ಹೊನ್ನಾಳಿ: ತಾಲೂಕಿನ ಬೈರನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ 2 ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಗ್ರಾಮದಲ್ಲಿ ಬರಿದಾಗಿದ್ದ ಕಳ್ಳರ ಗುಂಡಿ ಚೆಕ್ ಡ್ಯಾಂ ಭರ್ತಿಯಗಿ ಸಮೀಪದ 60 ಎಕರೆ ಪ್ರದೇಶದ ಕೆರೆ ಸಂಪೂರ್ಣ ತುಂಬಿ ಇಲ್ಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಬೈರನಹಳ್ಳಿ ಗ್ರಾಮಕ್ಕೆ ಶಾಸಕ ಎಂ.ಪಿ.ರೇಣುಕಾಚಾರ್ಯ ತೆರಳಿ ಭರ್ತಿಯಾಗಿರುವ ಕೆರೆ ಮತ್ತು ಚೆಕ್ ಡ್ಯಾಂನ್ನು ವೀಕ್ಷಿಸಿ ರೈತರೊಂದಿಗೆ ಸಂತಸ ಹಂಚಿಕೊಂಡರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಕಳೆದ 3 ವರ್ಷಗಳಿಂದ ಸರಿಯಾದ ಮಳೆಯಿಲ್ಲದೇ ಗ್ರಾಮದ ಕೆರೆ ಮತ್ತು ಚೆಕ್ ಡ್ಯಾಂ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗದೇ ಸುತ್ತಮುತ್ತಲಿನ ಗ್ರಾಮಗಳ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರಿನ ಬವಣೆ ಉಂಟಾಗಿತ್ತು. ಕೆರೆಯ ನೀರನ್ನು ತಲೆತಲಾಂತರದಿಂದ ನೆಚ್ಚಿಕೊಂಡು ಬಂದಿದ್ದ ರೈತರ ಅಡಕೆ, ಭತ್ತ, ಬೆಳೆಗಳು ನೆಲ ಕಚ್ಚುವಂತೆ ಆಗಿತ್ತು. ಕಳೆದ ನಮ್ಮ ಆಡಳಿತಾವಧಿಯಲ್ಲಿ ಈ ಚೆಕ್ ಡ್ಯಾಂ ನಿರ್ಮಿಸಲಾಗಿದ್ದರೂ ಮಳೆಯಿಲ್ಲದೆ ಅಂರ್ತಜಲ ಮಟ್ಟ ಕಡಿಮೆಯಾಗಿ ರೈತರಿಗೆ ತೀವ್ರ ತೊಂದರೆಯುಂಟಾಗಿತ್ತು, ಪ್ರಸ್ತುತ ವರುಣನ ಕೃಪೆಯಿಂದ ಮಳೆ ಸುರಿದು ಚೆಕ್ ಡ್ಯಾಂ ಭರ್ತಿಯಾಗಿ, ಕೆರೆ ತುಂಬಿರುವುದು ರೈತರಿಗೆ ಅನುಕೂಲವಾಗಲಿದೆ ಎಂದರು.
ಈ ಕೆರೆಯಿಂದ ಪಕ್ಕದ ಕ್ಯಾಸಿನಕೆರೆ, ಚೆನ್ನೇನಹಳ್ಳಿ ಮುಂತಾದ ಗ್ರಾಮಗಳ ಬೋರ್‌ವೆಲ್ಗಳ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರ ತೋಟಗಳಿಗೆ ಹಾಗೂ ಹೊಲಗದ್ದೆಗಳಿಗೆ ತೊಂದರೆಯುಂಟಾಗದಂತೆ ನೀರು ಹರಿಯಲಿದೆ ಎಂದರು.
ಕ್ಷೇತ್ರದ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಎಲ್ಲಾ ಕೆರೆಗಳನ್ನು ತುಂಬಿಸಿ ರೈತರ ಸಾವಿರಾರು ಎಕರೆ ಜಮೀನಿಗೆ ನೀರುಣಿಸಲು ಈಗಾಗಲೇ ಸರ್ಕಾರದ ಮಟ್ಟದಲ್ಲಿ ಅಂದಾಜು ತಯಾರಿಸಿ, ಪ್ರಸ್ತಾವನೆ ನೀಡಲಾಗಿದ್ದು ಯೋಜನೆ ಮಂಜೂರಾತಿ ಹಂತದಲ್ಲಿದೆ ಎಂದರು. ಕೆರೆ ಭರ್ತಿಯಾದ ಕಾರಣ ಬಿತ್ತನೆ ಆರಂಭಿಸುತ್ತೇವೆಂದು ರೈತರು ಸಂತಸ ವ್ಯಕ್ತಪಡಿಸಿದರು.
ಜಿ.ಪಂ ಉಪಾಧ್ಯಕ್ಷ ಸಿ.ಸುರೇಂದ್ರ ನಾಯ್ಕ, ಜಿ.ಪಂ ಸದಸ್ಯ ಜಿ. ವೀರಶೇಖರಪ್ಪ, ಎ.ಪಿ.ಎಂ.ಸಿ ನಿರ್ದೇಶಕ ಜಿ.ವಿ.ಎಂ. ರಾಜು, ಚನ್ನಮುಂಬಾಪುರ ಹಾಲೇಶಪ್ಪ, ಲಿಂಗಾಪುರ ಗ್ರಾ.ಪಂ ಸದಸ್ಯ ರಾಮಚಂದ್ರಪ್ಪ ಹಾಗೂ ಗ್ರಾಮದ ರೈತರು ಇದ್ದರು.