ಹಾಂಗ್ ಕಾಂಗ್:ಚೀನಾ ವಿರೋಧಿ ಹಾಗು ಹಾಂಗ್ ಪ್ರಜಾಪ್ರಭುತ್ವ ಪರ ಸತತ ಲೇಖನ, ವರದಿ ಪ್ರಕಟಿಸುತ್ತಿದ್ದ ಮಾಧ್ಯಮ ದಿಗ್ಗಜ ಜಿಮ್ಮಿ ಲಾಯಿಯನ್ನು ಸೋಮವಾರ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಚೀನಾ ಈಗಾಗಲೇ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಭದ್ರತಾ ಕಾಯ್ದೆ ವಿರುದ್ಧ ಹಾಂಗ್ ಕಾಂಗ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಲಾಯಿ ಪ್ರಜಾಪ್ರಭುತ್ವ ಪರ ಲೇಖನ ಪ್ರಕಟಿಸುತ್ತಿದ್ದರು. ಏತನ್ಮಧ್ಯೆ ಪೊಲೀಸರು ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿ ಜಿಮೈ ಅವರಿಗೆ ಕೈಗೆ ಕೋಳ ತೊಡಿಸಿ ಎಳೆದೊಯ್ಯುತ್ತಿರುವ ಫೋಟೋ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.
ಹಾಂಗ್ ಕಾಂಗ್ ನಲ್ಲಿ ನೂತನ ಕಾನೂನು ಕಳೆದ ಜೂನ್ ನಲ್ಲಿ ಜಾರಿಗೆ ಬಂದ ನಂತರ ಅದನ್ನು ವಿರೋಧಿಸುತ್ತಿರುವವರನ್ನು, ಪ್ರತಿಭಟಿಸುತ್ತಿರುವವರನ್ನು ಚೀನಾದ ಅಣತಿ ಮೇರೆಗೆ ಹಾಂಗ್ ಪೊಲೀಸರು ಹತ್ತಿಕ್ಕುತ್ತಿದ್ದಾರೆ. ಇದೀಗ ಪೊಲೀಸರು ಲಾಯಿ ಹಾಗೂ ಅವರ ಇಬ್ಬರು ಮಕ್ಕಳನ್ನೂ ಕೂಡಾ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಲಾಯಿ ಅವರ ಆ್ಯಪಲ್ ಡೈಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು, ಸುಮಾರು 200 ಜನ ಪೊಲೀಸ್ ಅಧಿಕಾರಿಗಳ ನಾಟಕೀಯ ದಾಳಿಯ ದೃಶ್ಯವನ್ನು ಫೇಸ್ ಬುಕ್ ನಲ್ಲಿ ಪ್ರಸಾರ ಮಾಡಿದ್ದು, ಪತ್ರಿಕೆಯ ಮುಖ್ಯ ಸಂಪಾದಕ ಲಾ ವಾಯಿ ಕ್ವಾಂಗ್ ಅವರು ಅಧಿಕಾರಿಗಳ ಬಳಿ ವಾರಂಟ್ ತೋರಿಸುವಂತೆ ಬೇಡಿಕೆ ಇಡುತ್ತಿರುವ ದೃಶ್ಯ ಕೂಡಾ ಸೆರೆಯಾಗಿದೆ ಎಂದು ವರದಿ ಹೇಳಿದೆ.
ಕಚೇರಿಯಲ್ಲಿರುವ ಎಲ್ಲಾ ಪತ್ರಕರ್ತರು ತಮ್ಮ ಸ್ಥಾನವನ್ನು ಬಿಟ್ಟು ಸಾಲಿನಲ್ಲಿ ನಿಲ್ಲುವಂತೆ ಪೊಲೀಸ್ ಅಧಿಕಾರಿ ಸೂಚಿಸಿದ್ದರು. ನಂತರ ಸುದ್ದಿಮನೆಯಲ್ಲಿರುವ ಎಲ್ಲಾ ಪತ್ರಕರ್ತರ ಗುರುತು ಸೇರಿದಂತೆ ಇತರ ಮಾಹಿತಿ ಪಡೆದಿರುವುದಾಗಿ ವರದಿ ತಿಳಿಸಿದೆ. ನಂತರ ಮಾಧ್ಯಮ ದಿಗ್ಗಜ ಲಾಯಿ ಅವರ ಕೈಗೆ ಕೋಳ ತೊಡಿಸಿದ ನಂತರ ಅಧಿಕಾರಿಗಳು ಅವರನ್ನು ಸುತ್ತುವರಿದಿದ್ದರು ಎಂದು ವರದಿ ವಿವರಿಸಿದೆ.
ಕೋರ್ಟ್ ಆದೇಶದ ಮೇರೆಗೆ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ಪತ್ರಿಕೆಯ ಸಿಬ್ಬಂದಿಗಳಿಗೆ ತಿಳಿಸಿರುವುದಾಗಿ ವರದಿ ಹೇಳಿದೆ.