Advertisement

ಹಾಂಗ್‌ಕಾಂಗ್‌ : ಅಡಿ ಅಂತರದಲ್ಲಿ ಸಾಮಾಜಿಕ ಅಂತರ?

01:19 PM Apr 27, 2020 | sudhir |

ಮಣಿಪಾಲ: ಕೋವಿಡ್‌-19ನ್ನು ಮಟ್ಟ ಹಾಕಲು ಇರುವ ಪ್ರಮುಖ ಅಸ್ತ್ರ ಎಂದರೆ ಅದು ಸಾಮಾಜಿಕ ಅಂತರ. ಈಗಾಗಲೇ ಸಾಕಷ್ಟು ದೇಶಗಳು ಪರಿಣಾಮಕಾರಿಯಾಗಿ ಈ ನಿಯಮವನ್ನು ಅನುಕರಣೆ ಮಾಡಿದ್ದರ ಫಲವಾಗಿ ಸಹಜ ಸ್ಥಿತಿಯತ್ತ ನಿಧಾನವಾಗಿ ಮರಳುತ್ತಿವೆ. ಜತೆಗೆ ಎಷ್ಟೋ ಸಂಶೋಧನ ವರದಿಗಳು ಮತ್ತು ತಜ್ಞರೂ ಸಾಮಾಜಿಕ ಅಂತರ ಸೋಂಕಿನ ಪ್ರಸರಣ ಕಡಿಮೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಹಾಂಗ್‌ ಕಾಂಗ್‌ನ ಕೇಜ್‌ ಹೋಮ್‌ಗಳಲ್ಲಿ ಮಾತ್ರ ಈ ನಿಯಮಕ್ಕೆ ತದ್ವಿರುದ್ಧವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ ಮಟ್ಟದ ಅಂತರವನ್ನು ಕಾಯ್ದುಕೊಳ್ಳುವುದು ಈ ಸ್ಥಳಗಳಲ್ಲಿ ಅಸಾಧ್ಯವಾಗಿ ಪರಿಣಮಿಸಿದೆ.

Advertisement

ಒಂದು ಅಡಿ ಅಂತರದಲ್ಲೇ ಪ್ರತಿದಿನ ವಾಸ
ಸೋಂಕು ಹರಡುವುದನ್ನು ತಡೆಯಲು ಕನಿಷ್ಠ 4ರಿಂದ 6 ಅಡಿ ಅಂತರವನ್ನು ಕಾಯ್ದುಕೊಳ್ಳಿ ಎಂದು ಪ್ರತಿದಿನ ಸುದ್ದಿ ಮಾಧ್ಯಮಗಳು ಜನರನ್ನು ಎಚ್ಚರಿಸುತ್ತಲೇ ಇವೆ. ಆದರೆ ಹಾಂಗ್‌ಕಾಂಗ್‌ನ ಕೆಲ ಪ್ರದೇಶಗಳಲ್ಲಿ ಈ ನಿಯಮ ಸರಿಯಾಗಿ ಪಾಲನೆ ಆಗುತ್ತಲೇ ಇಲ್ಲ. ಅಲ್ಲಿನ ನಿವಾಸಿಗಳಿಗೆ ಸ್ವಯಂ ಬಂಧಿಗಳಾಗುವುದು ತೀರಾ ಕಷ್ಟಕರವಾಗಿದೆ. ಕೇವಲ ಒಂದು ಅಡಿ ಅಂತರದಲ್ಲಿ ಒಂದು ಕೋಣೆಯನ್ನು ಹತ್ತು ಜನರು ಹಂಚಿಕೊಳ್ಳುತ್ತಿದ್ದು, ಕ್ವಾರೆಂಟೇನ್‌ನ ಈ ಸಮಯದಲ್ಲಿ ಕೋಣೆಯೊಳಗೆ ಇಡೀ ದಿನವನ್ನು ಕಳೆಯುವುದು ಉಸಿರುಗಟ್ಟಿಸುತ್ತಿದೆ ಎಂದು ಸಿಎನ್‌ಎನ್‌ ವರದಿ ಮಾಡಿದೆ.

