ಹೊನ್ನಾಳಿ: ನೆರೆ ಸಂತ್ರಸ್ತರಿಗೆ ತಾಲೂಕಿನ ಜನತೆ ಉದಾರವಾಗಿ ದವಸ-ಧಾನ್ಯ, ಹೊಸ ಬಟ್ಟೆಗಳು ಹಾಗೂ ನಗದು ಹಣವನ್ನು ದೇಣಿಗೆ ರೂಪದಲ್ಲಿ ಕೊಡುತ್ತಿರುವುದು ಜನರ ಮಾನವೀಯ ಗುಣವನ್ನು ಎತ್ತಿ ತೋರಿಸುತ್ತಿದೆ. ಇದಕ್ಕಾಗಿ ಎಲ್ಲಾ ದಾನಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಗುರುವಾರ ತಾಲೂಕಿನ ಕುಂದೂರು, ಕ್ಯಾಸಿನಕೇರಿ, ಬೈರನಹಳ್ಳಿ, ಹಟ್ಟಿಹಾಳ್, ಹಳೇ ದೇವರಹೊನ್ನಾಳಿ ಗ್ರಾಮಗಳಿಂದ ಟ್ರಾಕ್ಟರ್‌ಗಳಲ್ಲಿ ನೆರೆ ಸಂತ್ರಸ್ತರಿಗಾಗಿ ತಂದಂತಹ ಅಕ್ಕಿ, ಜೋಳ, ಬೇಳೆ, ಹೊಸ ಬಟ್ಟೆಗಳು ಹಾಗೂ ನಗದು ಹಣವನ್ನು ತಾಲೂಕು ಕಚೇರಿ ಬಳಿ ಸ್ವೀಕರಿಸಿ ಅವರು ಮಾತನಾಡಿದರು.
ತಾಲೂಕಿನ ಜನತೆ ನೆರೆ ಸಂತ್ರಸ್ತರಿಗೆ ಸಾಗರೋಪಾದಿಯಲ್ಲಿ ಸ್ಪಂದಿಸುತ್ತಿದ್ದಾರೆ. ಈ ಕಾರ್ಯ ತಾಲೂಕಿಗೆ ಪುಣ್ಯ ತರುವಂತಹದು ಎಂದರು. ದೇಣಿಗೆ ಸ್ವೀಕರಿಸಿ ಅಧಿಕೃತ ರಸೀದಿ ವಿತರಿಸಲು ತಹಶೀಲ್ದಾರ್‌ಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಪಕ್ಷಾತೀತವಾಗಿ ನೆರೆ ಸಂತ್ರಸ್ತರಿಗೆ ಸಹಾಯ ಮಾಡಬೇಕು. ಇದಕ್ಕೆ ನಮ್ಮ ಸಹಕಾರ ಇದೆ ಎಂದು ಹೇಳಿದ್ದಾರೆ. ಇದಕ್ಕಾಗಿ ಮಾಜಿ ಪ್ರಧಾನಿಯವರನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಗ್ರಾಮಗಳ ಮುಖಂಡರು ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ದಿನದಂದೇ ನೆರೆ ಸಂತ್ರಸ್ತರಿಗೆ ನೆರವು ನೀಡುವ ಉದ್ದೇಶ ನಮ್ಮದಾಗಿತ್ತು ಎಂದು ಹೇಳಿದರು. ತಹಶೀಲ್ದಾರ್ ತುಷಾರ್ ಬಿ.ಹೊಸೂರು ಇದ್ದರು.