ಹೊನ್ನಾಳಿ: ಮಹಾರಾಷ್ಟ್ರ ರಾಜ್ಯದ ಸುಮಾರು 12 ಕುಟುಂಬಗಳು ಪಟ್ಟಣಕ್ಕೆ ಹೊಂದಿಕೊಂಡಿರುವ ಹಿರೇಮಠ ಗ್ರಾಮದ ಖಾಲಿ ನಿವೇಶನದಲ್ಲಿ ಬೀಡು ಬಿಟ್ಟಿದ್ದು, ಕಬ್ಬಿಣದ ಸಾಧನ ಸಲಕರಣೆಗಳ ಸಿದ್ಧಪಡಿಸುವ ಕಾಯಕದಲ್ಲಿ ತೊಡಗಿವೆ.
ಮಹಾರಾಷ್ಟ್ರ ರಾಜ್ಯದ ಜಾಲಾ° ಜಿಲ್ಲೆಯಿಂದ ಬಂದಿರುವ ಈ ಕುಟುಂಬಗಳು ಊರಿಂದೂರಿಗೆ ಅಲೆಯುತ್ತ ಎಲ್ಲಿ ಖಾಲಿ ಜಾಗ ಸಿಗುತ್ತೋ ಅಲ್ಲಿ ಬಿಡಾರ ಹೂಡಿ ನಾಲ್ಕಾರು ದಿನಗಳವರೆಗೆ ಇದ್ದು ರೈತರಿಗೆ, ಸಾರ್ವಜನಿಕರಿಗೆ ಅವಶ್ಯವಿರುವ ಕಬ್ಬಿಣದ ಚಾಕು, ಚೂರಿ, ಮಚ್ಚು, ಕೊಡಲಿ, ಗುದ್ದಲಿ, ಕುಡುಗೋಲು ಇನ್ನಿತರೆ ಸಾಧನಗಳ ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ.
ಕಾಯಿಸಿದ ಕಬ್ಬಿಣವನ್ನು ಒಬ್ಬರು ಹಿಡಿಕೆಯಿಂದ ಹಿಡಿದರೆ, ಇನ್ನೊಬ್ಬರು ದೊಡ್ಡ ಸುತ್ತಿಗೆಯಿಂದ ಬಡಿದು ಬೇಕಾದ ಆಕಾರ ನೀಡುತ್ತಾರೆ. ಇಡೀ ಕುಟುಂಬವೇ ಈ ಕಾಯಕದಲ್ಲಿ ತೊಡಗಿರುತ್ತದೆ. ತಮ್ಮ ಗ್ರಾಮಗಳಲ್ಲಿ ತಮಗೆ ಯಾವುದೇ ಜಮೀನು ಇಲ್ಲ. ಕಾರಣ ಊರೂರು ತಿರುಗಿ ಜೀವನ ಸಾಗಿಸುತ್ತಿದ್ದೇವೆ. ನಮಗೆ ಸಹಾಯ ಮಾಡುವವರು ಯಾರೂ ಇಲ್ಲ ಎಂದು ನೊಂದು ನುಡಿಯುತ್ತಾರೆ.
ಸ್ಥಳದಲ್ಲೇ ತಯಾರಿಸಿದ ಸಲಕರಣೆಗಳನ್ನು ಅಲ್ಲೇ ರಸ್ತೆ ಬದಿಗೆ ಮಾರಾಟ ಮಾರುತ್ತೇವೆ. ಕುಡುಗೋಲು ರೂ.100ರಿಂದ 150ರವರೆಗೆ, ಗುದ್ದಲಿ ರೂ.150ರಿಂದ 250ರವರೆಗೆ ಮಾರುತ್ತೇವೆ ಎಂದು ಹೇಳುತ್ತಾರೆ. ಸಂತೆ ದಿನಗಳಲ್ಲಿ ವ್ಯಾಪಾರ ಚೆನ್ನಾಗಿರುತ್ತದೆ.
ಉಳಿದ ದಿನಗಳಂದು ಸುತ್ತಲಿನ ಗ್ರಾಮಗಳಿಗೆ ತೆರಳಿ ವ್ಯಾಪಾರ ಮಾಡುತ್ತೇವೆ. ಒಂದು ದಿನ 1000 ರೂ. ವ್ಯಾಪಾರವಾದರೆ, ಮತ್ತೂಂದು ದಿನ 3ಸಾವಿರ ತನಕವೂ ಆಗುತ್ತದೆ ಎನ್ನುತ್ತಾರೆ. ನಾವೂ ಓದಿಲ್ಲ. ನಮ್ಮ ಮಕ್ಕಳೂ ನಮ್ಮ ಹಿಂದೆಯೇ ಬರುವುದರಿಂದ ಅವರೂ ಓದಿನ ಕಡೆ ಮುಖ ಮಾಡುತ್ತಿಲ್ಲ ಎಂದು ಹೇಳುತ್ತಾರೆ.