಲ್ಲಿದ್ದಾರೆ.
ಇತರ ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಆಯ್ಕೆಯಾದ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಬಹುದಾಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿಧಾನಸಭಾ ಕಲಾಪ ನಡೆಯುತ್ತಿರುವುದರಿಂದ ಅವರು ಬೆಂಗಳೂರಿನಲ್ಲಿದ್ದಾರೆ. ಅವರು ಬಂದ ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನಿರ್ಣಯವಾಗಬಹುದು.
ಶಾಸಕರ ಅನುಗ್ರಹ ಯಾರ ಮೇಲಿದೆ ಎನ್ನುವುದರ ಮೇಲೆ ಅಧ್ಯಕ್ಷ, ಉಪಾಧ್ಯಕ್ಷರ ಆಗುವ ನೀರಿಕ್ಷೆ ಇದೆ ಎನ್ನಬಹುದು. ಬಿಜೆಪಿಯಿಂದ ಗೆಲುವ ಸಾಧಿ ಸಿದ ಎಲ್ಲಾ ಸದಸ್ಯರು ಹೊಸದಾಗಿ ಆಯ್ಕೆಯಾಗಿರುವ ಕಾರಣ ಅಧ್ಯಕ್ಷ, ಉಪಾಧ್ಯಕ್ಷ ಪಟ್ಟ ಯಾರಿಗೆ ಲಭಿಸಲಿದೆ ಎನ್ನವುದನ್ನು ಕಾಯ್ದು ನೋಡಬೇಕು. ಒಟ್ಟು ಸ್ಥಾನಗಳು-18, ಬಿಜೆಪಿ-10, ಕಾಂಗ್ರೆಸ್-5, ಪಕ್ಷೇತರರು-3.
ಬಿಜೆಪಿಯಿಂದ ಆಯ್ಕೆಯಾದ 10 ಸದಸ್ಯರ ಸಭೆ ಕರೆದು ಒಮ್ಮತದ ಅಭ್ಯರ್ಥಿಗಳನ್ನು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡಲಾಗುವುದು.
ಎಂ.ಪಿ.ರೇಣುಕಾಚಾರ್ಯ,
ಶಾಸಕರು.