Advertisement

ಕೃಷಿ ಸಮೃದ್ಧಿ, ಜಾನುವಾರು ಆರೋಗ್ಯಕ್ಕಾಗಿ ಅಜ್ಜಿ ಹಬ್ಬ!

01:21 PM Jul 20, 2019 | Naveen |

ಹೊನ್ನಾಳಿ: ತಾಲೂಕಿನ ಬಲಮುರಿ, ಎಚ್. ಗೋಪಗೊಂಡನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗ್ರಾಮಸ್ಥರು ಶುಕ್ರವಾರ ಸಡಗರ-ಸಂಭ್ರಮಗಳಿಂದ ಅಜ್ಜಿ ಹಬ್ಬ ಆಚರಿಸಿದರು.

Advertisement

ಹಬ್ಬಕ್ಕೆ ಅಗತ್ಯವಾದ ಮಣ್ಣಿನ ಕುಡಿಕೆ, ಬಳೆ ಬಂಗಾರ, ತೆಂಗಿನಕಾಯಿ, ಬಾಳೆಹಣ್ಣು ಮತ್ತಿತರ ಸಾಮಗ್ರಿಗಳನ್ನು ಶುಕ್ರವಾರ ಹೊನ್ನಾಳಿ ಪಟ್ಟಣದಲ್ಲಿ ಜನತೆ ಖರೀದಿಸಲು ಮುಗಿಬಿದ್ದಿದ್ದ ದೃಶ್ಯ ಕಂಡುಬಂತು.

ಅಜ್ಜಿ ಹಬ್ಬದ ದಿನ ಹೋಳಿಗೆ-ಸೀಕರಣೆ ಮತ್ತಿತರ ಅಡುಗೆ ಮಾಡಿ ಊಟ ಮಾಡುವ ವಾಡಿಕೆ. ಅದರಂತೆ, ಸೀಕರಣೆ ಮಾಡಲು ಬೇಕಾದ ಮಾವಿನಹಣ್ಣನ್ನು ಖರೀದಿಸಲು ಜನತೆ ಮುಗಿಬಿದ್ದಿದ್ದರು. ಮಾವಿನಹಣ್ಣಿನ ಕೊನೇ ಸೀಜನ್‌ ಆದ ಕಾರಣ ಬೆಲೆ ಕೊಂಚ ಹೆಚ್ಚಾಗಿತ್ತು.

ಮಳೆಗಾಲದ ಆಷಾಢ ಮಾಸದಲ್ಲಿನ ಶುಕ್ರವಾರ ಗ್ರಾಮೀಣ ಪ್ರದೇಶಗಳಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ಅದರಂತೆ ಬಲಮುರಿ ಗ್ರಾಮದಲ್ಲಿ ಮೂರನೇ ಆಷಾಢ ಶುಕ್ರವಾರ ಹಬ್ಬ ಆಚರಿಸಲಾಯಿತು.

ಮಳೆಗಾಲದಲ್ಲಿ ಜಾನುವಾರು ಗಳಿಗೆ ಬರುವ ಸಾಮಾನ್ಯ ಕಾಯಿಲೆಗಳಾದ ಗಳಲೆ ರೋಗ, ಕಾಲು-ಬಾಯಿ ಜ್ವರ, ಗದ್ದ ಬಾವು ಮತ್ತಿತರ ಕಾಯಿಲೆಗಳು ಬಾರದಿರಲಿ, ಜಾನುವಾರುಗಳು ಆರೋಗ್ಯದಿಂದ ಇರಲಿ ಎಂಬ ಉದ್ದೇಶದಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ ಎನ್ನುತ್ತಾರೆ ಬಲಮುರಿ ಗ್ರಾಮದ ಎ.ಇ. ಮಲ್ಲಿಕಾರ್ಜುನ್‌.

Advertisement

ಅಜ್ಜಿ ಹಬ್ಬದ ದಿನ ಗ್ರಾಮಸ್ಥರು ರಾತ್ರಿ ವೇಳೆ ಗ್ರಾಮದಲ್ಲಿನ ದುರುಗಮ್ಮನ ದೇವಸ್ಥಾನಕ್ಕೆ ತೆರಳುತ್ತಾರೆ. ಹಾಲು, ಅನ್ನ ಮತ್ತಿತರ ಖಾದ್ಯಗಳ ಎಡೆಯನ್ನು ದೇವಿಗೆ ಅರ್ಪಿಸುತ್ತಾರೆ. ನಂತರ, ಮನೆಗೆ ಬಂದು ಅಜ್ಜಿ ಹಬ್ಬದ ವಿಧಿ-ವಿಧಾನಗಳನ್ನು ನೆರವೇರಿಸಿ, ಎಡೆ ಮಾಡಿ ಎಲ್ಲರೂ ಭೋಜನ ಸವಿಯುತ್ತಾರೆ. ಈ ಹಬ್ಬದ ವಿಶೇಷವೇನೆಂದರೆ, ಮನೆಯ ಎತ್ತುಗಳಿಗೆ ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತದೆ. ಎತ್ತುಗಳನ್ನು ಈ ದಿನ ಬೇಸಾಯಕ್ಕೆ ಬಳಸುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next