Advertisement

ಹಾಂಗ್‌ಕಾಂಗ್‌ನಲ್ಲಿ ಚೀನಿ ದರ್ಪ ಧ್ವನಿಯೆತ್ತಲಿ ಜಗತ್ತು

12:50 AM Jul 04, 2020 | Hari Prasad |

ಇಡೀ ಪ್ರಪಂಚದ ವಿರೋಧದ ನಡುವೆಯೂ ಚೀನ ಹಾಂಗ್‌ಕಾಂಗ್‌ ಅನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕುತಂತ್ರವನ್ನು ಕೈಬಿಡುತ್ತಲೇ ಇಲ್ಲ.

Advertisement

ವರ್ಷದಿಂದ ಹಾಂಗ್‌ಕಾಂಗ್‌ನ ಜನರು ಚೀನದ ದಬ್ಟಾಳಿಕೆಯ ವಿರುದ್ಧ ಹೋರಾಡುತ್ತಲೇ ಇದ್ದಾರೆ.

ಕೋವಿಡ್ 19 ಸಮಯದಲ್ಲೂ ಜೀವ ಭಯ ತೊರೆದು ರಸ್ತೆಗಿಳಿದು ಜಿನ್‌ಪಿಂಗ್‌ ಸರ್ವಾಧಿಕಾರತ್ವದ ವಿರುದ್ಧ ಧ್ವನಿಯೆತ್ತುತ್ತಲೇ ಇದ್ದಾರೆ. ಆದರೆ, ಈಗ ಚೀನ ಅನುಷ್ಠಾನಕ್ಕೆ ತಂದಿರುವ ವಿವಾದಾಸ್ಪದ ರಾಷ್ಟ್ರೀಯ ಭದ್ರತೆ ಕಾನೂನು, ಎಲ್ಲಿ ಹಾಂಗ್‌ಕಾಂಗ್‌ ಜನರ ಧ್ವನಿಯನ್ನು ಸಂಪೂರ್ಣವಾಗಿ ಹತ್ತಿಕ್ಕುತ್ತದೋ ಎನ್ನುವ ಆತಂಕ ಎದುರಾಗಿದೆ.   ಚೀನದ ಸಂಸತ್ತಿನಲ್ಲಿ ಮೇ ತಿಂಗಳ ಕೊನೆಯ ವಾರದಲ್ಲಿ ಈ ಕಾನೂನಿಗೆ ಅನುಮೋದನೆ ದೊರೆತಿತ್ತು.

ಪ್ರಪಂಚವು ಕೋವಿಡ್‌-19 ಬಿಕ್ಕಟ್ಟಿಗೆ ಸಿಲುಕಿರುವ ವೇಳೆಯಲ್ಲೇ ಹಾಂಗ್‌ಕಾಂಗ್‌ನ ಮೇಲಿನ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಮಾಡಿಬಿಟ್ಟಿದೆ ಚೀನ. ಈಗ ಚೀನದ ವಿರುದ್ಧ ಒಂದೇ ಪದವನ್ನು ಉಸುರುವುದನ್ನೂ ರಾಷ್ಟ್ರದ್ರೋಹವೆಂದು ಪರಿಗಣಿಸಲಾಗುತ್ತದೆ.

ಈ ಕಾನೂನಿನಿಂದಾಗಿ ಇನ್ಮುಂದೆ ಹಾಂಗ್‌ಕಾಂಗ್‌ನ ಜನರನ್ನು ರಾಷ್ಟ್ರವಿರೋಧದ ಆರೋಪದಲ್ಲಿ ಚೀನದ ಜೈಲುಗಳಲ್ಲಿ ನೂಕುವುದಕ್ಕೆ ಸರ್ವಾಧಿಕಾರಿ ಜಿನ್‌ಪಿಂಗ್‌ ಆಡಳಿತಕ್ಕೆ ಸುಲಭವಾಗಲಿದೆ.

