Advertisement

ಜಲ ದಿಗ್ಬಂಧನದಿಂದ ಬಿಡುಗಡೆ

07:45 PM Mar 20, 2020 | Sriram |

ಬೀಜಿಂಗ್‌: ಕೊರೊನಾ ವೈರಸ್‌ ಭೀತಿಯಿಂದ ಐದು ದಿನಗಳಿಂದ ಹಾಂಕಾಂಗ್‌ ಬಳಿ ಜಲ ದಿಗ್ಬಂಧನಕ್ಕೆ ಒಳಗಾಗಿದ್ದ ವರ್ಲ್ಡ್ ಡ್ರೀಮ್‌ ನೌಕೆಯ ಪ್ರಯಾಣಿಕರಿಗೆ ರವಿವಾರ ನಿರಾಳತೆ ಸಿಕ್ಕಿದೆ. ಈ ಹಡಗಿನಲ್ಲಿದ್ದ 1,800 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈ ಹಡಗಿನಲ್ಲಿರುವ ಸಿಬಂದಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ.

Advertisement

ಈ ಹಡಗಿನಿಂದ ಬಿಡುಗಡೆ ಮಾಡುವ ಮುನ್ನ ಇವರೆಲ್ಲರ ಆರೋಗ್ಯ ಪರೀಕ್ಷೆ ನಡೆಸಲಾಗಿದ್ದು ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ಹೊರ ಹೋಗಲು ಅವಕಾಶ ನೀಡಲಾಗಿದೆ. ಇದರಲ್ಲಿ ಭಾರತದ 200 ಮಂದಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಈ ಹಡಗಿನಲ್ಲಿರುವ ಯಾರಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿರಲಿಲ್ಲ. ಆದರೂ ಎಚ್ಚರಿಕೆ ವಹಿಸಿ ಎಲ್ಲರನ್ನೂ ಹಡಗಿನಲ್ಲಿಯೇ ಇರಿಸಿಕೊಳ್ಳಲಾಗಿತ್ತು.

ಸಾವಿನ ಸಂಖ್ಯೆ ಹೆಚ್ಚಳ
ಚೀನಕ್ಕೆ ಮಾರಕವಾಗುತ್ತಿರುವ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ ರವಿವಾರ 811ಕ್ಕೇರಿದೆ. ಸೋಂಕಿತರ ಸಂಖ್ಯೆ 37 ಸಾವಿರಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿ ನೀಡಿದೆ. 600 ಮಂದಿಯ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದೂ ಹೇಳ ಲಾಗಿದೆ. ಚೀನ ಸರಕಾರ ಮತ್ತು ಚೀನದ ಕೇಂದ್ರ ಬ್ಯಾಂಕ್‌ ಕೋಟಿಗಟ್ಟಲೆ ಪರಿಹಾರ ಹಣ ಬಿಡುಗಡೆ ಮಾಡಿವೆ.

ಭಾರತಕ್ಕೂ ಅಪಾಯ
ಚೀನದಲ್ಲಿ 800ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿರುವ ಮಾರಣಾಂತಿಕ ಕೊರೊನಾ ವೈರಸ್‌ನ ಅಪಾಯ ಭಾರತಕ್ಕೂ ಇದೆಯೇ? ಹೌದು ಎನ್ನುತ್ತಿದೆ ಜರ್ಮನಿಯ ಎರಡು ಸಂಸ್ಥೆಗಳು ತಯಾರಿಸಿರುವ ವರದಿ. ಚೀನದಿಂದ ಕೊರೊನಾ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿದ್ದು, ಅದು ಬೇಗನೆ ಹರಡಲು ಸಾಧ್ಯವಿರುವಂತಹ 20 ರಾಷ್ಟ್ರಗಳ ಪೈಕಿ ಭಾರತವೂ ಒಂದು ಎಂಬ ಆತಂಕಕಾರಿ ಅಂಶವನ್ನು ಈ ವರದಿ ಬಹಿರಂಗಪಡಿಸಿದೆ.

ಜರ್ಮನಿಯ ಹಂಬೋಲ್ಟ್ ವಿಶ್ವವಿದ್ಯಾನಿಲಯ ಮತ್ತು ರಾಬರ್ಟ್‌ ಕೋಚ್‌ ಇನ್‌ಸ್ಟಿಟ್ಯೂಟ್‌ ಈ ಅಧ್ಯಯನ ನಡೆಸಿದೆ. 20 ಸಂಭಾವ್ಯ ಕೊರೊನಾ ಆತಂಕಿತ ರಾಷ್ಟ್ರಗಳ ಪೈಕಿ ಭಾರತ 17ನೇ ಸ್ಥಾನದಲ್ಲಿದೆ. ಚೀನದೊಂದಿಗೆ ಬೇರೆ ಬೇರೆ ದೇಶಗಳಿಗೆ ಇರುವ ಸಂಪರ್ಕ, ವಿಮಾನಗಳಲ್ಲಿ ಸಂಚರಿಸುವವರ ಸಂಖ್ಯೆ, ಜನರ ಓಡಾಟ ಪ್ರಮಾಣವನ್ನು ಲೆಕ್ಕ ಹಾಕಿ ಈ ಪಟ್ಟಿ ತಯಾರಿಸಲಾಗಿದೆ.

