ಹೊನ್ನಾಳಿ: ಕಾಲ ಬದಲಾದಂತೆ ಕೃಷಿ ಚಟುವಟಿಕೆಗಳಲ್ಲೂ ಬದಲಾವಣೆಗಳು ಕಂಡು ಬರುತ್ತಿವೆ. ಒಂದು ಕಾಲದಲ್ಲಿ ಎತ್ತುಗಳಿಲ್ಲದಿದ್ದರೆ ಬೇಸಾಯವೇ ಇಲ್ಲ ಎನ್ನುವ ಪರಿಸ್ಥಿತಿ ಇತ್ತು. ಕೃಷಿ ಯಾಂತ್ರೀಕರಣದಿಂದ ಎತ್ತುಗಳ ಪ್ರಾಮುಖ್ಯತೆ ಕ್ಷೀಣಿಸಿ, ಎತ್ತಿನ ಗೊರಸುಗಳಿಗೆ ನಾಲು(ಹಲ್ಲೆ) ಕಟ್ಟುವ ಕಾಯಕಕ್ಕೆ ದೊಡ್ಡ ಹೊಡೆತ ಬಿದ್ದು, ಇದನ್ನೆ ನಂಬಿದ್ದ ಕುಟುಂಬಗಳು ಬೀದಿಗೆ ಬಂದು ನಿಂತಿವೆ.
ಹಳ್ಳಿಗಳಲ್ಲಿ ಪ್ರತಿ ಮನೆ ಮನೆಗೆ ಎತ್ತುಗಳಿದ್ದಾಗ ವರ್ಷಕ್ಕೆ 2 ಬಾರಿ ಎತ್ತುಗಳಿಗೆ ನಾಲು ಕಟ್ಟುವ ಕಾಯಕ ಮಾಡಿಕೊಂಡು ತಮ್ಮ ಸಂಸಾರದ ನೊಗವನ್ನು ಹೊತ್ತು ಬದುಕಿನ ಬಂಡಿ ಸಾಗಿಸುತ್ತಿದ್ದರು.
ಜಾಗತೀಕರಣ, ಔದ್ಯೋಗಿಕರಣದಿಂದ ಎತ್ತುಗಳ ಸಂಖ್ಯೆ ಕಡಿಮೆಯಾದಂತೆ ಹಲ್ಲೆ ಕಟ್ಟುವ ಕುಟುಂಬಗಳಿಗೆ ಇನ್ನಿಲ್ಲದ ತೊಂದರೆಯಾಗಿ ಕೆಲ ಕುಟುಂಬಗಳು ಬೇರೆ ವೃತ್ತಿ ಮಾಡಿಕೊಂಡು ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ. ಏನೇ ಆಗಲಿ ನಮ್ಮ ಪೂರ್ವಜರು ಮಾಡಿಕೊಂಡು ಬರುತ್ತಿದ್ದ ಎತ್ತುಗಳ ಗೊರಸುಗಳಿಗೆ ಹಲ್ಲೆ ಕಟ್ಟುವ ಕಾಯಕವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಚೀಲೂರು ಗ್ರಾಮದ ಖಲೀಲ ಹೇಳುತ್ತಾರೆ.
ತಂದೆ ಸಬ್‌ಜಾನ್‌ಸಾಬ್ ಬದುಕಿನ ದಾರಿ ತೋರಿಸಿಕೊಟ್ಟಿರುವ ಕಾಯಕ ನಾಲು(ಹಲ್ಲೆ) ಕಟ್ಟುವುದು. ಎತ್ತುಗಳು ದೇವರ ಸ್ವರೂಪ. ಬಸವಣ್ಣನ ಪಾದಗಳಿಗೆ ನಾಲಾಗಳು ಪಾದರಕ್ಷೆಗಳಿದ್ದಂತೆ. ನಾಲು ಕಟ್ಟಿದ ಮೇಲೆ ಎತ್ತುಗಳು ಸಂತೋಷದಿಂದ ಕುದುರೆ ಓಡಿದಂತೆ ಡಾಂಬಾರ್ ರಸ್ತೆಗಳಲ್ಲಿ, ಹೊಲ ಗದ್ದೆಗಳಲ್ಲಿ, ಬದುಗಳಲ್ಲಿ ಸಂಚರಿಸುತ್ತವೆ. ಇದೊಂದು ಪುಣ್ಯದ ಕಾಯಕ ಎಂದು ನನ್ನ ತಂದೆ ಸಬ್‌ಜಾನ್‌ಸಾಬ್ ಹೇಳುತ್ತಿದ್ದ ಕಾರಣ ಈ ಕಾಯಕವನ್ನು ಮಾಡುತ್ತಿದ್ದೇನೆ. ಈ ಕೆಲಸಕ್ಕೆ ಸೊಂಟ ಗಟ್ಟಿ ಇರಬೇಕು. ಶಕ್ತಿ ಇರುವಷ್ಟು ದಿನ ಈ ಕೆಲಸ ಮಾಡುತ್ತೇನೆ. ಮುಂದಿನದು ದೇವರಿಗೆ ಬಿಟ್ಟಿದ್ದು ಎನ್ನುತ್ತಾರೆ ಖಲೀಲ್.