Advertisement

ಅಂದರೆ, ಇನ್ಮುಂದೆ ಚೀನ ತನ್ನ ತಾಳಕ್ಕೆ ತಕ್ಕಂತೆ ಕುಣಿಯದ ಹಾಂಗ್‌ಕಾಂಗ್‌ ನಿವಾಸಿಗಳಿಗೆ ಹಾಗೂ ರಾಜಕಾರಣಿಗಳಿಗೆ ಅಪರಾಧಿ ಪಟ್ಟ ಕಟ್ಟಿ, ಅವರನ್ನು ಹತ್ತಿಕ್ಕಲಿದೆ. ಆದಾಗ್ಯೂ ಹೊಸ ಕಾನೂನಿನಲ್ಲಿ ಮರಣದಂಡನೆಯ ಪ್ರಾವಧಾನ ಇಲ್ಲವಾದರೂ, ಇದು ಬಹಳ ದಮನಕಾರಿಯಂತೂ ಹೌದು. ಏಕೆಂದರೆ, ಕಳೆದ ವರ್ಷ ಚೀನ ವಿರೋಧಿ ಪ್ರತಿಭಟನೆಗಳಲ್ಲಿ  ಪಾಲ್ಗೊಂಡವರನ್ನೆಲ್ಲ ರಾಷ್ಟ್ರದೋಹಿಗಳೆಂದು ಚೀನ ಪರಿಗಣಿಸಬಹುದು!

ಈ ಕಾನೂನು ಲಾಗೂ ಆಗುತ್ತಿರುವಂತೆಯೇ ಹಾಂಗ್‌ಕಾಂಗ್‌ನಲ್ಲಿ ಯಾವ ಮಟ್ಟದಲ್ಲಿ ಪ್ರತಿಭಟನೆಗಳು ಆರಂಭವಾಗಿದೆ ಎಂದರೆ, ಜನರ ಹೋರಾಟ ಇನ್ನೂ ದೊಡ್ಡ ಮಟ್ಟ ತಲುಪಲಿರುವ ಸೂಚನೆ ಸಿಗುತ್ತಿದೆ.

ಈ ವಿಷಯದಲ್ಲಿ ಹಾಂಗ್‌ಕಾಂಗ್‌ ಜನರ ಕೆಚ್ಚೆದೆಯನ್ನು ಗೌರವಿಸಲೇಬೇಕು. ಚೀನದ ದುಷ್ಟಬುದ್ಧಿಯ ಬಗ್ಗೆ ಅರಿವಿದ್ದರೂ ಸಹ, ಜೀವದ ಹಂಗುತೊರೆದು ಅವರು ಹೋರಾಡುತ್ತಿದ್ದಾರೆ. ಇದೇ ವೇಳೆಯಲ್ಲೇ ಭಾರತವು, ಹಾಂಗ್‌ಕಾಂಗ್‌ ವಿಚಾರವನ್ನು ವಿಶ್ವಸಂಸ್ಥೆಯಲ್ಲೂ ಪ್ರಸ್ತಾಪಿಸಿರುವುದು ಶ್ಲಾಘನೆಗೆ ಪಾತ್ರವಾಗುತ್ತಿದೆ.

ಅತ್ತ ಬ್ರಿಟನ್‌, ಅಗತ್ಯ ಎದುರಾದರೆ ಹಾಂಗ್‌ಕಾಂಗ್‌ ಜನರಿಗೆ ಆಶ್ರಯ ಕೊಡುವುದಾಗಿ ಹೇಳಿದೆ. ಅಮೆರಿಕ ಸಹ ಚೀನದ ದಮನಕಾರಿ ನೀತಿಯನ್ನು ಪ್ರಶ್ನಿಸುತ್ತಲೇ ಇದೆ. ಆದರೆ, ಜಾಗತಿಕ ರಾಷ್ಟ್ರಗಳೆಲ್ಲ ಒಟ್ಟಾಗಿ ಡ್ರ್ಯಾಗನ್‌ ಮೇಲೆ ಅತೀವ ಒತ್ತಡ ತರದೇ ಹೋದರೆ, ಜಿನ್‌ಪಿಂಗ್‌ ಸರಕಾರ ಹಾಂಗ್‌ ಕಾಂಗ್‌ ಅನ್ನು ಸಂಪೂರ್ಣ ಕೈವಶ ಮಾಡಿಕೊಳ್ಳುವುದರಲ್ಲಿ ಸಂಶಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next