Advertisement

ಯುಎಇಯಲ್ಲಿ 7
ಯುಎಇಯಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು 7 ಮಂದಿಗೆ ಈ ವೈರಸ್‌ ತಗುಲಿದಂತಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.ಯೋಜನೆ ಕೈಬಿಟ್ಟ ಬಾಂಗ್ಲಾ ಭಾರತದ ಮಾದರಿಯಲ್ಲೇ ವುಹಾನ್‌ನಲ್ಲಿರುವ ತಮ್ಮ ದೇಶದ ನಾಗರಿಕರನ್ನು ವಾಪಸ್‌ ಕರೆತರಲು ಬಾಂಗ್ಲಾದೇಶವೂ ತೀರ್ಮಾನಿಸಿತ್ತು. ಆದರೆ ವುಹಾನ್‌ಗೆತೆರಳಲು ವಿಮಾನಗಳ ಸಿಬಂದಿ ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾ ಸರಕಾರ ತನ್ನ ನಿರ್ಧಾರ ಕೈಬಿಟ್ಟಿದೆ. ಬಾಂಗ್ಲಾದ 117 ನಾಗರಿಕರು ಚೀನದಲ್ಲಿ ಸಿಲುಕಿಕೊಂಡಿದ್ದಾರೆ.

ಚೀನ ಪ್ರಧಾನಿಗೆ ಮೋದಿ ಪತ್ರ
ಚೀನದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿರುವಂತೆಯೇ ರವಿವಾರ ಅಲ್ಲಿನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರಿಗೆ ಪತ್ರ ಬರೆದಿರುವ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಸವಾಲನ್ನು ಎದುರಿಸಲು ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಲು ಬಯಸಿರುವುದಾಗಿಯೂ ಹೇಳಿರುವ ಅವರು, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆಯ ಮಾತುಗಳನ್ನೂ ಆಡಿದ್ದಾರೆ. ಅಲ್ಲದೆ, ಭಾರತೀಯರನ್ನು ಸುರಕ್ಷಿತವಾಗಿ ವಾಪಸ್‌ ಕರೆತರಲು ನೆರವಾಗಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಭಣಗುಡುತ್ತಿವೆ ಚೈನೀಸ್‌ ರೆಸ್ಟೊರೆಂಟ್‌ಗಳು
ಗ್ರಾಹಕರಿಂದ ತುಂಬಿ ತುಳುಕುತ್ತಿದ್ದ ಚೈನೀಸ್‌ ರೆಸ್ಟೊ ರೆಂಟ್‌ಗಳಿಗೂ ಈಗ ಕೊರೊನಾ ಬಿಸಿ ತಟ್ಟಿದೆ. ಚೀನದಲ್ಲಿ ಕೊರೊನಾ ವೈರಸ್‌ ವಕ್ಕರಿಸಿದ ಬೆನ್ನಲ್ಲೇ ಭಾರತದಾದ್ಯಂತ ಚೈನೀಸ್‌ ರೆಸ್ಟೊರೆಂಟ್‌ಗಳತ್ತ ಗ್ರಾಹಕರು ಸುಳಿಯುತ್ತಿಲ್ಲ.

ನಾಳೆ ಗೌರವ್‌ ಬಿಡುಗಡೆ ?
ಉಳ್ಳಾಲ: ವರ್ಲ್ಡ್ ಡ್ರೀಮ್‌ ನೌಕೆಯಲ್ಲಿರುವ ಇಲ್ಲಿನ ಕುಂಪಲದ ಗೌರವ್‌ ಮತ್ತು ಇತರ ಸಿಬಂದಿಯನ್ನು ಫೆ. 11ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಹಡಗಿನಲ್ಲಿರುವ ಪ್ರವಾಸಿಗರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಸಿಬಂದಿಯ ಆರೋಗ್ಯ ಪರೀಕ್ಷೆ ಕೂಡ ಮುಕ್ತಾಯವಾಗಿದೆ. ಕೊನೆಯ ಸುತ್ತಿನ ತಪಾಸಣೆ ಬಳಿಕ ಫೆ. 11ರಂದು ಇಲ್ಲಿಂದ ಬಿಡುವ ಸಾಧ್ಯತೆ ಇದೆ ಎಂದು ಗೌರವ್‌ ಮನೆಯವರಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next