ಹಲ್ಲೆ ಕಟ್ಟಲು ಕಬ್ಬಿಣದ ಮೊಳೆಗಳು, ನಾಲಗಳು, ಸುತ್ತಿಗೆ, ಹಗ್ಗ ಸೇರಿದಂತೆ ಇತರ ಪರಿಕರಗಳನ್ನು ತೆಗೆದುಕೊಂಡು ಕರೆದವರ ಮನೆ ಬಾಗಿಲಿಗೆ ತೆರಳಿ ಕೆಲಸ ಮಾಡಿ ಬರುತ್ತೇನೆ. ಪ್ರಸ್ತುತ ದಿನದಲ್ಲಿ ಜೋಡೆತ್ತಿಗೆ ಹಲ್ಲೆ ಹಾಕಲು ರೂ. 700ರಿಂದ 800 ಪಡೆಯುತ್ತಿದ್ದು, ಕೆಲಸ ಸರಿಯಾಗಿ ಸಿಕ್ಕರೆ ತಿಂಗಳಿಗೆ ರೂ. 8 ಸಾವಿರದವರೆಗೆ ಆಗುತ್ತದೆ. ಅದರಲ್ಲಿ ಗಂಡ, ಹೆಂಡತಿ ಮತ್ತು ಮೂವರು ಮಕ್ಕಳ ಸಂಸಾರ ಸಾಗಬೇಕು ಎಂದು ಅವರು ಹೇಳಿದರು.
ಗ್ರಾಮೀಣ ಕಸಬುಗಳಲ್ಲಿ ಹಲ್ಲೆ ಕಟ್ಟುವುದೂ ಒಂದಾಗಿದ್ದು ಸರ್ಕಾರ ನಮ್ಮಂತವರಿಗೆ ದಾರಿ ತೋರಬೇಕು ಎಂದು ಹೇಳಿದರು.
ಎತ್ತುಗಳಿಗೆ ಹಲ್ಲೆ ಕಟ್ಟದಿದ್ದರೆ ಡಾಂಬರ್ ರಸ್ತೆಗಳಲ್ಲಿ ಮುಂದೆ ಸಾಗುವುದಿಲ್ಲ. ಮನುಷ್ಯರಿಗೆ ಚಪ್ಪಲಿಗಳು ಹೇಗೆ ಅವಶ್ಯಕವೋ ಹಾಗೆಯೇ ಹೂಡು ಎತ್ತುಗಳಿಗೆ ಹಲ್ಲೆಗಳು ಅವಶ್ಯಕ.
•
ನೀಲಪ್ಪ, ರೈತ, ಹಿರೇಮಠ ಗ್ರಾಮ. ಹೊನ್ನಾಳಿ.
10 ವರ್ಷಗಳ ಹಿಂದೆ ತಾಲೂಕಿನಲ್ಲಿ ಸರಿ ಸುಮಾರು 35 ಜನ ನಾಲು ಕಟ್ಟುತ್ತಿದ್ದರು. ಬೇಸಾಯ ಪದ್ಧತಿ ಬದಲಾದಂತೆ ಹಾಗೂ ಎತ್ತುಗಳ ಸಂಖ್ಯೆ ಕಡಿಮೆಯಾದಂತೆ ಇದರಲ್ಲಿ ಬದುಕುವುದು ಕಷ್ಟ ಎಂದು ಅನೇಕರು ಬೇರೆ ವೃತ್ತಿ ಹುಡುಕಿಕೊಂಡಿದ್ದಾರೆ. ಸದ್ಯಕ್ಕೆ ತಾಲೂಕಿನಲ್ಲಿ ಕೇವಲ 6ರಿಂದ 8 ಜನರು ನಾಲು ಕಟ್ಟುವ ಕಾಯಕದಲ್ಲಿ ತೊಡಗಿದ್ದಾರೆ.
•ಖಲೀಲ್,
ನಾಲು ಕಟ್ಟುವ ಕೆಲಸಗಾರ, ಚೀಲೂರು, ನ್ಯಾಮತಿ ತಾಲೂಕು.