Advertisement

ಹಾಂಕಾಂಗ್‌ ತಿಯನನ್ಮೆನ್‌ ವಿಜಿಲ್‌ ರದ್ದು

12:45 PM Jun 02, 2020 | sudhir |

ಹಾಂಕಾಂಗ್‌ : ಕೋವಿಡ್‌ ವೈರಸ್‌ಗೆ ಅಂಜಿ 30 ವರ್ಷಗಳಲ್ಲಿ ಇದೇ ಮೊದಲ ಬಾರಿ ಹಾಂಕಾಂಗ್‌ ತಿಯನನ್ಮೆನ್‌ ವಿಜಿಲ್‌ ಕಾರ್ಯಕ್ರಮವನ್ನು ರದ್ದುಗೊಳಿಸಿದೆ. ತಿಯನನ್ಮೆನ್‌ ಹತ್ಯಾಕಾಂಡವನ್ನು ಪ್ರತಿಭಟಿಸಿ ಪ್ರತಿ ವರ್ಷ ಜೂ.4ರಂದು ನಡೆಯುವ ಕಾರ್ಯಕ್ರಮವಿದು. ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಕೋವಿಡ್‌ ಎರಡನೇ ಹಂತದಲ್ಲಿ ವ್ಯಾಪಿಸುವ ಅಪಾಯ ತಲೆದೋರಿರುವ ಹಿನ್ನೆಲೆಯಲ್ಲಿ ಹಾಂಕಾಂಗ್‌ ಈ ವರ್ಷ ಜೂ.4ರಂದು ಈ ವಾರ್ಷಿಕ ಪ್ರತಿಭಟನೆಗೆ ಅನುಮತಿ ಕೊಡದಿರಲು ನಿರ್ಧರಿಸಿದೆ.

Advertisement

1989ರಂದು ನೂರಾರು ವಿದ್ಯಾರ್ಥಿಗಳು ಸಾವುನೋವಿಗೀಡಾದ ಈ ಘಟನೆ ತಿಯನನ್ಮೆನ್‌ ಹತ್ಯಾಕಾಂಡ ಎಂದೇ ಪ್ರಸಿದ್ಧವಾಗಿದೆ. 1990ರಿಂದೀಚೆಗೆ ಪ್ರತಿ ವರ್ಷ ಹಾಂಕಾಂಗ್‌ನಲ್ಲಿ ಜೂ.4ರಂದು ಈ ಹತ್ಯಾಕಾಂಡವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತದೆ. ಆದರೆ ಈ ಸಲ ಪ್ರತಿಭಟನೆಯಲ್ಲಿ ಸಾಮಾಜಿಕ ಅಂತರ ಪಾಲಿಸುವ ಅನಿವಾರ್ಯತೆಯಿದೆ. ತಿಯನನ್ಮೆನ್‌ ವಿಜಿಲ್‌ಗೆ ಸಾವಿರಾರು ಜನರು ಸೇರುತ್ತಾರೆ. ಇಲ್ಲಿ ಸಾಮಾಜಿಕ ಅಂತರ ಪಾಲನೆ ಜಾರಿಗೊಳಿಸುವುದು ಅಸಾಧ್ಯ ಎಂದು ಅರಿವಾಗಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಇದೇ ವೇಳೆ ಹಾಂಕಾಂಗ್‌ ಮೇಲಿನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಲು ಚೀನ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬೀಜಿಂಗ್‌ನ ಒತ್ತಡವೂ ತಿಯನನ್ಮೆನ್‌ ವಿಜಿಲ್‌ ರದ್ದತಿ ಹಿಂದೆ ಕೆಲಸ ಮಾಡಿರಬಹುದು ಎಂಬ ಗುಮಾನಿ ಇದೆ. ಇನ್ನೆಂದಿಗೂ ತಿಯನನ್ಮೆನ್‌ ವಿಜಿಲ್‌ ನಡೆಯದಿರಬಹುದು ಎಂಬ ಆತಂಕವೂ ಹಾಂಕಾಂಗ್‌ ಜನರಲ್ಲಿದೆ. ವಿಜಿಲ್‌ ನಡೆಯುವ ವಿಕ್ಟೋರಿಯ ಪಾರ್ಕ್‌ ತನಕ ಹೋಗಲು ವಿಜಿಲ್‌ ಸಂಘಟಕರು ತೀರ್ಮಾನಿಸಿದ್ದಾರೆ. ಪೊಲೀಸರು ತಡೆದರೂ ಸಾಂಕೇತಿಕವಾಗಿಯಾದರೂ ಪ್ರತಿಭಟನೆ ನಡೆಯಲಿದೆ ಎಂದು ಹೇಳಿಕೊಂಡಿರುವ ಸಂಘಟಕರು ಜಾಗತಿಕವಾಗಿ ಬೆಂಬಲ ಕೋರಿದ್ದಾರೆ. ಅಲ್ಲಲ್ಲಿ ಬೂತ್‌ಗಳನ್ನು ಸ್ಥಾಪಿಸಿ ಜನಬೆಂಬಲವನ್ನು ಗಳಿಸುವುದು ಸಂಘಟಕರ ಇನ್ನೊಂದು ಯೋಜನೆ.

ಜೂ.4ರಂದು ತಿಯನನ್ಮೆನ್‌ ವಿಜಿಲ್‌ ನಡೆಯುವುದು ಹಾಂಕಾಂಗ್‌ನಲ್ಲಿ ಒಂದು ಸಹಜ ಕ್ರಿಯೆಯಂತೆ ನಡೆದುಕೊಂಡು ಬಂದಿದೆ. ಇದಕ್ಕೆ ಪ್ರಚಾರದ ಅಗತ್ಯವಿಲ್ಲ. ಜೂ.4ರಂದು ಜನರು ವಿಕ್ಟೋರಿಯ ಪಾರ್ಕ್‌ಗೆ ಬಂದೇ ಬರುತ್ತಾರೆ.

ತಿಯನನ್ಮೆನ್‌ ಪ್ರತಿಭಟನೆ
ತಿಯನನ್ಮೆನ್‌ ಪ್ರತಿಭಟನೆ ಜೂನ್‌ 4ರ ಘಟನೆ ಎಂದು ಕೂಡ ಕರೆಯಲ್ಪಡುತ್ತದೆ. ತಿಯಾನನ್ಮೆನ್‌ಚೌಕದಲ್ಲಿ ಚೀನದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಎ. 15ಕ್ಕೆ ಆರಂಭವಾದ ಪ್ರತಿಭಟನೆ ಜೂನ್‌ ತಿಂಗಳವರೆಗೆ ಮುಂದುವರಿದಾಗ ಜೂ. 4ರಂದು ಅಲ್ಲಿನ ಸರಕಾರದ ಆದೇಶದಂತೆ ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕಲು ಶ್ರಮಿಸಿದರು. ಚೀನದಲ್ಲಿ ಉಂಟಾದ ತ್ವರಿತ ಸಾಮಾಜಿಕ ಬದಲಾವಣೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ರಾಜಕೀಯದ ವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಲಾಗಿತ್ತು. ಪ್ರಜಾಪ್ರಭುತ್ವ, ಪತ್ರಿಕಾ ಸ್ವಾತಂತ್ರ್ಯ ಮತ್ತು ವಾಕ್‌ಸ್ವಾತಂತ್ರ್ಯ ಪ್ರತಿಭಟನೆಕಾರರ ಪ್ರಮುಖ ಬೇಡಿಕೆಯಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next