Advertisement

ಬೇಸಿಗೆ ಸಂಭ್ರಮದಲ್ಲಿ ಮಕ್ಕಳು

10:08 AM May 04, 2019 | Team Udayavani |

ಹೊನ್ನಾಳಿ: ಸ್ವಲ್ಪ ಓದು ಸ್ವಲ್ಪ ಮೋಜು ಎಂಬ ಘೋಷಣೆಯೊಂದಿಗೆ ಆಯೋಜಿಸಲಾಗಿರುವ ಬೇಸಿಗೆ ಸಂಭ್ರಮ ಶಿಬಿರಗಳಲ್ಲಿ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ 30 ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಕುಣಿಯುತ್ತ, ನಲಿಯುತ್ತ, ಆಟವಾಡುತ್ತ ಕಲಿಯುತ್ತಿದ್ದಾರೆ.

Advertisement

ಪ್ರತಿ ವಾರಕ್ಕೊಂದು ವಿಷಯದಂತೆ ಕುಟುಂಬ, ಆರೋಗ್ಯ, ಪರಿಸರ, ನೀರು ಹಾಗೂ ಆಹಾರ ವಿಷಯಗಳ ಬಗ್ಗೆ ಆರು ಮತ್ತು ಏಳನೇ ತರಗತಿ ವಿದ್ಯಾಥಿಗಳಿಗೆ ಶಿಕ್ಷಕರಿಂದ ಅರಿವು ಮೂಡಿಸಲಾಗುತ್ತಿದೆ. ಈ ಬೇಸಿಗೆ ಶಿಬಿರ ಏ.24 ರಿಂದ ಪ್ರಾರಂಭವಾಗಿದ್ದು, ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತದೆ.

ಇತ್ತೀಚಿಗೆ ಮೊಬೈಲ್ನಲ್ಲಿ ಗೇಮ್‌ ಆಡುತ್ತ ಕಾಲ ಕಳೆಯುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಅದನ್ನು ತಪ್ಪಿಸಲು ಶಿಬಿರ ಆಯೋಜಿಸಲಾಗಿದ್ದು, ಕುಟುಂಬದ ವಿಷಯದಲ್ಲಿ ಅವಿಭಕ್ತ ಕುಟುಂಬ ಹಾಗೂ ಸಂಬಂಧಗಳು, ಪರಿಸರದ ವಿಚಾರಕ್ಕೆ ಬಂದಾಗ ನಮ್ಮ ಸುತ್ತಮುತ್ತಲಿನ ಗಿಡ-ಮರಗಳ ಸಂರಕ್ಷಣೆ, ನೀರನ್ನು ಹೇಗೆ ಮಿತವಾಗಿ ಬಳಸಬೇಕು ಹಾಗೂ ಅದರ ಮಹತ್ವ ಹೀಗೆ ಐದು ಚಟುವಟಿಕೆಗಳ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಂಪು ಶಿಕ್ಷಣ ನೀಡುತ್ತಿದ್ದಾರೆ.

ಪ್ರತಿನಿತ್ಯ ಒಂದೊಂದು ಶಾಲೆಗೆ ಸಿಆರ್‌ಪಿ, ಇಸಿಒ, ಬಿಇಒ, ಅಕ್ಷರ ದಾಸೋಹ ನಿರ್ದೇಶಕ, ಬಿಆರ್‌ಸಿ ಹಾಗೂ ಡಿಡಿಪಿಐ ಸೇರಿದಂತೆ ಎಲ್ಲಾ ಶಿಕ್ಷಣಾಧಿಕಾರಿಗಳು ಬೇಸಿಗೆ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ವಿನೂತನವಾದ ಈ ಬೇಸಿಗೆ ಸಂಭ್ರಮ ಕಾರ್ಯಕ್ರಮ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಬರಗಾಲದ ಬಿಸಿಯೂಟದ ಯೋಜನೆ: ಅವಳಿ ತಾಲೂಕಿನ 146 ಶಾಲೆಗಳ ವಿದ್ಯಾರ್ಥಿಗಳಿಗೆ ಬರಗಾಲದ ಬಿಸಿಯೂಟದ ಯೋಜನೆಯನ್ನು ಏ. 11ರಿಂದ ಮುಂದುವರೆಸಲಾಗಿದೆ. ನೀರಾವರಿ ಪ್ರದೇಶವನ್ನು ಹೊರತುಪಡಿಸಿ ಮಳೆಯಾಶ್ರಿತ ಪ್ರದೇಶದಲ್ಲಿರುವ ಶಾಲೆಗಳಿಗೆ ಬಿಸಿಯೂಟ ಯೋಜನೆಯನ್ನು ವಿಸ್ತರಿಸಲಾಗಿದೆ. 146 ಶಾಲೆಯ ಸುಮಾರು 5 ಸಾವಿರ ವಿದ್ಯಾರ್ಥಿಗಳು ಈ ಬಿಸಿಯೂಟ ಯೋಜನೆಯ ಲಾಭ ಪಡೆಯುತ್ತಿದ್ದಾರೆ.

Advertisement

ಸರ್ಕಾರದ ಯೋಜನೆಗಳು ವೈಜ್ಞಾನಿಕವಾಗಿದ್ದು, ಮಕ್ಕಳು ಸದುಪಯೋಗ ಮಾಡಿಕೊಂಡು ಶಿಕ್ಷಣವಂತರಾಗಲು ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗಿದೆ.
ಜಿ.ಇ.ರಾಜೀವ್‌,
ಬಿಇಒ ಹೊನ್ನಾಳಿ. ಹೊನ್ನಾಳಿ 

ಹೊನ್ನಾಳಿ ತಾಲೂಕು ಬರಗಾಲ ಪೀಡಿತ ತಾಲೂಕು ಪಟ್ಟಿಗೆ ಸೇರಿರುವುದರಿಂದ ಏ. 11 ರಿಂದ 146 ಶಾಲೆಗಳಲ್ಲಿ ಬಿಸಿಯೂಟ ವ್ಯವಸ್ಥೆ ಮಾಡಲಾಗಿದೆ. ಈ ಯೋಜನೆಯನ್ನು ಮಕ್ಕಳು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಕೆ.ಆರ್‌.ರುದ್ರಪ್ಪ,
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ, ಹೊನ್ನಾಳಿ.

ಎಂ.ಪಿ.ಎಂ.ವಿಜಯಾನಂದಸ್ವಾಮಿ.

Advertisement

Udayavani is now on Telegram. Click here to join our channel and stay updated with the latest news.

Next