ಹೊನ್ನಾಳಿ: ಹಣ್ಣಿನ ರಾಜ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ವಾರದಿಂದ ಮಾವಿನ ಹಣ್ಣಿನ ಮಾರಾಟ ಪ್ರಾರಂಭವಾಗಿದೆ. ಮಾವು ಪ್ರಿಯರು ಹಣ್ಣುಗಳಿಗೆ ಮುಗಿಬೀಳುತ್ತಿದ್ದಾರೆ.
ಹೋಳಿಗೆ-ಸೀಕರಣೆ ಅತ್ಯುತ್ತಮ ಕಾಂಬಿನೇಷನ್ ಆಗಿದ್ದು, ಅದನ್ನು ಸವಿಯಲು ಅಗತ್ಯವಾದ ಮಾವಿನ ಹಣ್ಣು ಅರಸಿ ಕೆಲವರು ಶಿವಮೊಗ್ಗ, ದಾವಣಗೆರೆಯಂಥ ನಗರಗಳಿಗೂ ತೆರಳುತ್ತಾರೆ. ಸದ್ಯಕ್ಕೆ ಹೊನ್ನಾಳಿ ಪಟ್ಟಣದಲ್ಲೂ ಅತ್ಯುತ್ತಮ ತಳಿಯ, ರಾಸಾಯನಿಕ ರಹಿತ ಮತ್ತು ಸಂಸ್ಕರಣೆ ಮಾಡಿದ ಮಾವಿನ ಹಣ್ಣುಗಳು ದೊರೆಯುತ್ತಿವೆ.
ಪಟ್ಟಣದ ತುಮ್ಮಿನಕಟ್ಟೆ ರಸ್ತೆ, ಖಾಸಗಿ ಬಸ್ ನಿಲ್ದಾಣದ ಆವರಣ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತ, ತಾಲೂಕು ಕಚೇರಿ ವೃತ್ತ, ಟಿ.ಬಿ. ವೃತ್ತ ಸೇರಿದಂತೆ ಮತ್ತಿತರೆಡೆ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಬಾದಾಮು (ಆಪೂಸ್), ಮಲ್ಲಿಕಾ, ರಸಪೂರಿ ಮತ್ತಿತರ ತಳಿಗಳ ಮಾವಿನ ಹಣ್ಣುಗಳನ್ನು ಕಳೆದ ಒಂದು ವಾರದಿಂದ ಮಾರಾಟ ಮಾಡಲಾಗುತ್ತಿದೆ. ತಾಜಾ ಹಣ್ಣುಗಳನ್ನು ತಂದು ಅಂದೇ ಮಾರಾಟ ಮಾಡುವುದು ಇಲ್ಲಿನ ವಿಶೇಷ.
ಮಾವಿನ ಹಣ್ಣುಗಳ ದರ: ಮಾವಿನ ಹಣ್ಣಿನ ಸೀಜನ್ ಆರಂಭವಾಗಿದ್ದು, ಕೆಲ ತಳಿಯ ಹಣ್ಣುಗಳು ಕಡಿಮೆ ದರದಲ್ಲಿ ದೊರೆಯುತ್ತಿವೆ ಎನ್ನಲಾಗಿದೆ. ರತ್ನಗಿರಿ (100 ರೂ. ಪ್ರತಿ ಕೆಜಿಗೆ), ರಸಪೂರಿ (70 ರೂ. ಪ್ರತಿ ಕೆಜಿಗೆ), ಬಾದಾಮಿ (60 ರೂ. ಪ್ರತಿ ಕೆಜಿಗೆ), ಮಲಗೋವಾ (60 ರೂ. ಪ್ರತಿ ಕೆಜಿಗೆ), ಮಲ್ಲಿಕಾ (50 ರೂ. ಪ್ರತಿ ಕೆಜಿಗೆ), ಸಿಂಧೂರ (40 ರೂ. ಪ್ರತಿ ಕೆಜಿಗೆ), ತೋತಾಪುರಿ (40 ರೂ. ಪ್ರತಿ ಕೆಜಿಗೆ), ಜವಾರಿ (40 ರೂ. ಪ್ರತಿ ಕೆಜಿಗೆ).
‘ನಾವು ಮಾವಿನ ಕಾಯಿ ಇಲ್ಲವೇ ಹಣ್ಣುಗಳನ್ನು ಮಾರಾಟ ಮಾಡುವುದಿಲ್ಲ. ನಾವೇ ಸ್ವತಃ ಮಾವಿನ ಕಾಯಿಗಳನ್ನು ಭತ್ತದ ಹುಲ್ಲಿನಲ್ಲಿ ಹಾಕಿ ನೈಸರ್ಗಿಕವಾಗಿ ಹಣ್ಣು ಆಗುವಂತೆ ಮಾಡುತ್ತೇವೆ. ನಂತರ, ಮಾವಿನ ಹಣ್ಣುಗಳನ್ನು ರಸ್ತೆ ಬದಿ ಇಟ್ಟುಕೊಂಡು ಮಾರಾಟ ಮಾಡುತ್ತೇವೆ. ಇದರಿಂದ ಗ್ರಾಹಕರಿಗೆ ಉತ್ತಮ ಹಣ್ಣು ದೊರೆಯುತ್ತದೆ. ತಮಗೆ ಮಧ್ಯವರ್ತಿಗಳ ಕಾಟವೂ ಇರುವುದಿಲ್ಲ’ ಎನ್ನುತ್ತಾರೆ ರೈತ ರಾಜಪ್ಪ.
ರೈತರು ವ್ಯಾಪಾರದಲ್ಲಿ ಮೋಸ ಮಾಡುವುದಿಲ್ಲ ಎಂಬ ನಂಬಿಕೆ ಜನರಿಗಿದೆ. ನೈಸರ್ಗಿಕ ವಿಧಾನದಲ್ಲಿ ರೈತರು ಹಣ್ಣು ಮಾಡಿದ ಮಾವಿನ ಫಸಲನ್ನು ನಾವು ಖರೀದಿಸುತ್ತೇವೆ. ಈ ತಾಜಾ ಹಣ್ಣನ್ನು ಮನೆಮಂದಿ ಎಲ್ಲರೂ ಇಷ್ಟಪಡುತ್ತಾರೆ. ನೈಸರ್ಗಿಕ ವಿಧಾನದಿಂದ ಹಣ್ಣು ಮಾಡಿರುವುದರಿಂದ ವಿಶಿಷ್ಟ ರುಚಿ-ಸಿಹಿ ಇರುತ್ತದೆ ಎಂಬುದು ತಾಲೂಕಿನ ಬಿದರಗಡ್ಡೆ ಗ್ರಾಮದ ಬಿ.ಎಚ್. ಕುಬೇರಗೌಡರ ಅನಿಸಿಕೆ.
ಒಂದು ತಿಂಗಳಿಂದೀಚೆಗೆ ಮಾವಿನ ಹಣ್ಣಿನ ಸೀಜನ್ ಪ್ರಾರಂಭವಾಗಿದೆ. ಈಗ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ದರ ಕಡಿಮೆ ಇದೆ. ಮಾವಿನ ಹಣ್ಣಿನ ವ್ಯಾಪಾರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.
•
ಮಹಮ್ಮದ್ ಇಮ್ರಾನ್,ಸಮೀವುಲ್ಲಾ, ರಿಯಾಜ್
ಮಾವಿನ ಹಣ್ಣಿನ ವ್ಯಾಪಾರಿಗಳು, ಹೊನ್ನಾಳಿ