ಹೊನ್ನಾಳಿ: ನೂತನ ಆಧಾರ್ ಕಾರ್ಡ್ ಮಾಡಿಸಲು ಹಾಗೂ ತಿದ್ದುಪಡಿ ಮೊದಲಾದ ಕಾರ್ಯಗಳಿಗೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಪಟ್ಟಣದಲ್ಲಿ ನಿರ್ಮಾಣವಾಗಿದೆ.
ಪಟ್ಟಣದಲ್ಲಿ ಎಸ್‌ಬಿಐ ಮತ್ತು ಕೆನರಾ ಬ್ಯಾಂಕ್‌ಗಳಲ್ಲಿ ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆಯಾದರೂ ಜನಸಂಖ್ಯೆ ಹೆಚ್ಚಾಗಿರುವ ಕಾರಣ ಇರುವ ಎರಡು ಕೇಂದ್ರಗಳು ಸಾಕಾಗುತ್ತಿಲ್ಲ. ಪ್ರತಿ ನಿತ್ಯ ಆಧಾರ್ ಸೇವಾ ಕೇಂದ್ರಗಳ ಬಳಿ ಜನರು ಮಾರುದ್ದನೆಯ ಕ್ಯೂಗಳಲ್ಲಿ ನಿಲ್ಲುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ವಸತಿ ಯೋಜನೆಯ ಫಲಾನುಭವಿಗಳಿಗೆ
ಸಹಾಯಧನ ವರ್ಗಾಯಿಸಲು ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಇತ್ತೀಚೆಗೆ ಸರಕಾರ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಪಡೆದುಕೊಳ್ಳಲು ಬರುವವರ ಸಂಖ್ಯೆ ದ್ವಿಗುಣಗೊಂಡಿದೆ.
ಅಲ್ಲದೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಅರ್ಜಿ ಸಲ್ಲಿಸಲು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು, ಪಡಿತರ ಪದಾರ್ಥಗಳನ್ನು ಪಡೆಯಲು, ಬ್ಯಾಂಕ್ ಖಾತೆ ತೆರೆಯಲು ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಈಗ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಇದಕ್ಕಾಗಿ ಆಧಾರ್ ಕಾರ್ಡ್ ಮಾಡಿಸಲು ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಈಗಾಗಲೇ ಆಧಾರ್ ಕಾರ್ಡ್ ಪಡೆದುಕೊಂಡಿದ್ದರೂ ಕೆಲ ತಪ್ಪುಗಳಿರುವ ಕಾರಣಕ್ಕೆ ತಿದ್ದುಪಡಿ ಮಾಡಿಸಲೂ ಈ ಆಧಾರ್ ಸೇವಾ ಕೇಂದ್ರಗಳಿಗೆ ಸಾರ್ವಜನಿಕರು ಬರಬೇಕಿದೆ. ಈ ಹಿನ್ನೆಲೆಯಲ್ಲಿ ಆಧಾರ್ ಸೇವಾ ಕೇಂದ್ರಗಳು ಜನರಿಂದ ತುಂಬಿ ತುಳುಕುತ್ತಿವೆ. ಪ್ರತಿ ದಿನ ಬೆಳ್ಳಂಬೆಳಗ್ಗೆ ಆಧಾರ್ ಸೇವಾ ಕೇಂದ್ರಗಳ ಎದುರು ಸಾರ್ವಜನಿಕರು ಸರದಿ ಸಾಲಿನಲ್ಲಿ ನಿಲ್ಲುತ್ತಾರೆ. ಕೂರಲು ವ್ಯವಸ್ಥೆ ಇದ್ದರೂ ಇಲ್ಲರಿಗೂ ಸಾಲುತ್ತಿಲ್ಲ. ಅದರಲ್ಲೂ ವಯಸ್ಸಾದವರ ಗತಿ ದೇವರಿಗೇ ಪ್ರೀತಿ. ಕೆಲವರು ವೃದ್ಧ ಮಹಿಳೆಯರು ಸರದಿಯಲ್ಲಿ ನಿಲ್ಲುವುದಕ್ಕೂ ಆಗದೇ ಪರದಾಡುವ ದೃಶ್ಯ ಕರುಳು ಹಿಂಡುವಂತಿರುತ್ತದೆ.
ಸರದಿ ಸಾಲಿನಲ್ಲಿ ನಿಂತು ನಿತ್ರಾಣಗೊಂಡ ಕೆಲವರು ಸಮೀಪದಲ್ಲಿಯೇ ಅಂಗಡಿ-ಮುಂಗಟ್ಟುಗಳ ಕಟ್ಟೆಯ ಮೇಲೆ ಇಲ್ಲವೇ ಕಲ್ಲುಹಾಸಿನ ಮೇಲೆ ಕುಳಿತು ಕಾಲ ಕಳೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಹಾಲೂಣಿಸುವ ತಾಯಂದಿರು ಕೂಡ ತಮ್ಮ ಮಕ್ಕಳೊಂದಿಗೆ ಸರತಿ ಸಾಲಿನಲ್ಲಿ ನಿಂತು ತೊಂದರೆ ಅನುಭವಿಸುತ್ತಾರೆ. ಸರ್ಕಾರ ಸಾರ್ವಜನಿಕರ ಮೇಲೆ ಕರುಣೆ ತೋರಿ ಆಧಾರ್ ಕಾರ್ಡ್ ಪಡೆಯುವ ವಿಧಾನ ಸರಳೀಕರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.
ಸಾರ್ವಜನಿಕರು ತಮ್ಮ ಕೆಲಸ, ಕಾರ್ಯ ನಿಮಿತ್ತ ಬ್ಯಾಂಕ್‌ಗೆ ಆಗಮಿಸುತ್ತಾರೆ.
ಈ ವೇಳೆ ಆಧಾರ್ ತಿದ್ದುಪಡಿ, ಕಾರ್ಡ್ ಮಾಡಿಸಲು ಜನರು ಆಗಮಿಸುವುದರಿಂದ ಬ್ಯಾಂಕ್‌ನಲ್ಲಿ ಜನಸಂದಣಿ ಉಂಟಾಗುತ್ತಿದೆ.
ತುಷಾರ್ ಬಿ.ಹೊಸೂರು
ತಹಶೀಲ್ದಾರ್.