ಹೊರಗೆ ಓಡಾಡಿ ಕಾಲ ಕಳೆಯುತ್ತಿದ್ದೆವು
ಲಾಕ್‌ಡೌನ್‌ಗೂ ಮೊದಲು ಕೆಲಸ, ತಿರುಗಾಟ ಮಾಡಿಕೊಂಡೋ ಅಥವಾ ಉದ್ಯಾನವನಗಳಲ್ಲಿ ಸ್ನೇಹಿತರ ಜತೆ ಕೂಡಿ ರಾತ್ರಿಯವರೆಗೆ ಸಮಯ ಕಳೆಯುತ್ತಿದ್ದೆವು. ಆದರೆ ಸೋಂಕು ನಿಯಂತ್ರಣಕ್ಕಾಗಿ ಪಾರ್ಕ್‌, ಸಾರ್ವಜನಿಕ ಓಡಾಟದ ಮೇಲೆ ನಿಬಂಧನೆಗಳನ್ನು ಹೇರಿದ್ದು ಬಹಳ ಸಮಸ್ಯೆಯಾಗಿದೆ. ಇಡೀ ದಿನ ಒಳಗೆ ಉಳಿಯುವಂತಾಗಿದೆ. ಆ ಮೂಲಕ ಹೆಚ್ಚುವರಿಯಾಗಿ ಹತ್ತು ಗಂಟೆಯನ್ನು ಈ ಕಿರಿದಾದ ಸ್ಥಳದಲ್ಲಿ ಕಳೆಯುವುದು ಹಿಂಸೆ ಅನ್ನಿಸುತ್ತಿದೆ. ಕೇವಲ 100 ಚದರ ಅಡಿಗಿಂತ ಚಿಕ್ಕದಾಗಿರುವ ಜಾಗದಲ್ಲೇ ಬಟ್ಟೆ, ಇತರೆ ಸಾಮಗ್ರಿ, ಹೊದಿಕೆಗಳನ್ನೆಲ್ಲ ಇಡಲಾಗಿದ್ದು, ಪ್ರತ್ಯೇಕವಾಗಿ ಅಡುಗೆಮನೆಯಾಗಲಿ ಅಥವಾ ಸ್ನಾನದ ಕೋಣೆಯಾಗಲಿ ಇಲ್ಲ. ತಾತ್ಕಾಲಿಕ ಗೋಡೆಗಳನ್ನು ಅಡ್ಡವಾಗಿ ಹಾಕಲಾಗಿದ್ದು, ಒಂದೇ ಕೋಣೆಯನ್ನು ಹತ್ತು ಜನ ಹಂಚಿಕೊಂಡಿರುವ ಈ ಸ್ಥಳದಲ್ಲಿ ಹೇಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಯಂ ಗೃಹಬಂಧಿ ಆಗುವುದು ಎಂಬುದೇ ತಿಳಿಯುತ್ತಿಲ್ಲ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಸದೃಢವಾಗಿರುವ ಹಾಂಗ್‌ಕಾಂಗ್‌ ಶ್ರೀಮಂತರ ದೇಶವೂ ಹೌದು. ಆದರೆ ಈ ದೇಶ ಆರ್ಥಿಕ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಪ್ರತಿ ಐವರಲ್ಲಿ 4 ಜನ ಬಡವರು. ಹಾಗೆಯೇ ಹಾಂಗ್‌ಕಾಂಗ್‌ನಲ್ಲಿ ಪ್ರತಿ 10 ಜನರಲ್ಲಿ ಒಂಬತ್ತು ಜನರು 753 ಚದರ ಅಡಿಗಿಂತ ಕಡಿಮೆ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಆದರೆ ವಿಶ್ವದಲ್ಲಿ ಅತಿ ಹೆಚ್ಚು ಬಾಡಿಗೆ ಮೊತ್ತವನ್ನು ಸಂಗ್ರಹಿಸುವ ದೇಶ ಇದಾಗಿದ್ದು, ರಿಯಲ್‌ ಎಸ್ಟೇಟ್‌ ಹೂಡಿಕೆ ಸಂಸ್ಥೆ ಸಿಬಿಆರ್‌ಇ ಪ್ರಕಾರ ಕಳೆದ ವರ್ಷ 1.2 ಮಿಲಿಯನ್‌ಗಿಂತ ಹೆಚ್ಚು ಬಾಡಿಗೆ ಮೊತ್ತ ದೇಶದ ಬೊಕ್ಕಸಕ್ಕೆ ಹರಿದು ಬಂದಿದೆ.

ಈ ಜನರ ಸುರಕ್ಷತೆ ಮರೆಯಿತೇ ಸರಕಾರ
ಸುಮಾರು 1,00ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ಹಾಂಗ್‌ಕಾಂಗ್‌ನಲ್ಲಿ ಇಲ್ಲಿಯವರೆಗೂ ಸೋಂಕಿಗೆ ನಾಲ್ಕು ಮಂದಿ ಅಸುನೀಗಿದ್ದಾರೆ. ದೇಶಾದ್ಯಂತ ಸಾರ್ವಜನಿಕ ಪ್ರದೇಶ ಸೇರಿದಂತೆ, ಗ್ರಂಥಾಲಯಗಳು, ಉದ್ಯಾನವನ, ಜಿಮ್‌ಗಳನ್ನು, ರೆಸ್ಟೋರೆಂಟ್‌ ಮತ್ತು ಬಾರ್‌ಗಳನ್ನು ಬಂದ್‌ ಮಾಡಲಾಗಿದೆ. ಇದರ ಹೊರತಾಗಿ ನಿಯಮಗಳನ್ವಯ ಸಾರ್ವಜನಿಕ ಕೂಟಗಳನ್ನು ಕೇವಲ ನಾಲ್ಕು ಜನರಿಗೆ ಸೀಮಿತವಾಗಿ ಆಯೋಜಿಸಬಹುದು ಎಂದು ಹೇಳಿದೆ. ಸೋಂಕು ನಿಯಂತ್ರಣಕ್ಕಾಗಿ ಇಷ್ಟೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿರುವ ಹಾಂಗ್‌ಕಾಂಗ್‌ ಆಡಳತ ವರ್ಗ ಕೇಜ್‌ ಹೋಂಗಳಲ್ಲಿ ವಾಸಿಸುತ್ತಿರುವ ಜನರ ಸುರಕ್ಷತೆಯನ್ನು ಮರೆಯಿತೇ ಎಂಬ ಪ್ರಶ್ನೆ ಮೂಡುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next